
ಪ್ರಗತಿವಾಹಿನಿ ಸುದ್ದಿ: ಅರ್ಜಂಟೀನಾ ಫುಟ್ ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಭಾರತಕ್ಕೆ ಆಗಮಿಸಿದ್ದು, ಕೋಲ್ಕತ್ತಾದಲ್ಲಿ ಮೆಸ್ಸಿ ಮೇನಿಯಾ ಅವಘಡಕ್ಕೆ ತಿರುಗಿದೆ.
ಫುಟ್ ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂಗೆ ಆಗಮಿಸಿದ್ದು, ಮೆಸ್ಸಿ ಅಭಿಮಾನಿಗಳು, ಫುಟ್ ಬಾಲ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಕಿಕ್ಕಿರಿದು ತುಂಬಿದ್ದಾರೆ. ಕ್ರೀಡಾಗಂಣದಲ್ಲಿ ನೂಕುನುಗ್ಗಲು ಉಂಟಾಗಿದೆ.
ಸಾಲ್ಟ್ ಲೇಕ್ ಸ್ಟೇಡಿಯಂ ಹಾಗೂ ಸ್ಟೇಡಿಯಂ ಸುತ್ತ ಭಾರಿ ಜನಸ್ತೋಮವೇ ನೆರೆದಿದೆ. ಸ್ಟೇಡಿಯಂ ನಲ್ಲಿ ಕೇವಲ 10 ನಿಮಿಷ ಮಾತ್ರ ಮೆಸ್ಸಿ ಇದ್ದರು. ಕ್ರೀಡಾಭಿಮಾನಿಗಳಿಗೆ ಸ್ಥಳದಿಂದ ತೆರಳುವಂತೆ ಅನೌನ್ಸ್ ಮಾಡುತ್ತಿದ್ದಂತೆ ರೊಚ್ಚಿಗೆದ್ದ ಅಭಿಮಾನಿಗಳು ಏಕಾಏಕಿ ಸ್ಟೇಡಿಯಂ ಒಳಗೆ ನುಗ್ಗಿದ್ದಾರೆ. ಅಲ್ಲಿದ್ದ ಕುರ್ಚಿ, ಪೀಠೋಪಕರಣಗಳನ್ನು ಒಡೆದು, ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲ್ಟ್ ಲೇಕ್ ಸ್ಟೇಡಿಯಂ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.
ಮೆಸ್ಸಿ ನೋಡಲೆಂದು ಟಿಕೆಟ್ ಪಡೆದು ಹೋದರೂ ನಮಗೆ ಮೆಸ್ಸಿ ನೋಡಲು ಅಧಿಕಾರಿಗಳು, ರಾಜಕಾರಣಿಗಳು ಬಿಟ್ಟಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟೇಡಿಯಂ ನಲ್ಲಿ ಮೆಸ್ಸಿ ಅಭಿಮಾನಿಗಳ ದಾಂಧಲೆಗೆ ಕ್ರೀಡಾಂಗಣ ಸಂಪೂರ್ಣ ಅಯೋಮಯವಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.




