ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಸಾಧನೆ
ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಯಶಸ್ವಿ ಲೀವರ (ಯಕೃತ) ಕಸಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನರ ಆರೋಗ್ಯ ಕಾಪಾಡುತ್ತ ಜೀವ ಉಳಿಸುವ ಮಹೊನ್ನತ ಕಾರ್ಯದಲ್ಲಿ ತೊಡಗಿರುವ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಈಗ ಮತ್ತೊಂದು ಯಶಸ್ಸಿನ ಗುರಿ ಮುಟ್ಟಿ, ಲೀವರ ಕಸಿ ಮಾಡುವದರ ಮೂಲಕ ಇನ್ನೊಬ್ಬರ ಬಾಳಿಗೆ ಸಂಜೀವಿನಿಯಾಗಿದೆ. ಮೆದುಳು ನಿಷ್ಕ್ರೀಯಗೊಂಡಿದ್ದ ಅಥಣಿಯ 30 ವರ್ಷದ ಯುವಕನ ಲೀವರ ಅನ್ನು ಹಾವೇರಿಯ 19 ವರ್ಷದ ಯುವಕನಿಗೆ ಮರುಜೋಡಣೆಗೊಳಿಸುವಲ್ಲಿ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದು, ಉತ್ತರ ಕರ್ನಾಟಕ, ಗೋವಾ ಹಾಗೂ ದ. ಮಹಾರಾಷ್ಟçದಲ್ಲಿ ಪ್ರಥಮ ಲೀವರ ಕಸಿಯಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಾನವನ ಅಂಗಾಂಗಳು ಸಂಪೂರ್ಣವಾಗಿ ಕಾರ್ಯ ಸ್ಥಗಿತಗೊಳಿಸಿದಾಗ ಅಂತಿಮ ಹಂತವೇ ಅಂಗಾಂಗ ಕಸಿ. ಅಂಗಾಂಗ ದಾನವು ಅಂಗ ವೈಫಲ್ಯಗೊಂಡ ರೋಗಿಗಳಿಗೆ ಹೊಸ ಜೀವನದ ಬಾಗಿಲು ತೆರೆದಿದೆ. ವೈದ್ಯ ವಿಜ್ಞಾನ ಸಾಕಷ್ಟು ಆವಿಷ್ಕಾರಗಳಿಂದ ಅಂಗಾಂಗ ದಾನದ ಪರಿಕಲ್ಪನೆ ಸಾಕಷ್ಟು ಜನಪ್ರಿಯವಾಗುತ್ತಿದ್ದು, ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರು ಯಾವುದೋ ಕಾರಣಕ್ಕೆ ಮೆದುಳು ನಿಷ್ಕ್ರೀಯಗೊಂಡಾಗ ಅಂಗಾಂಗಗಳನ್ನು ದಾನ ಮಾಡಲು ಸ್ವಇಚ್ಚೆಯಿಂದ ಉತ್ಸುಕರಾಗುತ್ತಿದ್ದಾರೆ. ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಅಂಗಾಂಗ ದಾನ ಮತ್ತು ಕಸಿ ಶಸ್ತ್ರಚಿಕಿತ್ಸೆಯು ದ್ವಿತೀಯ ಹಂತದ ನಗರಗಳಲ್ಲಿಯೂ ಸುಲಭವಾಗಿ ನಡೆಯುತ್ತಿದೆ. ಅದಕ್ಕೆಲ್ಲ ಕಾರಣ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ವೈದ್ಯ ವಿಜ್ಞಾನದ ಸೌಲಭ್ಯ.
ಮೆದುಳು ನಿಷ್ಕ್ರೀಯಗೊಂಡಾಗ ಆ ವ್ಯಕ್ತಿಯ ಉಳಿದ ಅಂಗಾಂಗಗಳು ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಅವರು ತಮ್ಮ ಅಂಗಾಂಗಳನ್ನು ಮಣ್ಣು ,ಸುಡುವದಾಗಲೀ ಮಾಡದೇ ಅಂಗಾಂಗಗಳನ್ನು ದಾನ ಮಾಡಿ ಇನ್ನೊಬ್ಬರ ಜೀವನ ಉಳಿಸಲು ಮುಂದೆ ಬರಬೇಕೆಂದು ಕರೆ ನೀಡಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನಡೆಸಲಾದ ಲೀವರ ಕಸಿ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಅಸ್ಟರ ಆಸ್ಪತ್ರೆಯು ಸಹಕಾರ ನೀಡಿದೆ. ಅಥಣಿಯ ಡಾ. ರವಿ ಪಾಂಗಿ ಅವರ ಅನ್ನಪೂರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 30 ವರ್ಷದ ವ್ಯಕ್ತಿಯ ಮೆದುಳು ನಿಷ್ಕ್ರೀಯಗೊಂಡಾಗ ಆ ರೋಗಿಯ ಲೀವರ ಅನ್ನು ತೆಗೆದು 19 ವರ್ಷದ ಯುಕನಿಗೆ ಜೋಡಿಸಲಾಗಿದ್ದು, ಯುವಕ ಸಂಪೂರ್ಣವಾಗಿ ಗುಣಮುಖಗೊಂಡಿದ್ದು, ಆಸ್ಪತ್ರೆಯು ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ. 10 ದಿನಗಳ ಬಳಿಕ ಆಸ್ಪತ್ರೆಯಿಂದ ಯುವಕ ಬಿಡುಗಡೆಗೊಳ್ಳುತ್ತಿದ್ದಾನೆ.
ಯಕೃತ್ತಿನ (ಲಿವರ)ಕಸಿ ಅತ್ಯಂತ ಕ್ಲಿಷ್ಟಕರವಾದ ಹಾಗೂ ತಾಂತ್ರಿಕವಾಗಿ ಸಂಧಿಗ್ನತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯಾಗಿದ್ದು, ಸಕಲ ವೈದ್ಯಕೀಯ ವ್ಯವಸ್ಥೆಯುಳ್ಳ ಆಸ್ಪತ್ರೆಯಲ್ಲಿ ನುರಿತ ತಜ್ಞಶಸ್ತ್ರಚಿಕಿತ್ಸಕರಿಂದ ಮಾತ್ರ ಲೀವರ ಕಸಿ ಮಾಡಲಾಗುತ್ತದೆ. ಸುಮಾರು 12-18 ಗಂಟೆಗಳ ಕಾಲ ಸುಧೀರ್ಘ ಶಸ್ತ್ರಚಿಕಿತ್ಸೆಗೆ ನುರಿತ ಸಿಬ್ಬಂದಿಗಳ ಅಗತ್ಯವಿರುತ್ತದೆ. ಈ ಮೊದಲು ಅಂಗಾಂಗಗಳ ಕಸಿಗಾಗಿ ಮೆಟ್ರೊ ಪಾಲಿಟಿನ್ ನಗರಗಳಾದ ಬೆಂಗಳೂರು, ಮುಂಬೈ ಮತ್ತು ಹೈದರಾಬಾದನಂತಹ ಮಹಾನಗರಗಳಿಗೆ ಹೋಗುವದಲ್ಲದೇ, ಅತ್ಯಧಿಕ ವೆಚ್ಚ ಭರಿಸಬೇಕಾಗುತ್ತಿತ್ತು. ಈಗ ಅದು ತಪ್ಪಿದೆ.
ಲೀವರ ಹಾಳಾಗುತ್ತಿದೆ ಎಂದು ತಿಳಿದಾಗ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಯನ್ನು ನೀಡಿದರೂ ಕೂಡ ಅದಕ್ಕೆ ಸ್ಪಂಧಿಸದೇ, ಸಂಪೂರ್ಣ ವಿಫಲವಾದಾಗ ಕೊನೆಯ ಹಂತವಾಗಿ ಪಿತ್ತಜನಕಾಂಗ ತನ್ನ ಕಾರ್ಯವನ್ನು ನಿಲ್ಲಿಸಿದಾಗ ಆ ರೋಗಿಗಳಿಗೆ ಯಕೃತ್ತಿನ ಕಸಿ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಮದ್ಯಪಾನ, ಮಧುಮೇಹ ಹಾಗೂ ಬೊಜ್ಜುತನದಿಂದ ಕೊಬ್ಬಿನಂದಾಗಿ ಲೀವರ ಹಾಳು, ಹೆಪಾಟೈಟಿಸ್ ಬಿ ಮತ್ತು ಸಿ., ಸೋಂಕು, ಜೆನೆಟಿಕ್ ಮತ್ತು ಮೆಟಬಾಲಿಕ್ ಲಿವರ್ ಡಿಸೀಸ್. ನಿರಂತರವಾಗಿ ಔಷಧಿಗಳ ಸೇವನೆಯಿಂದಲೂ ಪಿತ್ತಜನಕಾಂಗದ ವೈಫಲ್ಯ ಕಂಡು ಬರುತ್ತದೆ. ಭಾರತದಲ್ಲಿ ಸುಮಾರು ಪ್ರತಿವರ್ಷ 50 ಸಾವಿರಕ್ಕೂ ಅಧಿಕ ರೋಗಿಗಳಿಗೆ ಯಕೃತ್ತಿನ ಕಸಿ ಬೇಕಾಗಿದ್ದು, ದೇಶದ ಕೇವಲ 25 ಕೇಂದ್ರಗಳಲ್ಲಿ ವರ್ಷಕ್ಕೆ 800 ರಿಂದ ಸಾವಿರ ಕಸಿಗಳನ್ನು ಮಾತ್ರ ನೆರವೇರಿಸಲಾಗುತ್ತದೆ.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅತ್ಯಂತ ಕಡಿಮೆ ದರದಲ್ಲಿ ನಮ್ಮ ಜನರಿಗೆ ಈ ವೈದ್ಯಕೀಯ ಸೌಲಭ್ಯ ಲಭಿಸುವಂತೆ ಮಾಡುವುದು ನಮ್ಮ ಕರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಕನಸಾಗಿತ್ತು. ಅದರಂತೆ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆಯೊಂದಿಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಎಂ ವಿ ಜಾಲಿ, ಬಹುವಿಧ ಅಂಗಾಂಗ ಘಟಕದ ಅಧ್ಯಕ್ಷರಾದ ಡಾ. ಆರ್.ಬಿ. ನೇರ್ಲಿ ಹಾಗೂ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಸಹಯೋಗದೊಂದಿಗೆ ಅಗತ್ಯವಾದ ಮೂಲಸೌಲಭ್ಯ, ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಿಕೆ ಹಾಗೂ ಜ್ಞಾನಾಧಾರಿತ ಕೌಶಲ್ಯ ಹಂಚಿಕೊಳ್ಳುವದು ಸೇರಿದೆ.
ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಲೀವರ ಕಸಿ ಮಾಡಲಾಗಿದ್ದು, ಗ್ಯಾಸ್ಟ್ರೋ ಎಂಟ್ರಾಲಾಜಿ ವಿಭಾಗದ ಡಾ. ಸಂತೋಷ ಹಜಾರೆ ಹಾಗೂ ಡಾ. ಸುದರ್ಶನ ಚೌಗುಲೆ ಅವರ ನೇತೃತ್ವದ ತಂಡವು ಬೆಂಗಳೂರಿನ ಅಸ್ಟರ ಆಸ್ಪತ್ರೆಯ ಡಾ. ಸೋನಲ್ ಆಸ್ಥಾನಾ ಅವರು ಯಶಸ್ವಿ ಲೀವರ ಕಸಿ ಮಾಡುವಲ್ಲಿ ಸಾಧನೆಗೈದಿದ್ದಾರೆ. ಅರವಳಿಕೆ ತಜ್ಞವೈದ್ಯರಾದ ಡಾ. ಅರುಣ, ಡಾ. ರಾಜೇಶ ಮಾನೆ, ಡಾ ಮಂಜುನಾಥ ಪಾಟೀಲ, ಅವರು ಸಹರಿಸಿದರು. ಜೀವಸಾರ್ಥಕಥೆ, ಮೋಹನ್ ಫೌಂಡೇಶನ್ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಕಸಿ ಸಂಯೋಜಕರ ತಂಡದ ಅಗತ್ಯ ಸಹಕಾರ, ಬೆಂಬಲ ನೀಡಿತು.
ಮೆಟ್ರೊ ಪಾಲಿಟಿನ್ ನಗರಗಳ ಆಸ್ಪತ್ರೆಗೆ ಹೋಲಿಸಿದರೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಕೇವಲ ಶೇ. 50 ವೆಚ್ಚದಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಅಂಗಾಂಗ ಕಸಿಗೆ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಯಮಾನ ಭಾರತ, ಕಾರ್ಮಿಕ ವಿಮಾ(ಇಎಸ್‌ಐ) ಹಾಗೂ ಇನ್ನೀತರ ವಿಮಾ ಯೋಜನೆಗಳಲ್ಲಿ ಧನಸಹಾಯ ಲಭ್ಯವಿದೆ.
ಯಶಸ್ವಿ ಲೀವರ ಕಸಿ ಶಸ್ತ್ರಚಿಕಿತ್ಸೆ, ನೆರವೇರಿಸಿದ ವೈದ್ಯರ ತಂಡ ಹಾಗೂ ದಾನಿಯ ಕುಟುಂಬ ಸದಸ್ಯರ ಕಾರ‍್ಯವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಆರ್ ಬಿ ನೇರ್ಲಿ, ಡಾ. ಸಂತೋಷ ಹಜಾರೆ, ಡಾ. ಎಂ ವಿ ಜಾಲಿ, ಬೆಂಗಳೂರಿನ ಅಸ್ಟರ ಆಸ್ಪತ್ರೆಯ ಕಸಿ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಸೋನಲ ಆಸ್ಥಾನ, ಡಾ. ಸುದರ್ಶನ ಚೌಗಲೆ, ಡಾ. ಮಂಜುನಾಥ ಪಾಟೀಲ, ಅಥಣಿಯ ಡಾ. ರವಿ ಪಾಂಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ PFI ಸಂಚು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ