
ಪ್ರಗತಿವಾಹಿನಿ ಸುದ್ದಿ; ಮಂಡ್ಯ: ರಾಜ್ಯ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದೇ ಅನೇಕ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಈ ಮೂಲಕ ಪರೀಕ್ಷೆ ಹೆಸರಿನಲ್ಲಿ ತರಗತಿ ಆರಂಭಿಸಿ ಮಕ್ಕಳ ಜೀವದ ಜೊತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆಟವಾಡುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತಿವೆ.
ಜೂ.25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಒಡೆತನದ ವಿವೇಕ ವಿದ್ಯಾಸಂಸ್ಥೆಯನ್ನೂ ತೆರೆಯಲಾಗಿದ್ದು, ಮಕ್ಕಳನ್ನು ಕ್ಲಾಸಿನಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಅಲ್ಲದೆ ರೋಟರಿ ಎಜುಕೇಶನ್ ಸೊಸೈಟಿ, ಆದರ್ಶ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಬಹುತೇಕ ಶಾಲೆಗಳನ್ನು ತೆರೆಯಲಾಗಿದೆ. ಸಾಮಾಜೀಕ ಅಂತರ ಕಾಯ್ದುಕೊಂಡು ಪಾಠ ಮಾಡಲಾಗುತ್ತಿದೆ. ಆದರೆ ಶಿಕ್ಷಕರು ಮಾತ್ರ ಮಾಸ್ಕ್ ಧರಿಸದೆ ಬೋಧಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಶಾಲೆಗಳು ಆರಂಭವಾಗಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಹಲವು ತರಗತಿಗಳು ನಡೆಯುತ್ತಿವೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ಶಾಲೆ ತೆರೆಯಲು ಅನುಮತಿ ಇಲ್ಲದಿದ್ದರೂ ಸರ್ಕಾರದ ನಿಯಮ ಉಲ್ಲಂಘಿಸಿ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಡ್ಯ ಡಿಡಿಪಿಐ, ಈಗ ಪರೀಕ್ಷೆ ಬರುತ್ತಿರುವುದರಿಂದ ಹಾಲ್ ಟಿಕೆಟ್ ತೆಗೆದುಕೊಳ್ಳಲು, ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಜತೆ ಚರ್ಚೆ ನಡೆಸಲು ಶಾಲೆಗಳಿಗೆ ಬಂದಿರಬಹುದು. ಆದರೆ ಈಗ ಶಾಲೆ, ಕಾಲೇಜುಗಳನ್ನು ಆರಂಭಿಸಲು ಯಾವುದೇ ಅನುಮತಿ ನೀಡಲಾಗಿಲ್ಲ. ಒಂದು ವೇಳೆ 15 ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿ ಪಾಠ ಮಾಡಿದರೆ ಅದರಿಂದ ಯಾವುದೇ ತೊಂದರೆಯಾಗದು ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ