ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಇರುವವರು ಬಿಟ್ಟು ಹೊರಗಿನಿಂದ ಬರುವವರಿಗೆ ಪ್ರವೇಶಕ್ಕೆ ಹಲವೆಡೆ ನಿಷೇಧ ಹೇರಲಾಗಿದೆ. ಈ ನಡುವೆ ವಿದ್ಯಾರ್ಥಿಯೊಬ್ಬ ಸೂಟ್‍ಕೇಸ್‍ನೊಳಗೆ ಗೆಳೆಯನನ್ನ ಸಾಗಿಸುವಾಗ ಸಿಕ್ಕಿ ಬಿದ್ದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ. ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಿದ್ದನು. ಲಾಕ್‍ಡೌನ್ ಪರಿಣಾಮ ವಿದ್ಯಾರ್ಥಿಗೆ ಬೋರ್ ಆಗಿದೆ. ಹಾಗಾಗಿ ತನ್ನ ಗೆಳೆಯನನ್ನು ಕರೆದುಕೊಂಡು ಬರುವುದಾಗಿ ಸಮುಚ್ಚಯದ ಅಸೋಸಿಯೇಷನ್ ಬಳಿ ಹೇಳಿದ್ದ. ಆದರೆ ಅಸೋಸಿಯೇಷನ್ ಮಾತ್ರ ನಿಯಮದಂತೆ ನಿರಾಕರಣೆ ಮಾಡಿತ್ತು.
ಯುವಕ ಹೇಗಾದರೂ ಮಾಡಿ ಗೆಳೆಯನನ್ನು ಕರೆದುಕೊಂಡು ಬರಬೇಕು ಎಂದು ಹೊಸ ಪ್ಲಾನ್ ಮಾಡಿದ್ದಾನೆ. ಅಂತೆಯೇ ಗೆಳೆಯನನ್ನು ಸೂಟ್ ಕೇಸ್‍ನಲ್ಲಿ ತುಂಬಿಸಿ ಕರೆ ತರುವ ಪ್ರಯತ್ನ ಮಾಡಿದ್ದಾನೆ. ಹೀಗೆ ತರುವಾಗ ಸೂಟ್‍ಕೇಸ್ ಅಲುಗಾಡಿದೆ. ಇದನ್ನು ಗಮನಿಸಿದ ಸಾಮುಚ್ಛಯದವರು ಸೂಟ್‍ಕೇಸ್ ತೆರೆಯುವಂತೆ ಹೇಳಿದ್ದಾರೆ.
ಸೂಟ್‍ಕೇಸ್ ತೆರೆದಾಗ ಅದರೊಳಗೆ ಗೆಳೆಯ ಇರುವುದು ಬಹಿರಂಗವಾಗಿದೆ. ಮಾಹಿತಿ ತಿಳಿದ ಕದ್ರಿ ಪೊಲೀಸರು ಇಬ್ಬರನ್ನೂ ಸೂಟ್‍ಕೇಸ್ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ