
https://youtu.be/Ng7ZwJNOwHA
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಸಿಲುಕಿದ್ದ ಕನ್ನಡಿಗರನ್ನು ಇಂದು ತಾಯ್ನಾಡಿಗೆ ಕರೆ ತರಲಾಯಿತು. ಆಪರೇಷನ್ ವಂದೇ ಭಾರತ್ ಮೆಗಾ ಏರ್‌ಲಿಫ್ಟ್ ಮೂಲಕ 326 ಕನ್ನಡಿಗರು ರಾಜ್ಯಕ್ಕೆ ಆಗಮಿಸಿದ್ದಾರೆ.
ವಿಶೇಷ ವಿಮಾನದ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಸುಕಿನ ಜಾವ 4.47ಕ್ಕೆ ಕನ್ನಡಿಗರು ಆಗಮಿಸಿದ್ದಾರೆ. ಮೊದಲಿಗೆ ವಿಮಾನ ಲಂಡನ್‍ನಿಂದ ದೆಹಲಿಗೆ ಬಂದಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದೆ.
ವಿದೇಶಗಳಿಂದ ಬಂದ ಎಲ್ಲಾ ಕನ್ನಡಿಗರನ್ನು ಏರ್ಪೋರ್ಟ್ನಲ್ಲೇ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಟೈಸೇಷನ್ಗೆ ಒಳಪಡಿಸಲಾಯಿತು. ಜೊತೆಗೆ ಆರೋಗ್ಯ ಇಲಾಖೆ ವತಿಯಿಂದ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಯಿತು. ಅಲ್ಲಿಂದ ಪ್ರಯಾಣಿಕರನ್ನ 14 ದಿನಗಳ ಕಾಲ ಕ್ವಾರಂಟೈನ್ ಮಾಡಲು ಬಿಎಂಟಿಸಿ ಬಸ್ ಮೂಲಕ ನಿಗದಿತ ಸ್ಥಳಕ್ಕೆ ಪೊಲೀಸರು ಕರೆದೊಯ್ದರು.
ಹೊರ ರಾಜ್ಯದಲ್ಲಿರೋ 56 ಸಾವಿರ ಮಂದಿ ಕನ್ನಡಿಗರ ಪೈಕಿ, 4 ಸಾವಿರಕ್ಕೂ ಹೆಚ್ಚು ಕನ್ನಡಿಗರು ಶೀಘ್ರದಲ್ಲೇ ತವರಿಗೆ ಬರಲಿದ್ದಾರೆ. ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗಕ್ಕೆ ತೆರಳಿದವರು ಈಗಾಗಲೇ ಆಯಾ ಜಿಲ್ಲೆ ಡಿಸಿ, ನೋಡಲ್ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ವಿದೇಶದಿಂದ ತವರಿಗೆ ಬರುವುದಕ್ಕೆ ಸುಮಾರು 6 ಸಾವಿರದ 100 ಕನ್ನಡಿಗರು ಸಿದ್ಧರಿದ್ದಾರೆ. ಇವರು ಉಳಿದುಕೊಳ್ಳಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹೋಟೆಲ್ ವ್ಯವಸ್ಥೆ ಮಾಡಲಾಗಿದೆ. 18 ಪಂಚತಾರಾ ಹೋಟೆಲ್, 25 ತ್ರಿ ಸ್ಟಾರ್ ಹೋಟೆಲ್‍ಗಳು ಬುಕ್ ಮಾಡಲಾಗಿದೆ. ಸುಮಾರು 6008 ರೂಂ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಊಟ ತಿಂಡಿಗೆ ವ್ಯವಸ್ಥೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ