Cancer Hospital 2
Laxmi Tai Society2
Beereshwara add32

*ಲೋಕಸಭೆ ಚುನಾವಣೆ:* *ಕಾಂಗ್ರೆಸ್ – ಬಿಜೆಪಿ; ಯಾರು ಹಿಂದೆ ? ಯಾರು ಮುಂದೆ?* *ಇಲ್ಲಿದೆ ಸಮಗ್ರ ಮಾಹಿತಿ*

Anvekar 3

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಸಭಾ ಚುನಾವಣೆಗೆ ಇನ್ನು ಕೇವಲ 3 ತಿಂಗಳು ಬಾಕಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಆಕಾಂಕ್ಷಿಗಳ ಓಡಾಟ ಜೋರಾಗಿದೆ. ಯಾವುದೇ ಪಕ್ಷ ತನ್ನ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಬಿಜೆಪಿ ಹಾಲಿ ಸಂಸದರಿಗೇ ಟಿಕೆಟ್ ನೀಡುವ ಕುರಿತು ಸಹ ಸ್ಪಷ್ಟಪಡಿಸಿಲ್ಲ.

ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಉಭಯ ಪಕ್ಷಗಳಲ್ಲಿ ಖಾತರ ಕಾಣುತ್ತಿದೆ. ಸಧ್ಯಕ್ಕೆ ಎರಡೂ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿದರೆ, ಕಸಿದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಹಿಂದೆ ಗೆದ್ದ ವಿಶ್ವಾಸ ಬಿಜೆಪಿಯಲ್ಲಿದ್ದರೆ, ಕಳೆದ ವಿಧಾನಸಭೆ ಚುನಾವಣೆಯ ಭರ್ಜರಿ ಗೆಲವಿನ ಬಲ ಕಾಂಗ್ರೆಸ್ ಗಿದೆ.

ಹಾಗೆ ನೋಡಿದರೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರಲ್ಲಿ ದೊಡ್ಡ ಮಟ್ಟದ ಭಿನ್ನಮತ ಕಾಣಿಸಿದ್ದರೆ, ಕಾಂಗ್ರೆಸ್ ಪಕ್ಷ ಸಂಘಟನಾತ್ಮಕವಾಗಿ ಇನ್ನೂ ಚುರುಕುಗೊಂಡಂತೆ ಕಾಣುತ್ತಿಲ್ಲ. ಬಿಜೆಪಿಯ ನಾಯಕರು ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳಲಾರದಷ್ಟು ದೂರ ಸರಿದಿದ್ದರೆ, ಕಾಂಗ್ರೆಸ್ ಶಾಸಕರು ವಿಧಾನಸಭೆ ಚುನಾವಣೆಯ ನಂತರ ಸಂಘಟನೆ ದೃಷ್ಟಿಯಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇ ಅಪರೂಪ.

ಜಿಲ್ಲೆಯಲ್ಲಿ 18 ವಿಧಾನ ಸಭೆ ಕ್ಷೇತ್ರಗಳಿವೆ. ಇವುಗಳಲ್ಲಿ 2 ಕ್ಷೇತ್ರಗಳು ಕೆನರಾ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇನ್ನುಳಿದವುಗಳ ಪೈಕಿ ತಲಾ 8 ಕ್ಷೇತ್ರಗಳು ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಗೆ ಬರುತ್ತವೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಪೈಕಿ 11ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 7ರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ:

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿಯ ಅಣ್ಣಾ ಸಾಹೇಬ ಜೊಲ್ಲೆ ಗೆಲುವು ಸಾಧಿಸಿದ್ದಾರೆ. ಜೊಲ್ಲೆ ಅಭಿವೃದ್ಧಿ, ಸಂಘಟನೆ, ಉದ್ಯೋಗ ಸೃಷ್ಟಿ ಮತ್ತು ಪಕ್ಷದ ಹೈಕಮಾಂಡ್ ಜೊತೆ ಸಂಬಂಧ ಎಲ್ಲದರಲ್ಲೂ ಮುಂದಿದ್ದಾರೆ. ಕ್ಷೇತ್ರದ ಕೆಲವು ಕಡೆ ತಲುಪಿಲ್ಲ ಎನ್ನುವ ಕೂಗು ಕೆಲವು ತಿಂಗಳ ಹಿಂದೆ ಇತ್ತಾದರೂ ನಂತರದಲ್ಲಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಟಿಕೆಟ್ ಉಳಿಸಿಕೊಳ್ಳುವುದು ಅವರಿಗೆ ಕಷ್ಟವಾಗುವುದಿಲ್ಲ ಎನ್ನುವ ಮಾತು ಪಕ್ಷದ ವಲಯದಲ್ಲಿದೆ.

ಆದರೆ ಮಾಜಿ ಸಂಸದ ರಮೇಶ ಕತ್ತಿ ಮತ್ತು ಸಕ್ಕರೆ ಉದ್ಯಮಿ ಅಮಿತ್ ಕೋರೆ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದಾರೆ. ಹಾಲಿ ಸಂಸದರಿರುವಾಗಲೇ ಬೇರೆಯವರು ಬಹಿರಂಗವಾಗಿಯೇ ಪ್ರಯತ್ನ ನಡೆಸಿರುವುದು ಕುತೂಹಲ ಮೂಡಿಸಿದೆ. ರಮೇಶ ಕತ್ತಿಗೆ ಟಿಕೆಟ್ ನೀಡದಿದ್ದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಜಿಗಿಯಬಹುದು ಎನ್ನುವ ಮಾತು ಸಹ ಜೋರಾಗಿದೆ. ಕಾಂಗ್ರೆಸ್ ಅವರಿಗೆ ಮಣೆ ಹಾಕಲಿದೆಯೇ ಎನ್ನುವುದು ಕೂಡ ಖಚಿತವಿಲ್ಲ.

ಕಾಂಗ್ರೆಸ್ ನಲ್ಲಿ ಮಾಜಿ ಸಂಸದ, ಹಾಲಿ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹೆಸರು ಮುಂಚೂಣಿಯಲ್ಲಿದೆ. ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಸೇರಿದಂತೆ ಇನ್ನೂ 2 -3 ಜನ ಸಹ ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ಪ್ರಕಾಶ ಹುಕ್ಕೇರಿ ಕಡೆಗಿದೆ ಎನ್ನುವ ಮಾತು ಸಹ ಕೇಳಿಬರುತ್ತಿದೆ.

ಬೆಳಗಾವಿಯಲ್ಲಿ ಲಿಂಗಾಯತರಿಗೆ, ಚಿಕ್ಕೋಡಿಯಲ್ಲಿ ಕುರುಬರಿಗೆ ಟಿಕೆಟ್ ಕೊಡಬೇಕೆನ್ನುವ ಬೇಡಿಕೆಯನ್ನು ಹೈಕಮಾಂಡ್ ಮುಂದಿಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಒಂದು ಹಂತದಲ್ಲಿ ಹೇಳಿದ್ದರು. ಆದರೆ ಈ ಬೇಡಿಕೆಗೆ ಪಕ್ಷ ಒಪ್ಪುವುದೇ ಎನ್ನುವ ಪ್ರಶ್ನೆಗೆ ಸಧ್ಯಕ್ಕಂತೂ ಉತ್ತರವಿಲ್ಲ. ಒಟ್ಟೂ 6 ಜನರು ಸ್ಪರ್ಧಿಸಲು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರ:

ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಯ ಮಂಗಲಾ ಅಂಗಡಿ ಹಾಲಿ ಸಂಸದೆ. ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ಸ್ಥಾನ ಕೆರವಾದಾಗ ಕೊನೆಯ ಕ್ಷಣದಲ್ಲಿ ಅನುಕಂಪದ ಓಟಿನ ಬಲಕ್ಕಾಗಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ವಿರುದ್ಧ ಕೇವಲ 5 ಸಾವಿರ ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು.

Emergency Service

ಆದರೆ ಈ ಬಾರಿ ಮಂಗಲಾ ಅಂಗಡಿಗೆ ಟಿಕೆಟ್ ಅನುಮಾನ ಎನ್ನುವ ಮಾತು ಪಕ್ಷದ ವಲಯದಲ್ಲೇ ಜೋರಾಗಿತ್ತು. ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಕೆಲವರು ಬಹಿರಂಗವಾಗಿಯೇ ಹೇಳಿಕೆಯನ್ನೂ ನೀಡಿದ್ದರು. ಆದರೆ ಸಧ್ಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿದ್ದರಿಂದ ಅಂಗಡಿ ಕುಟುಂಬದ ಬಲ ಜಾಸ್ತಿಯಾಗಿದೆ. ಮಂಗಲಾ ಅಂಗಡಿ ಅವರಿಗಲ್ಲದಿದ್ದರೂ ಅವರ ಪುತ್ರಿಯನ್ನು ಪರಿಗಣಿಸಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

ಈ ಮಧ್ಯೆ, ವಿಧಿನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಕಳೆದ 6 -7 ತಿಂಗಳಿನಿಂದ ಕ್ಷೇತ್ರದಲ್ಲಿ ಜೋರಾಗಿ ಓಡಾಡುತ್ತಿದ್ದಾರೆ. ಅನೇಕ ಬಾರಿ ದೆಹಲಿಗೂ ಹೋಗಿ ಬಂದಿದ್ಜಾರೆ. ಈ ಬಾರಿ ಟಿಕೆಟ್ ಪಡೆಯಲೇ ಬೇಕೆಂದು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ. ಇವರ ಜೊತೆಗೆ ಶಂಕರಗೌಡ ಪಾಟೀಲ, ಅನಿಲ ಬೆನಕೆ, ಸಂಜಯ ಪಾಟೀಲ ಮತ್ತಿತರರೂ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ನಾಲ್ವರು ಆಸಕ್ತಿ ತೋರಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಕಿರಣ ಸಾಧುನವರ್ ಮತ್ತು ವಿನಯ ನಾವಲಗಟ್ಟಿ ಬಹಿರಂಗವಾಗಿಯೇ ಪ್ರಯತ್ನ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹೆಸರು ಒಂದು ಹಂತದಲ್ಲಿ ಕೇಳಿಬಂದಿತ್ತಾದರೂ, ನಮ್ಮ ಕುಟುಂಬದಿಂದ ಯಾರಿಗೂ ಟಿಕೆಟ್ ಕೇಳಿಲ್ಲ ಎಂದು ಸತೀಶ್ ತಿಳಿಸಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ಟಿಕೆಟ್ ಕೇಳಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರಾದರೂ ಲಕ್ಷ್ಮೀ ಹೆಬ್ಬಾಳಕರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಧ್ಯ ಬಿಜೆಪಿಯಲ್ಲಿರುವ ಡಾ.ಗಿರೀಶ್ ಸೋನವಾಲ್ಕರ್ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಈ ಕುರಿತು ಅವರು ಈಗಾಗಲೆ ಸಚಿವದ್ವಯರನ್ನೂ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಒಂದು ಹಂತದಲ್ಲಿ ಅವರ ಬಗ್ಗೆ ಒಲವು ತೋರಿಸಿದ್ದಾರೆ ಎನ್ನುವ ಸುದ್ದಿಯೂ ಹೊರಬಿದ್ದಿತ್ತು. ಆದರೆ ಅವರು ಈವರೆಗೂ ಕಾಂಗ್ರೆಸ್ ಸೇರದಿರುವುದರಿಂದ ಪಕ್ಷ ಎಷ್ಟರಮಟ್ಟಿಗೆ ಅವರನ್ನು ಪರಿಗಣಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಘಟನೆಯಲ್ಲಿ ಹಿಂದೆ:

ಹಾಲಿ ಎರಡೂ ಕ್ಷೇತ್ರಗಳ ಹಿಡಿತ ಹೊಂದಿರುವ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯ ಹೊಡೆತದಿಂದ ಇನ್ನೂ ಹೊರಬಂದಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 3 -4 ಸಭೆಗಳನ್ನು ನಡೆಸಿದೆಯಾದರೂ ಪಕ್ಷದ ನಾಯಕರ ಮಧ್ಯೆ ಇರುವ ಭಿನ್ನಮತವನ್ನು ಹೋಗಲಾಡಿಸಲು ಇನ್ನೂ ಸಾಧ್ಯವಾಗಿಲ್ಲ. ಜೊತೆಗೆ, ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿನ ಅಸಮಾಧಾನ ಮತ್ತಷ್ಟು ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಸಂಘ ಪರಿವಾರದ ಮುಖಂಡರು ಮಧ್ಯ ಪ್ರವೇಶಿಸುವವೆರಗೂ ಬಿಜೆಪಿ ಸಂಘಟನೆ ಬಲಗೊಳ್ಳುವ ಸಾಧ್ಯತೆ ಕಡಿಮೆ.

ಇನ್ನು, ಕಳೆದ ವಿಧಾನಸಭೆ ಚುನಾವಣೆ ಗೆಲುವಿನ ಅತಿ ವಿಶ್ವಾಸ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ಕೊಡದಂತೆ ಮಾಡಿದಂತಿದೆ. ಪ್ರಬಲವಾದ ಜಿಲ್ಲಾಧ್ಯಕ್ಷರಿಲ್ಲದಿರುವುದು ಸಹ ಕಾಂಗ್ರೆಸ್ ಸಂಘಟನಾತ್ಮಕವಾಗಿ ಹಿಂದೆ ಬೀಳಲು ಕಾರಣವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಒಮ್ಮೆಯೂ ಜಿಲ್ಲೆಯ ಎಲ್ಲ ಸಚಿವರು, ಶಾಸಕರನ್ನು ಸೇರಿಸಿ ಸಂಘಟನೆ ಕುರಿತು ಚರ್ಚಿಸಿದಂತೆ ಕಾಣುತ್ತಿಲ್ಲ.

ಸಚಿವರಿಬ್ಬರು ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡಿರುವುದು ಹಾಗೂ ವಯಕ್ತಿಕ ಮಟ್ಟದಲ್ಲಿ ಆಕಾಂಕ್ಷಿಗಳು ಟಿಕೆಟ್ ಗಾಗಿ ಓಡಾಡುತ್ತಿರುವುದನ್ನು ಬಿಟ್ಟರೆ ಪಕ್ಷದ ಚಟುವಟಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಚುರುಕುಮುಟ್ಟಿಸುವ ಕೆಲಸವನ್ನು ಹೈಕಮಾಂಡ್ ಮಾಡದಿದ್ದಲ್ಲಿ ಜಿಲ್ಲಾ ಘಟಕ ನಿದ್ದೆಯಿಂದ ಎದ್ದೇಳುವುದು ಕಷ್ಟ.

Gokak Jyotishi add 8-2
Bottom Add3
Bottom Ad 2

You cannot copy content of this page