ಪ್ರಗತಿವಾಹಿನಿ ಸುದ್ದಿ, ನವದೆಹಲಿ : ಬಹು ನಿರೀಕ್ಷಿತ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣೆ ಆಯೋಗ ಶನಿವಾರ 2024 – 2029ರ ಅವಧಿಯ ಲೋಕಸಭೆಗಾಗಿ ಚುನಾವಣೆ ದಿನಾಂಕವನ್ನು ಪ್ರಕಟಿಸಿದೆ.
ಮುಖ್ಯ ಚುನಾವಣೆ ಆಯುಕ್ತ ರಾಜೀವ ಕುಮಾರ ಗುಪ್ತಾ ಪತ್ರಿಕಾಗೋಷ್ಟಿಯಲ್ಲಿ ಚುನಾವಣೆಯ ಪೂರ್ಣ ಮಾಹಿತಿಯನ್ನು ನೀಡಿದರು. ದೇಶದ ಒಟ್ಟೂ 543 ಕ್ಷೇತ್ರಗಳಿಗೆ ಹಾಗೂ ಕರ್ನಾಟಕದಲ್ಲಿ 28 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಲೋಕಸಭೆ ಚುನಾವಣೆ ಮೊದಲ ಹಂತ 21 ರಾಜ್ಯಗಳಲ್ಲಿ ಏಪ್ರಿಲ್ 19, 2ನೇ ಹಂತ ಏಪ್ರಿಲ್ 26, 3ನೇ ಹಂತ ಮೇ 7ರಂದು ಮತದಾನ ನಡೆಯಲಿದೆ. 4ನೇ ಹಂತ ಮೇ 13, 5ನೇ ಹಂತ ಮೇ 20ರಂದು ಮತದಾನ ನಡೆಯಲಿದೆ. 6ನೇ ಹಂತ ಮೇ 25ರಂದು, 7ನೇ ಹಂತ ಜೂನ್ 1 ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ 2ನೇ ಹಂತ ಏಪ್ರಿಲ್ 26 ಮತ್ತು 4ನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ.
ದಕ್ಷಿಣ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಉತ್ತರ ಕರ್ನಾಟಕದ 14 ಕ್ಷೇತ್ರದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ. ಬೆಳಗಾವಿಯಲ್ಲಿ ಮೇ 7ರಂದು ಮತದಾನ ನಡೆಯಲಿದೆ.
ಜೂನ್ 4ರಂದು ರಾಷ್ಟ್ರಾದ್ಯಂತ ಮತ ಎಣಿಕೆ ನಡೆಯಲಿದೆ.
ಲೋಕಸಭೆ ಚುನಾವಣೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬಿಹಾರ, ಗುಜರಾತ್, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ಉಪಚುನಾವಣೆ ವಿಧಾನಸಭೆ ಉಪಚುನಾವಣೆಗಳು ಸಹ ಲೋಕಸಭೆ ಚುನಾವಣೆ ಜೊತೆಗೇ ನಡೆಯಲಿವೆ. ಆಂದ್ರಪ್ರದೇಶ ವಿಧಾನಸಭೆಗೆ ಮೇ 13ರಂದು ಚುನಾವಣೆ ನಡೆಯಲಿದೆ.
ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ರಂದು ಮುಕ್ತಾಯವಾಗಲಿದೆ. ಕೆಲವು ರಾಜ್ಯಗಳ ವಿಧಾನಸಭೆ ಅವಧಿ ಕೂಡ ಜೂನ್ 24ರಂದು ಮುಕ್ತಾಯವಾಗಲಿದೆ. 96.8 ಕೋಟಿ ಮತದಾರರು, 49.7 ಕೋಟಿ ಪುರುಷ ಮತ್ತು 47.1 ಕೋಟಿ ಮಹಿಳಾ ಮತದಾರರು, 1.8 ಕೋಟಿ ಹೊಸ ಮತದಾರರು, 2.18 ಲಕ್ಷ ಶತಾಯುಷಿ ಮತದಾರರು, 82 ವರ್ಷ ದಾಟಿದ 85 ಲಕ್ಷ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. 85 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವದು.
12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. 10.5 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮತಗಟ್ಟೆಗಳಲ್ಲಿ ಎಲ್ಲ ಮೂಸಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. 1.5 ಕೋಟಿ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ನಿಷ್ಪಕ್ಷಪಾತ ಮತ್ತು ಶಾಂತಿಯುತ ಚುನಾವಣೆಗೆ ಚುನಾವಣೆ ಆಯೋಗ ಸಜ್ಜಾಗಿದೆ, ಹಿಂಸಾಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಅಕ್ರಮವಾಗಿ ಹಣ ಸಾಗಿಸಿದರೆ, ಹಣ ಹಂಚಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, 2100 ವೀಕ್ಷಕರನ್ನು ನೇಮಕ ಮಾಡಲಾಗುವುದು ಎಂದು ರಾಜೀವಕುಮಾರ ಗುಪ್ತಾ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ