Kannada NewsKarnataka NewsLatestPolitics

*ಬುದ್ದ, ಬಸವ, ಅಂಬೇಡ್ಕರ್ ಆಶಯಕ್ಕೆ ತಕ್ಕಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಬುದ್ದ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಗೆ ತಕ್ಕಂತೆ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬಡವರಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಸರ್ಕಾರ ಇರುವವರೆಗೂ ನಿರಂತರವಾಗಿ ನಡೆಯಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೈಲಹೊಂಗಲದ ಹೊಸೂರು, ಮಲ್ಲೂರ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ಯೋಜನೆಗಳು ನಿಲ್ಲಿಸುವುದಿಲ್ಲ. ಇದು ಸರ್ಕಾರದ ಪಾಲಿಗೆ ಪುಣ್ಯದ ಕಾರ್ಯ. ಬಡವರ ಹಸಿವನ್ನ ನೀಗಿಸುತ್ತೀವೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಚಿವರು ತಿರುಗೇಟು ನೀಡಿದರು. ಬಿಜೆಪಿ- ಜೆಡಿಎಸ್ ನಾಯಕರು ಅನಾವಶ್ಯಕವಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬೆಳಗಾವಿ ಸ್ವಾಭಿಮಾನಗಳ ಜಿಲ್ಲೆ. ಸಂಗೊಳ್ಳಿ ರಾಯಣ್ಣ‌ನ ತವರೂರು. ಇಂಥ‌ ಜಿಲ್ಲೆಗೆ ಬೇರೆ ಜಿಲ್ಲೆಯ ವ್ಯಕ್ತಿ ಬೇಕಾ ಎಂದು ಪ್ರಶ್ನಿಸಿದರು. ಜಿಲ್ಲೆಯ ಮನೆ ಮಗನನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಸಚಿವರು ಹೇಳಿದರು. ಕಳೆದ ಬಾರಿ ನಮ್ಮ ಸರ್ಕಾರ ಇಲ್ಲದಿದ್ದರೂ ನಾನು ಬೆಳಗಾವಿ ಗ್ರಾಮೀಣ, ಮಹಾಂತೇಶ್ ಕೌಜಲಗಿ ಅವರು ಬೈಲಹೊಂಗಲ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದೆವು. ಇದರ ಫಲವಾಗಿ ಕಳೆದ ವರ್ಷ ಜನ ನಮ್ಮನ್ನು ನಂಬಿ ಕೈಹಿಡಿದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಇದೇ ವೇಳೆ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಮಾತನಾಡಿ, ಬೈಲಹೊಂಗಲದಿಂದ ಮೂರು ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಶಕ್ತಿ ಯೋಜನೆಯ ಲಾಭ ಪಡೆಯುತ್ತಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದರು. ಇಂಥ ಯೋಜನೆಗಳ ವಿರುದ್ಧ ಬಿಜೆಪಿಯವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವುದು ವಿಪರ್ಯಾಸ ಎಂದು ಹೇಳಿದರು. ಕ್ಷೇತ್ರದ ಜನತೆ ಮೃಣಾಲ್‌ ಹೆಬ್ಬಾಳ್ಕರ್ ಅವರ ಕೈಹಿಡಿಯಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ನಮಗೆ ಕೈ ತಪ್ಪುತ್ತಿವೆ. ಒಂದೇ ಮಾತರಂ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ವರೆಗೆ ಮಾತ್ರ ತಲುಪಿತು. ಐಐಟಿ, ಹೈಕೋರ್ಟ್ ಪಕ್ಕದ ಜಿಲ್ಲೆಯ ಪಾಲಾದವು.ಈ ಬಾರಿ ನನ್ನನ್ನು ಗೆಲ್ಲಿಸಿ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಉಮೇಶ್ ಬೊಳೊತ್ತಿನ, ಸೋಮನಿಂಗ ಮೂಗಬಸವ, ಮುರುಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ್, ಗಂಗಾಧರ ಮೂಗಬಸವ ಉಪಸ್ಥಿತರಿದ್ದರು.

Related Articles

Back to top button