Belagavi NewsBelgaum NewsKannada NewsKarnataka NewsLatestPolitics

*ಪುತ್ರನಿಗೆ ಲೋಕಸಭಾ ಟಿಕೆಟ್ ವಿಚಾರ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪುತ್ರ ಮೃಣಾಲ್ ಅವರಿಗೆ ಟಿಕೆಟ್ ನೀಡಬೇಕೆಂದು ನಾನು ಹೇಳಿಲ್ಲ. ಆದರೆ, ಕ್ಷೇತ್ರದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಗೆಲವಿನ ಸಾಮರ್ಥ್ಯದ ಮಾನದಂಡದ ಮೇಲೆ ಅಭ್ಯರ್ಥಿ ಆಯ್ಕೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತಮ್ಮ ಪುತ್ರ ಮೃಣಾಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಅಥವಾ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಈ ಹಿಂದೆ ನನ್ನ ತಮ್ಮ ಚನ್ನರಾಜ ಹಟ್ಟಿಹೊಳಿಯವರು ಎಂಎಲ್ಸಿ ಆಗುವ ವೇಳೆಯಲ್ಲೂ ಜಿಲ್ಲೆಯ ಮುಖಂಡರು ಹಾಗೂ ಜನರ ಒತ್ತಾಸೆ ಇತ್ತು ಎಂದು ಹೇಳಿದರು.

ಈಗಲೂ ಜಿಲ್ಲೆಯ ಜನರ ಅಪೇಕ್ಷೆಯಂತೆ, ಎಲ್ಲಾ ಸಮುದಾಯಗಳ ಮುಖಂಡರು, ತಮ್ಮ ಪುತ್ರ ಸ್ಪರ್ಧಿಸಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ತಲೆಬಾಗುತ್ತೇವೆ ಎಂದರು.

ಚುನಾವಣೆಯಲ್ಲಿ ತಮ್ಮ ಪುತ್ರ ಮೃಣಾಲ್ ಅವರಿಗೆ ಪಕ್ಷ ಟಿಕೆಟ್ ನೀಡಿದರೂ ಅಥವಾ ಬೇರೆ ಯಾರಿಗೇ ಟಿಕೆಟ್ ನೀಡಿದರೂ ಬಹಳ ಪ್ರಾಮಾಣಿಕವಾಗಿ ಚುನಾವಣೆಯನ್ನು ಎದುರಿಸುತ್ತೇವೆ. ಈಗಾಗಲೇ ಯಾರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು ಎನ್ನುವ ಸಮೀಕ್ಷೆ ಕೂಡ ಮಾಡಲಾಗುತ್ತಿದೆ. ಅಂತಿಮವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ. ಟಿಕೆಟ್ ಪಡೆಯುವುದಕ್ಕಾಗಿಯೇ ಪೈಪೋಟಿ ನಡೆಸುವುದಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯನ್ನು ನಾವೆಂದು ಹಗುರವಾಗಿ ತೆಗೆದುಕೊಂಡಿಲ್ಲ. ಪ್ರತಿಯೊಂದು ಹಂತದಲ್ಲೂ ನಮ್ಮ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ವಿಧಾನಸಭೆ ಚುನಾವಣೆಗಿಂತ ಮುನ್ನ ಜನರಿಗೆ ಭರವಸೆ ಕೊಟ್ಟಂತಹ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದ ಆತ್ಮಸ್ಥೈರ್ಯದಿಂದ ಲೋಕಸಭಾ ಚುನಾವಣೆ ಮೂಲಕ ಜನರ ಬಳಿಗೆ ಹೋಗುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಕೋಳಿ ಬೆಸ್ತ ಸಮಾಜ ಮೀಸಲಾತಿ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮೊದಲು ದೇಶದಲ್ಲಿ ಬರೀ 33 ಕೋಟಿ ಜನಸಂಖ್ಯೆ ಇತ್ತು. ಆದರೆ, ಈಗ 100 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಎಲ್ಲಾ ಸಮಾಜಗಳು ಬೆಳೆಯುತ್ತಿರುವ ಸಂದರ್ಭದಲ್ಲಿ ಜಾತಿವಾರು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ನಮ್ಮ ಪಂಚಮಸಾಲಿ ಸಮುದಾಯ ಕೂಡ 2A ಗೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದೆ. ಕುರುಬ ಸಮಾಜ ಕೂಡ ಎಸ್ಟಿಗೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದೆ. ಮುಖ್ಯವಾಗಿ ಹಿಂದುಳಿದ ವರ್ಗಗಳನ್ನು ಮುನ್ನೆಲೆಗೆ ತರುವುದೇ ನಮ್ಮೆಲ್ಲರ ಆಶಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button