ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಸರ್ವೆ ಮಾಡಲು ಲಂಚ ಪಡೆಯುತ್ತಿದ್ದ ಚಿಕ್ಕೋಡಿಯ ಭೂ ಮಾಪನ ಇಲಾಖೆಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭೂಮಾಪನ ಇಲಾಖೆಯ ಸೂಪರ್ ವೈಸರ್ ಎಸ್.ಎಂ.ಕಲ್ಯಾಣ ಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದವರು. 6 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.
ಸಿದ್ದಪ್ಪ ಪೂಜಾರಿ ಎನ್ನುವವರಿಂದ ಸರ್ವೆ ಕಾರ್ಯಕ್ಕಾಗಿ ಲಂಚ ಪಡೆಯುತ್ತಿದ್ದರು.
ವಿವರ:
ಜಮೀನುಗಳ 11ಇ ನಕ್ಷೆ ಅವಧಿ ವಿಸ್ತರಿಸಿ ಕೊಡಲು ಲಂಚ ಸ್ವೀಕರಿಸುವ ವೇಳೆ ಚಿಕ್ಕೋಡಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಸೂಪರ್‌ವೈಸರ್ ಲೋಕಾಯುಕ್ತ ಬಲೆಗೆ
ಫಿರ್ಯಾದಿ ಸಿದ್ದಾರ್ಥ ಹಾಲಪ್ಪ ಪೂಜಾರಿ ಸಾ: ಸೌಂದಲಗಾ ತಾ: ನಿಪ್ಪಾಣಿ ಜಿ: ಬೆಳಗಾವಿ ಇವರ ಮಾಲ್ಕಿಯ ಸೌಂದಲಗಾ ಮತ್ತು ಭೀವಸಿ ಗ್ರಾಮದ ಒಟ್ಟು 12 ಸರ್ವೇ ನಂಬರ್‌ಗಳ 11ಇ ನಕ್ಷೆ ಅವಧಿಯನ್ನು ವಿಸ್ತರಿಸಿ ಕೊಡಲು ಚಿಕ್ಕೋಡಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಸೂಪರ್‌ವೈಸರ್ ಸತೀಶ ಎಮ್ ಕಲ್ಯಾಣಶೆಟ್ಟಿ ಇವರು 6000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ದಿನಾಂಕ: 17.05.2023 ರಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಠಾಣೆಯ ಅನ್ನಪೂರ್ಣ ಹುಲಗೂರ ಪೊಲೀಸ್ ನಿರೀಕ್ಷಕರು ಇವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ಡಿಜಿಪಿ ಪ್ರಶಾಂತಕುಮಾರ ಠಾಕೂರ ಐಪಿಎಸ್ ಹಾಗೂ ಸುಬ್ಬಮಣೇಶ್ವರ ರಾವ್ ಐಪಿಎಸ್, ಐಜಿಪಿ ರವರ ಮಾರ್ಗದರ್ಶನದಂತೆ ತನಿಖೆ ಕೈಕೊಂಡು ಬೆಳಗಾವಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಅನಿತಾ ಬಿ ಹದ್ದಣ್ಣವರ ಐಪಿಎಸ್, ರವರ ಮುಂದಾಳತ್ವದಲ್ಲಿ ಬೆಳಗಾವಿ ಲೋಕಾಯುಕ್ತ ಅಧಿಕಾರಿ ಮತ್ತು ಸಿಬ್ಬಂದಿಗಳು, ಆಪಾದಿತನು ಫಿರ್ಯಾದಿಯಿಂದ ರೂ. 6000/- ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದು ದಸ್ತಗೀರ ಮಾಡಿ ಕಾನೂನು ಕ್ರಮ ಜರುಗಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ