*ಬಿಜೆಪಿ ನಾವಿಕನಿಲ್ಲದ ಹಡಗಾಗಿದೆ; ಎಲ್ಲೋ ಕುಳಿತು ಯಾರೋ ಕಂಟ್ರೋಲ್ ಮಾಡುತ್ತಿದ್ದಾರೆ; ಸ್ವಪಕ್ಷದ ವಿರುದ್ಧ ರೇಣುಕಾಚಾರ್ಯ ಕಿಡಿ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಬಿಜೆಪಿ ನಾವಿಕನಿಲ್ಲದ ಹಡಗಾಗಿದೆ. ಇಷ್ಟುದಿನವಾದರೂ ರಾಜ್ಯಾಧ್ಯಕ್ಷರನ್ನು, ವಿಪಕ್ಷ ನಾಯಕರನ್ನು ಆಯ್ಕೆ ಮಾಡಲಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಬಿಜೆಪಿಯಲ್ಲಿ ಇಷ್ಟು ದಿನವಾದರೂ ರಾಜ್ಯಾಧ್ಯಕ್ಷರ ನೇಮಕವಾಗಿಲ್ಲ. ವಿಪಕ್ಷ ನಾಯಕನ ಆಯ್ಕೆಯೂ ಆಗಿಲ್ಲ. ಯಡಿಯೂರಪ್ಪನವರನ್ನು ಕಡೆಗಣನೆ ಮಾಡಿದ್ದಾರೆ. ಅವರ ಶಾಪದಿಂದಲೇ ಈ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಪ್ರಧಾನಿ ಮೋದಿ ಎಷ್ಟು ಮುಖ್ಯವೋ, ಬಿ.ಎಸ್.ಯಡಿಯೂರಪ್ಪ ಕೂಡ ಅಷ್ಟೇ ಮುಖ್ಯ. ಕರ್ನಾಟಕ ರಾಜಕಾರಣವನ್ನು ಎಲ್ಲೋ ಕುಳಿತು ಯಾರೋ ಕಂಟ್ರೋಲ್ ಮಾಡುತ್ತಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಕಾಂಗ್ರೆಸ್ ಗೆ ನನ್ನ ಅವಶ್ಯಕತೆ ಇಲ್ಲ, ಸೋತವರನ್ನು ತೆಗೆದುಕೊಂಡು ಏನು ಮಾಡ್ತಾರೆ? ಅವರು ನನ್ನ ಆಹ್ವಾನ ಮಾಡಿಲ್ಲ, ನಾನೂ ಕೇಳಿಲ್ಲ ಎಂದು ಹೇಳಿದರು.
ನಾನು ಲೋಕಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ. ನನಗೆ ಟಿಕೆಟ್ ಸಿಗಲಿದೆ ಎಂಬ ನಂಬಿಕೆ ಇದೆ. ಪ್ರತಿ ಬೂತ್ ಮಟ್ಟದಲ್ಲಿ ಪ್ರಧಾನಿ ಮೋದಿ ಸಾಧನೆಯ ಕರಪತ್ರವನ್ನು ಹಂಚುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ನಾನು ಮಾಡಿದ ಕೆಲಸವನ್ನು ಯಾರೂ ಮಾಡಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ