ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮದ್ರಾಸ್ ಐ ಪ್ರಕರಣ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ರಾಜ್ಯದಲ್ಲಿ ಮದ್ರಾಸ್ ಐ ಅಥವಾ ಕಂಜಕ್ಷನೈಟೀಸ್ ಕಾಯಿಲೆ ಹರಡುತ್ತಿದ್ದು, ಮುಂಜಾಗೃತೆ ವಹಿಸಲು ಸೂಚಿಸಲಾಗಿದೆ. ಇದು ಒಂದು ವೈರಸ್ ನಿಂದ ಹರಡುವ ಕಾಯಿಲೆ. ಕಣ್ಣಿನ ಬಿಳಿಭಾಗವನ್ನು ಆವರಿಸುವ ಕಣ್ಣಿನ ಮುಂಭಾಗದಲ್ಲಿ ಇರುವ ಪದರದ ಸೋಂಕಿಗೆ (ಉರಿಊತ), ಇದಕ್ಕೆ ಕಂಜಕ್ಷನೈಟೀಸ್ ಎನ್ನುತ್ತಾರೆ.
ಈ ಸೋಂಕು ಮಳೆಗಾಲದ ಆರಂಭ ಹಂತದಲ್ಲಿ ಕಂಡು ಬರುವ ಸಾಧ್ಯತೆಗಳು ಹೆಚ್ಚು. ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಬರುವ ದ್ರವದ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದರಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕಂಡುಬರುತ್ತದೆ ವಿಶೇಷವಾಗಿ ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಮತ್ತು ಅತಿಥಿ ಗೃಹಗಳಲ್ಲಿ (ಪಿ.ಜಿ) ಈ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚು. 3 ರಿಂದ 5 ದಿನಗಳಲ್ಲಿ ಗುಣಮುಖವಾಗುತ್ತದೆ. ಎಲ್ಲಾ ವಯಸ್ಸಿನವರಲ್ಲಿ ಈ ಸೋಂಕು ಕಂಡುಬರುವ ಸಾಧ್ಯತೆ ಇರುತ್ತದೆ.
ಲಕ್ಷಣಗಳು
ಕಣ್ಣು ಕಂಪಾಗುವಿಕೆ, ನೀರು ಸೋರುವಿಕೆ
ಅತಿಯಾದ ಕಣ್ಣೀರು
ಕಣ್ಣಿನಲ್ಲಿ ತುರಿಕೆ
ಸತತ ಕಣ್ಣು ನೋವು ಹಾಗೂ ಚುಚ್ಚುವಿಕೆ
ಬೆಳಕನ್ನು ನೋಡಲು ಸಾಧ್ಯವಾಗದಿರುವುದು
ದೃಷ್ಟಿ ಮುಸುಕಾಗುವುದು / ಮಂಜಾಗುವುದು.
ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತ ದ್ರವದಿಂದ ಅಂಟಿರುವುದು, ರೆಪ್ಪ ಊದಿಕೊಳ್ಳುವುದು
ಚಿಕಿತ್ಸೆ
ಶುಚಿಯಾದ ಒದ್ದೆ ಮಾಡಿದ ಬಟ್ಟೆ ಅಥವಾ ಹತ್ತಿಯ ಉಂಡೆಗಳಿಂದ ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸುವುದು.
ಶಾಲಾ ವಿದ್ಯಾರ್ಥಿ / ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಲ್ಲಿ ಅವರನ್ನು ಶಾಲೆಯಿಂದ ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು.
ಸೋಂಕಿತ ವ್ಯಕ್ತಿಯು ಬಳಸಿದ ಕರವಸ್ತ್ರ ಹಾಗೂ ಇತರೆ ವಸ್ತುಗಳನ್ನು ಬೇರೆಯವರು ಬಳಸಬಾರದು.
ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು.
ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದು ಉತ್ತಮ.
ಮುಂಜಾಗ್ರತಾ ಕ್ರಮಗಳು
ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಿ
ಆರೋಗ್ಯವಂತ ವ್ಯಕ್ತಿಯು ಸೋಂಕುಳ್ಳ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರವಿರುವುದು
ಸೋಂಕಿತ ವ್ಯಕ್ತಿಯು ಬಳಸಿದ ಕರವಸ್ತ್ರ ಹಾಗೂ ಇತರೆ ವಸ್ತುಗಳನ್ನು ಬೇರೆಯವರು ಬಳಸಬಾರದು
ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆಯಿರಿ
ಸೋಂಕಿತ ವ್ಯಕ್ತಿಗಳಿಗೆ ಶೀತ, ಕೆಮ್ಮು, ಜ್ವರ ಇದ್ದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಿರಿ
ತೀವ್ರತರದ ಸೋಂಕು ಉಂಟಾದಲ್ಲಿ ತಕ್ಷಣವೇ ನೇತ್ರ ತಜ್ಞರಿಂದ ಚಿಕಿತ್ಸೆ ಪಡೆಯಿರಿ
ಏನು ಮಾಡಬೇಕು?
ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಿ
ಸೋಂಕು ಕಂಡು ಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ಸಲಹೆ ಪಡೆಯಿರಿ
ಸೋಂಕಿತ ವ್ಯಕ್ತಿಗಳಿಗೆ ಪೌಷ್ಟಿಕ ಆಹಾರ ಕೊಡಬೇಕು
ಸೋಂಕಿತ ವ್ಯಕ್ತಿಗಳು ಬಳಸಿದ ಕರ್ಚೀಫ್, ಟಿವೆಲ್ ಇನ್ನಿತರ ವಸ್ತುಗಳನ್ನು ಸಂಸ್ಕರಿಸಿ
ಏನು ಮಾಡಬಾರದು?
ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ
ಸ್ವಯಂ ಚಿಕಿತ್ಸೆ ವಿಧಾನಗಳನ್ನು ಮಾಡಬಾರದು
ಸೋಂಕಿತ ವ್ಯಕ್ತಿಯ ಸನಿಹದಿ೦ದ ದೂರವಿರಬೇಕು
ಸೋಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಮುಟ್ಟಬಾರದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ