ಮಹಾಂತೇಶ ಕವಟಗಿಮಠ ಸಹಕಾರಿ ಸಂಘ ಅಸ್ಥಿತ್ವಕ್ಕೆ: ಬುಧವಾರ ಸಿಎಂ ಉದ್ಘಾಟನೆ; ಹಣಕ್ಕಾಗಿ ಅಲ್ಲ, ಸಾಮಾಜಿಕ ಬದ್ಧತೆಗಾಗಿ ಎಂದ ಕವಟಗಿಮಠ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೆಸರಿನಲ್ಲಿ ಸೌಹಾರ್ದ ಸಹಕಾರಿ ಸಂಘ ಅಸ್ಥಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ (ಮಾರ್ಚ್ 15) ಉದ್ಘಾಟಿಸಲಿದ್ದಾರೆ.
ಅಂದು ಬೆಳಗ್ಗೆ ೧೦.೩೦ ಘಂಟೆಗೆ ಜೆಎನ್‌ಎಂಸಿಯ ಡಾ. ಜೀರಗೆ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಲಿದೆ. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಕ್ಷೇತ್ರ ಮೈಸೂರು ಶ್ರೀ ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು, ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ನಾಗನೂರು ರುದಾಕ್ಷಿಮಠ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಹಕಾರಿ ಸಚಿವರಾದ ಎಸ್.ಟಿ.ಸೋಮಶೇಖರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷರಾದ ಜಿ.ನಂಜನಗೌಡ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಹಾಂತೇಶ ಕವಟಗಿಮಠರವರ ನನ್ನ ಬದುಕು ಸದನದ ಒಳಗೆ ಹೊರಗೆ ಪುಸ್ತಕ ಬಿಡುಗಡೆಯನ್ನು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆಗೊಳಿಸಲಿದ್ದಾರೆ.
ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘದ ಕುರಿತು ಹಾಗೂ ಕಾರ್ಯಕ್ರಮದ ಕುರಿತು ಮಹಾಂತೇಶ ಕವಟಗಿಮಠ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
90 ವರ್ಷಗಳಿಂದ ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕವಟಗಿಮಠ ಮನೆತನ ವಿಶ್ವಾಸಕ್ಕೆ ಇನ್ನೊಂದು ಹೆಸರಾಗಿದ್ದು, ಹಣಕ್ಕಾಗಿ ಈ ಸಹಕಾರಿ ಸಂಘವನ್ನು ಆರಂಭಿಸುತ್ತಿಲ್ಲ. ಸಾಮಾಜಿಕ ಬದ್ಧತೆಯ ಮೇಲೆ ಸಂಘ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬೆಳಗಾವಿ, ಧಾರವಾಡ ಹಾಗೂ ಗದಗ ವ್ಯಾಪ್ತಿಯನ್ನು ಆರಂಭಿಕವಾಗಿ ಸಂಘ ಹೊಂದಿದ್ದು, ಮುಂದಿನ ದಿನಗಳಲ್ಲಿ ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರಕ್ಕೂ ವಿಸ್ತರಿಸಲಾಗುವುದು ಎಂದು ವಿವರಿಸಿದರು.
ಆರ್ತಿಕವಾಗಿ ಯುವಕರಿಗೆ ಶಕ್ತಿ ತುಂಬುವುದು ಸಂಘದ ಉದ್ದೇಶ, ಬೇರೆ ಸಹಕಾರ ಸಂಘಗಳಿಗಿಂತ ಭಿನ್ನವಾಗಿ ಸಂಘವನ್ನು ನಡೆಸಲಾಗುವುದು ಎಂದೂ ಹೇಳಿದರು.
ನನ್ನ ಬದುಕು ಸದನದ ಒಳಗೆ ಹೊರಗೆ ಪುಸ್ತಕದ ಕುರಿತು ಮಾತನಾಡಿದ ಅವರು, ಇದೊಂದು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಪುಸ್ತಕವಾಗಿದೆ. ನನ್ನ ರಾಜಕೀಯ ಪಯಣದ ಕುರಿತು ಹಾಗೂ ಸದನದೊಳಗೆ ಎತ್ತಿದ ಪ್ರಶ್ನೆಗಳು ಮತ್ತು ಅವುಗಳ ಪರಿಣಾಮಗಳ ಕುರಿತು ಬರೆಯಲಾಗಿದೆ. ನಾವು ಸದನದೊಳಗೆ ಎತ್ತುವ ಪ್ರಶ್ನೆಗಳು ಸಮಾಜದಲ್ಲಿ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಕವಟಗಿಮಠ ಮನೆತನದ ಕನಸಿನ ಕೂಸಾಗಿರುವ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಹಕಾರಿ ತತ್ತ್ವದಡಿಯಲ್ಲಿ ಕಾರ್ಯನಿರ್ವಹಿಸಲಿದೆ. ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳ ಆರ್ಥಿಕ ಬೇಕುಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಚಾಲನೆ ಪಡೆಯುತ್ತಿದೆ. ಲಾಭ ಗಳಿಕೆಯೊಂದೆ ಸಂಘದ ಉದ್ದೇಶವಾಗದೆ ಸಹಕಾರಿ ತತ್ತ್ವದಡಿಯಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯವನ್ನು ಮಾಡಲಿದೆ. ಒಟ್ಟಿಗೆ ಬೆಳೆಯೋಣ ಎಂಬ ಧ್ಯೇಯದೊಂದಿಗೆ ನೂತನ ಬ್ಯಾಂಕ್ ೨೧ನೇ ಶತಮಾನದಲ್ಲಿ ದಾಪುಗಾಲಿಡಲಿದೆ.
ಪ್ರಧಾನ ಕಚೇರಿಯು ಬೆಳಗಾವಿ ಮಹಾನಗರದಲ್ಲಿರುವ ಶಿವಬಸವನಗರದ ಗಿರಿನಾರ್ ಪ್ರೈಡ್ ಮೊದಲ ಅಂತಸ್ತಿನಲ್ಲಿ ಕಾರ್ಯಾರಂಭ ಮಾಡಲಿದ್ದು, ಪ್ರಾರಂಭದಹಂತದಲ್ಲಿ ರಾಜ್ಯದ ಬೆಳಗಾವಿ-ಧಾರವಾಡ-ಗದಗ ಜಿಲ್ಲೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ. ೩೦ಲಕ್ಷ ಶೇರು ಬಂಡವಾಳದೊಂದಿಗೆ ಜನತೆಯ ಸೇವೆಗೆ ತೊಡಗಲಿರುವ ಸಂಘವು ಇಂದಿನ ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲ ಬೇಕು ಬೇಡಿಕೆಗಳಿಗೆ ಸ್ಪಂದಿಸಲಿದೆ.
ಬ್ಯಾಂಕಿನ್ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು :ಶ್ರೀ ಶರತ್‌ಚಂದ್ರ ಮಹಾಂತೇಶ ಕವಟಗಿಮಠ ಅಧ್ಯಕ್ಷರು, ಶ್ರೀ ರಾಜೇಂದ್ರ ಯಲ್ಲಪ್ಪ ಮುತಗೇಕರ ಉಪಾಧ್ಯಕ್ಷರು, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಲಕ್ಷ್ಮೀಶ ಫಕ್ಕೀರಪ್ಪ ಹುಂಡೇಕರ, ಚಂದ್ರಗೌಡ ರುದ್ರಗೌಡ ಪಾಟೀಲ, ಪ್ರಮೋದ ಸೂರ್ಯಕಾಂತ ಕೋಚೇರಿ, ಡಾ.ಸಂತೋಷ ಸುಬಾರಾವ್ ಪಾಟೀಲ, ಸತೀಶ ಮಹಾದೇವ ಅಪ್ಪಾಜಿಗೋಳ, ಡಾ.ವಿನಿತಾ ವಿಜಯಾನಂದ ಮೆಟಗುಡಮಠ, ಶಿವಲಿಂಗಯ್ಯ ಮಹಾಂತಯ್ಯ ಶಿವಯೋಗಿಮಠ, ಅರುಣ ಅಪ್ಪಸಾಹೇಬ ಮಾನೆ ನಿರ್ದೇಶಕರು.
ಸಂಘದ ಅಧ್ಯಕ್ಷ ಶರತ್ ಚಂದ್ರ ಕವಟಗಿಮಠ, ಉಪಾಧ್ಯಕ್ಷ ರಾಜೇಂದ್ರ ಮುತಗೇಕರ್, ನಿರ್ದೇಶಕರುಳಾದ ಲಕ್ಷ್ಮೀಶ ಫಕ್ಕೀರಪ್ಪ ಹುಂಡೇಕರ, ಚಂದ್ರಗೌಡ ರುದ್ರಗೌಡ ಪಾಟೀಲ, ಡಾ.ಸಂತೋಷ ಸುಬಾರಾವ್ ಪಾಟೀಲ, ಶಿವಲಿಂಗಯ್ಯ ಮಹಾಂತಯ್ಯ ಶಿವಯೋಗಿಮಠ, ಅರುಣ ಅಪ್ಪಸಾಹೇಬ ಮಾನೆ ಪತ್ರಿಕಾಗೋಷ್ಠಿಯಲ್ಲಿದ್ದರು.
ಸಹಕಾರಿ ಕ್ಷೇತ್ರಕ್ಕೆ ಕವಟಗಿಮಠ ಮನೆತನದ ಕೊಡುಗೆ ಅನನ್ಯ: ಒಂದು ಅವಲೋಕನ :
ಸಹಕಾರಿ ಕ್ಷೇತ್ರ ಈ ದೇಶದ ಜೀವನಾಡಿ. ರೈತರನ್ನು, ಮಧ್ಯಮವರ್ಗದವರನ್ನು, ಕಾರ್ಮಿಕರನ್ನು ಗಮದಲ್ಲಿಟ್ಟುಕೊಂಡು ಸ್ಥಾಪನೆಗೊಂಡ ಅಸಂಖ್ಯ ಸಹಕಾರಿ ಸಂಘಸಂಸ್ಥೆಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗುಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಾ ಭದ್ರನೆಲೆಗಟ್ಟನ್ನು ರೂಪಿಸಿವೆ. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಕೊಡುಗೆ ದಾಖಲಾರ್ಹ. ಇನ್ನು ಗಂಡುಮೆಟ್ಟಿನ ಬೆಳಗಾವಿ ಜಿಲ್ಲೆ ಸಹಕಾರಿ ನೆಲೆಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ಸಾಧಿಸಿರುವ ಸಾಧನೆಗಳು ಅಸದಳ, ಅಭಿನಂದನಾರ್ಹ. ಈ ಭಾಗದಲ್ಲಿ ಸಹಕಾರಿ ಪತಾಕೆಯನ್ನು ಬಾನೆತ್ತರಕ್ಕೆ ವಿಸ್ತರಿಸಿದ ಶ್ರೇಯಸ್ಸು ಜಿಲ್ಲೆಗೆ ಸಲ್ಲುತ್ತದೆ. ಅಂತಹ ಸಕ್ಕರೆ ಜಿಲ್ಲೆಯ ಸಹಕಾರಿ ಧ್ರುವತಾರೆಯಾಗಿ ಬೆಳೆಗಿದವರು ರತ್ನಪ್ಪಣ್ಣಾ ಕುಂಬಾರ, ಅಪ್ಪಣಗೌಡ ಪಾಟೀಲ, ಮಲ್ಲಯ್ಯಸ್ವಾಮಿ ಕವಟಗಿಮಠ, ಚಿದಾನಂದ ಕೋರೆ, ಬೂದಿಹಾಳ್ಕರ ಪಾಟೀಲ ಈ ಮೊದಲಾದ ಸಹಕಾರಿರತ್ನರ ಕೊಡುಗೆ ಬಣ ಸಲು ಅಸಾಧ್ಯ. ಅಂತಹ ಸಹಕಾರದ ಘಟ್ಟಿ ಸಾಲಿನಲ್ಲಿ ನಿಂತು ಕಳೆದೊಂದು ಶತಮಾನದ ವರೆಗೆ ಸಹಕಾರಿ ಮೂಲಕ ಸಮಾಜದ ಶಕ್ತಿಯಾದವರು ಕವಟಗಿಮಠ ಕುಟುಂಬದವರು.
ಮೂರು ತಲೆಮಾರುಗಳ ಇತಿಹಾಸ :
ಕವಟಗಿಮಠ ಮನೆತನ ಕೃಷಿ ವ್ಯಾಪಾರ, ಸರಾಫಿ ವೃತ್ತಿ ಹಾಗೂ ರಾಜಕೀಯದಲ್ಲಿ ಮಹತ್ತರವಾಗಿ ತೊಡಗಿಸಿಕೊಂಡಂತೆ ಸಹಕಾರ ಕ್ಷೇತ್ರದಲ್ಲಿಯೂ ಕಳೆದ ಮೂರು ತಲೆಮಾರುಗಳಿಂದ ದಾಖಲಾರ್ಹ ಕೊಡುಗೆಯನ್ನು ನೀಡಿದೆ. ಅವರ ಕುಟುಂಬಸ್ಥರು, ಹಿತೈಷಿಗಳು ಜೊತೆಯಾಗಿ ಇಂದು ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನು ಸ್ಥಾಪಿಸುವ ಮೂಲಕ ಮತ್ತೊಂದು ಮೈಲ್ಲುಗಲ್ಲನ್ನು ನಿರ್ಮಿಸುತ್ತಿದ್ದಾರೆ. ಆಪೂರ್ವದಲ್ಲಿ ಕವಟಗಿಮಠ ಮನೆತನದ ಸಹಕಾರಿ ಕ್ಷೇತ್ರದ ಕೊಡುಗೆಯನ್ನು ಅವಲೋಕಿಸೋಣ.
ಸಹಕಾರಿ ಕ್ಷೇತ್ರದ ಶಕ್ತಿ ಕಲ್ಲಯ್ಯಸ್ವಾಮಿ ಕವಟಗಿಮಠ :
ಮಹಾಂತೇಶ ಕವಟಗಿಮಠ ಅವರ ಅಜ್ಜನವರಾದ ಕಲ್ಲಯ್ಯನವರು ಪ್ರಯತ್ನಶೀಲತೆಗೆ ವ್ಯಾಖ್ಯಾನವಾಗಿದ್ದರು. ಕೃಷಿ, ವಾಣಿಜ್ಯಗಳಲ್ಲದೇ ಸಹಕಾರಿ ಕ್ಷೇತ್ರದಲ್ಲಿಯೂ ತಮ್ಮ ಹೆಜ್ಜೆಗುರುತುಗಳನ್ನು ಅಚ್ಚಳಿಯದೆ ಮೂಡಿಸಿದ್ದರು. ಹತ್ತೊಂಬತ್ತರ ಹರೆಯದಲ್ಲಿಯೇ ಸಹಕಾರಿ ಕ್ಷೇತ್ರಕ್ಕೆ ಕಾಲಿರಿಸಿ, ಚಿಕ್ಕೋಡಿ ಭಾಗದಲ್ಲಿ ಸಹಕಾರಿ ತತ್ವವನ್ನು ಪ್ರಚಾರಗೊಳಿಸಿದ ಶ್ರೇಯಸ್ಸು ಕಲ್ಲಯ್ಯ ಸ್ವಾಮಿಯವರಿಗೆ ಸಲ್ಲುತ್ತದೆ. ಸಹಕಾರ ತತ್ವಗಳ ಅನುಷ್ಠಾನಕ್ಕೆ ಕಟಿಬದ್ಧರಾಗಿ ಅಂದು ಗೆಳೆಯರೊಂದಿಗೆ ಚಿಕ್ಕೋಡಿ ಭಾಗದಲ್ಲಿ ನೆಟ್ಟ ಸಹಕಾರದ ಮರ ಇಂದು ಹೆಮ್ಮರವಾಗಿ ಬೆಳೆದಿದೆ.
ಚಿಕ್ಕೋಡಿಯ ಭಾಗದಲ್ಲಿ ಸಹಕಾರ ಕ್ಷೇತ್ರದ ಮೊದಲ ಸಂಸ್ಥೆ ಎಲ್.ಎಸ್.ಎಂ.ಪಿ. ಸೊಸೈಟಿಯು ೧೯೧೪ರಲ್ಲಿ ಸ್ಥಾಪನೆಗೊಂಡಿತು. ಇದು ಈ ಭಾಗದ ಸಹಕಾರಿ ಕ್ಷೇತ್ರದಲ್ಲಿನ ಮೊದಲ ಸಂಘಟನೆಯೂ ಹೌದು. ಆರ್. ಡಿ. ಕುಲಕಣ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು ಇದರ ಸ್ಥಾಪನೆಯಲ್ಲಿ ಕಲ್ಲಯ್ಯಸ್ವಾಮಿಗಳ ಪಾತ್ರ ತುಂಬ ಮಹತ್ವದ್ದು. ೧೯೧೪ ರಿಂದ ೧೯೪೯ರ ವರೆಗೂ ಅವರು ಈ ಸಂಸ್ಥೆಯ ಕಾರ್ಯಕಾರಿ ಸದಸ್ಯರಾಗಿ ಕೆಲವು ಅವಧಿಗೆ ಅವರು ಈ ಸಂಸ್ಥೆಯ ಚೇಅರ್‌ಮನ್ ಆಗಿದ್ದರು. ಕೊನೆಯವರೆಗೂ ಕಲ್ಲಯ್ಯನವರು ಈ ಸಂಸ್ಥೆಗೆ ಅನಿವಾರ್ಯವೂ ಆಗಿ ಮಾರ್ಗದರ್ಶಿಸಿದರು. ಕುಲಕರ್ಣಿ ವಕೀಲರಂಥ ಕೆಲವು ಸ್ನೇಹಿತರು ಕಲ್ಲಯ್ಯನವರಿಗೆ ಬೆಂಬಲವಾಗಿ ನಿಂತಿದ್ದರು. ಇಂದು ಈ ಸಂಸ್ಥೆ ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ.
ಕಲ್ಲಯ್ಯಸ್ವಾಮಿಯವರು ಸತತ ಇಪ್ಪತ್ತೈದು ವರ್ಷಗಳ ಕಾಲ ತಾಲೂಕಾ ಅಭಿವೃದ್ಧಿ ಸಂಘದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಚಿಕ್ಕೋಡಿ ಭಾಗದಲ್ಲಿ ಜನಹಿತ ಕಾರ್ಯಗಳಲ್ಲಿ ಅವರೆಷ್ಟು ಮಹತ್ವದ ಪಾತ್ರ ವಹಿಸಿದ್ದಾರೆ ಎಂಬುದು ಅರ್ಥವಾಗುತ್ತದೆ. ಚಿಕ್ಕೋಡಿ ತಾಲೂಕಾ ಕೋ ಆಪರೇಟಿವ್ ಸುಪರ್‌ವೈಸಿಂಗ್ ಸಿಬ್ಬಂದಿಗಳ ಸಂಘದ ಚೇರ್‌ಮನ್‌ರಾಗಿ ೧೯೩೦ ರಿಂದ ೧೯೪೯ರ ವರೆಗೆ ಸೇವೆ ಸಲ್ಲಿಸಿ ತಾವು ಕಾರ್ಮಿಕರ ಪರವಾಗಿ ಶ್ರಮಿಸಿದರು. ಮಾತ್ರವಲ್ಲದೆ ತಮ್ಮ ಕಾರ್ಯಕ್ಷಮತೆಯಿಂದ ಬೆಳಗಾವಿ ಜಿಲ್ಲೆಯ ಮಟ್ಟದಲ್ಲೂ ಗುರುತಿಸಿಕೊಂಡು ಬೆಳಗಾವಿ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಕೋ ಆಪರೇಟಿವ್ ಇನ್ಟಿಟ್ಯೂಟ್ ಬೆಳಗಾವಿಯ ನಿರ್ದೇಶಕರಾಗಿ, ಖರೀದಿ ಮತ್ತು ಮಾರಾಟಗಾರರ ಯೂನಿಯನ್ ಬೆಳಗಾವಿಯ ನಿರ್ದೇಶಕರಾಗಿ, ಡಿಸ್ಟ್ರಿಕ್ಟ್ ಲ್ಯಾಂಡ್ ಮಾರ್ಟಗೇಜ್ ಬ್ಯಾಂಕ್‌ನ ನಿರ್ದೇಶಕರಾಗಿ, ಡಿ.ಸಿ.ಸಿ. ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾಗಿ, ಬೆಳಗಾವಿ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ಚಿಕ್ಕೋಡಿ ಶಾಖೆಯ ಚೇಅರ್‌ಮನ್‌ರಾಗಿ ಆಯ್ಕೆಗೊಂಡು ಸಲ್ಲಿಸಿದ ಸೇವೆ ಅನುಪಮ ಹಾಗೂ ಚಿರಸ್ಮರಣೀಯ. ರೈತರ ಮನೆಬಾಗಿಲಿಗೆ ಅನೇಕ ಸೌಲಭ್ಯಗಳು ತಲುಪುವಂತೆ ಕಾರ್ಯವೆಸಗಿ ಸಹಕಾರ ಚಳವಳಿಗೆ ಜೀವ ತುಂಬಿದ್ದಾರೆ. ಹೀಗಾಗಿ ಚಿಕ್ಕೋಡಿಯ ಭಾಗದ ಜನಮಾನಸದಲ್ಲಿ ಕಲ್ಲಯ್ಯಸ್ವಾಮಿಗಳು ಈಗಲೂ ಪ್ರಾತಃಸ್ಮರಣೀಯರು.
ಸಮಗ್ರ ಕರ್ನಾಟಕ ರಾಜ್ಯ ರಚನೆಗೊಳ್ಳುವ ಮೊದಲು ಅವಿಭಜಿತ ಧಾರವಾಡ, ವಿಜಾಪುರ ಹಾಗೂ ಕಾರವಾರ ಬೆಳಗಾವಿ ಜಿಲ್ಲೆಗಳನ್ನು ಮುಂಬೈಕರ್ನಾಟಕ ಪ್ರದೇಶವೆಂದು ಕರೆಯುತ್ತಿದ್ದರು. ಮೈಸೂರು ರಾಜ್ಯ ಸ್ಥಾಪನೆಯಾದ ನಂತರ ಇವೆಲ್ಲ ಕರ್ನಾಟಕದಲ್ಲಿ ವಿಲೀನವಾದುವು. ಕಲ್ಲಯ್ಯಸ್ವಾಮಿಗಳ ಕಾರ್ಯವ್ಯಾಪ್ತಿ ಬೆಳಗಾವಿ ಜಿಲ್ಲೆಯನ್ನೂ ಮೀರಿ ಮುಂಬೈಕರ್ನಾಟಕ ಮಟ್ಟಕ್ಕೆ ಏರಿತು. ಅವರನ್ನು ಮುಂಬೈ ಕರ್ನಾಟಕ ಏರಿಯಾ ಕೋ ಆಪರೇಟಿವ್ ಅಡ್ವೈಸರಿ ಕಮೀಟಿ ಧಾರವಾಡದ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಹಾಗೆಯೇ ಮುಂಬೈ ಪ್ರಾವ್ಹಿಜನ್ ಕೋ ಆಪರೇಟಿವ್ ಬೋರ್ಡ್ನ ಸದಸ್ಯರನ್ನಾಗಿಯೂ ನೇಮಿಸಲಾಯಿತು ಎಂದರೆ ಅವರ ಸಹಕಾರಿ ಕ್ಷೇತ್ರದ ವ್ಯಾಪ್ತಿಗೆ ಹಿಡಿದ ಕನ್ನಡಿಯಾಗಿದೆ. ಮಾತ್ರವಲ್ಲ ಕಲ್ಲಯ್ಯಸ್ವಾಮಿಗಳು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯ ಪಾತ್ರವನ್ನು ನಿರ್ವಹಿಸಿದವರು. ಮಹಾತ್ಮಾ ಗಾಂಧೀಜಿಯವರ ಕರೆಯ ಮೇರೆಗೆ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿ ಖಾದಿಯ ಉಡುಪುಗಳನ್ನೇ ಕೊನೆಯವರೆಗೂ ಧರಿಸಿದವರು.
ಕಲ್ಲಯ್ಯಸ್ವಾಮಿಗಳು ಪ್ರತಿಷ್ಠಿತ ಶೈಕ್ಷಣ ಕ ಸಂಸ್ಥೆಗಳಲ್ಲಿ ಗೌರವಯುತವಾದ ಪದವಿಗಳು, ಸ್ಥಾನಮಾನಗಳು ದೊರೆತವು. ಇಂದು ಜಿಲ್ಲಾ ಪಂಚಾಯತಿ ಎನಿಸುವ ಸಂಸ್ಥೆ ಆಗ ಡಿಸ್ಟ್ರಿಕ್ ಲೋಕಲ್ ಬೋರ್ಡ್ ಎಂದಿತ್ತು. ಕಲ್ಲಯ್ಯಸ್ವಾಮಿಗಳು ಅದರ ಸದಸ್ಯರಾಗಿ, ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಿತಿಯ ಸದಸ್ಯರಾಗಿ, ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾಗಿ, ಚಿಕ್ಕೋಡಿಯ ಆರ್.ಡಿ.ಹೈಸ್ಕೂಲು ಕಮೀಟಿಯ ಖಾಯಂ ಸದಸ್ಯರಾಗಿ, ಬೆಳಗಾವಿ ಜಿಲ್ಲೆಯ ಸ್ಕೂಲ್ ಬೋರ್ಡಿನ ಚೇಅರ್‌ಮನ್‌ರಾಗಿ, ಹೀಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮೌಲಿಕ ಸೇವೆ ಸಲ್ಲಿಸಿದವರು.
ಸಹಕಾರಿ ಕ್ಷೇತ್ರ ಧ್ರುವತಾರೆ ಮಲ್ಲಯ್ಯಸ್ವಾಮಿ ಕವಟಗಿಮಠ :ಕಲ್ಲಯ್ಯಸ್ವಾಮಿಗಳು ಇಹಲೋಕ ಯಾತ್ರೆ ಮುಗಿಸಿದಾಗ (೧೬-೮-೧೯೪೯) ಮಲ್ಲಯ್ಯಸ್ವಾಮಿಗಳಿಗಿನ್ನೂ ಹದಿನಾಲ್ಕರ ವಯಸ್ಸು. ತಮ್ಮ ತಂದೆ ರಾಜಕೀಯ, ಸಹಕಾರಿ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ ಸ್ಪಷ್ಟ ಕಲ್ಪನೆ ಮಲ್ಲಯ್ಯಸ್ವಾಮಿಗಳಿಗಿತ್ತು. ಅಂತೆಯೆ ತಮ್ಮ ತಂದೆಯವರ ಪಥದಲ್ಲಿಯೇ ಸಾಗಿದರು. ತಂದೆಯ ಸಾವಿನ ನಂತರ ಕುಟುಂಬದ ಭಾರವನ್ನು ಹೊತ್ತು ಅನೇಕ ಸವಾಲುಗಳನ್ನು ಎದುರಿಸಿದರು.
೧೯೭೩ ರಿಂದ ೧೯೮೨ರವರೆಗೂ ಮಲ್ಲಯ್ಯಸ್ವಾಮಿಗಳು ಪುರಸಭೆಯ ಅಧ್ಯಕ್ಷರಾಗಿದ್ದರು. ನಂತರ, ೨೦೦೧ರಲ್ಲಿ ಅವರ ದ್ವಿತೀಯ ಪುತ್ರ ಜಗದೀಶ ಕವಟಗಿಮಠರು ಪುರಸಭೆಯ ಅಧ್ಯಕ್ಷರಾದರು. ಹೀಗೆ ಕವಟಗಿಮಠ ಮನೆತನ ಮೂರು ತಲೆಮಾರಿನವರೆಗೂ ಚಿಕ್ಕೋಡಿ ನಗರದ ಪ್ರಥಮ ಪ್ರಜೆಯ ಸ್ಥಾನವನ್ನು ಅಲಂಕರಿಸಿದೆ. ಇದು ಕವಟಗಿಮಠ ಮನೆತನದ ಕಾರ್ಯತತ್ಪರತೆಗೆ ಹಾಗೂ ಜನಪ್ರಿಯತೆಗೆ ಸಾಕ್ಷಿಯಾಗಿದೆ.
೧೯೫೬ರ ಒಂದು ಶುಭದಿನ. ಸಂಕೇಶ್ವರದಲ್ಲಿ ಸಹಕಾರಿ ತತ್ವದಡಿಯಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸುವ ಪ್ರಕ್ರಿಯೆಯು ಜೋರಾಗಿ ಸಾಗಿದ್ದ ಸಮಯ. ಇದರ ಮುಂದಾಳತ್ವವನ್ನು ದಿ.ಅಪ್ಪಣಗೌಡ ಪಾಟೀಲರು, ಎಂ.ಡಿ.ಶೇಠಿ ವಕೀಲರು, ಎಸ್.ಆಯ್. ಪಾಟೀಲ ಮೊದಲಾದವರು ವಹಿಸಿದ್ದರು. ೧೯೫೪ರಲ್ಲಿ ಮುಂಬೈ ಸರಕಾರವಿದ್ದಾಗಲೇ ಸಂಕೇಶ್ವರ ಸಕ್ಕರೆ ಕಾರ್ಖಾನೆಯು ನೋಂದಾಯಿತಗೊಂಡಿತ್ತು. ಮಲ್ಲಯ್ಯ ಸ್ವಾಮಿಗಳು ಹಿರಣ್ಯಕೇಶಿ ಶುಗರ್ ಫ್ಯಾಕ್ಟರಿಯ ಬೋರ್ಡಿಗೆ ಅವಿರೋಧವಾಗಿ ಆಯ್ಕೆಯಾದರು. ಅಲ್ಲಿಂದ ಮುಂದೆ ಮಲ್ಲಯ್ಯಸ್ವಾಮಿಗಳು ೧೯೫೯ರಿಂದ ೧೯೭೧ರವರೆಗೆ ಹನ್ನೆರಡು ವರ್ಷಗಳ ಕಾಲ ಸಕ್ಕರೆ ಕಾರ್ಖಾನೆಯ ಪ್ರತಿಹಂತದ ಬೆಳವಣಿಗೆಗೂ ಶ್ರಮಿಸಿದ್ದಾರೆ ಹಾಗೂ ಅದರ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ರೈತರು ಬೆಳೆದ ಕಬ್ಬಿಗೆ ಅತಿ ಹೆಚ್ಚು ದರವನ್ನು ನೀಡಿದ ಸಕ್ಕರೆ ಕಾರ್ಖಾನೆ ಎಂಬ ಕೀರ್ತಿ ಬರಲು ಕಾರಣರಾಗಿದ್ದಾರೆ. ಮಲ್ಲಯ್ಯಸ್ವಾಮಿಗಳು ಅಪ್ಪಣ್ಣಗೌಡ ಪಾಟೀಲರ ಅತ್ಯಂತ ನೆಚ್ಚಿನ ಬಂಟನಾಗಿ ಹೊರಹೊಮ್ಮಿದರು.
ಅಂತೆಯೆ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಮೊದಲ ಕಾರ್ಯಾಧ್ಯಕ್ಷರಾಗಿ ಚಿದಾನಂದ ಕೋರೆಯವರು ಆಯ್ಕೆಯಾದರು. ಮಲ್ಲಯ್ಯಸ್ವಾಮಿಗಳು ಉಪಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡರು. ೧೯೬೯ರಲ್ಲಿ ಶ್ರೀ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಯ್ಯಸ್ವಾಮಿಗಳು ಮುಂದೆ ೧೯೭೮ರವರೆಗೂ ಅದೇ ಸ್ಥಾನದಲ್ಲಿ ಮುಂದುವರೆದರು. ಈ ಅವಧಿಯಲ್ಲಿ ಅವರು ಕಾರ್ಖಾನೆಗೆ ಭದ್ರ ಬುನಾದಿ ಹಾಕಿದರು. ಅದೊಂದು ಸ್ವತಂತ್ರ್ಯ ಸಂಸ್ಥೆಯಾಗಿ ಬೆಳೆಯುವುದಕ್ಕೆ ಪೋಷಕಾಂಶಗಳನ್ನು ಪೂರೈಸಿದರು. ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುತ್ತ ಮಾರ್ಗದರ್ಶಕರಾಗಿಆರಂಭದ ಹಂತದಲ್ಲಿ ಸಕ್ಕರೆ ಕಾರ್ಖಾನೆಯು ಎದುರಿಸಿದ ಆರ್ಥಿಕ ಸಮಸ್ಯೆಗಳಿಗೆ ಮಲ್ಲಯ್ಯಸ್ವಾಮಿಗಳು ನೀಡಿದ ಪರಿಹಾರಗಳು ಅದನ್ನೊಂದು ಸಧೃಢ ಸಂಸ್ಥೆಯನ್ನಾಗಿ ರೂಪಿಸಿದವು ಎಂಬುದನ್ನು ಯಾರೂ ಮರೆಯುವಂತಿಲ್ಲ.
ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶಿ ಮಲ್ಲಯ್ಯಸ್ವಾಮಿಗಳು :
೧೯೮೪ರಲ್ಲಿ ಚಿದಾನಂದ ಕೋರೆಯವರು ಲಿಂಗೈಕ್ಯರಾದರು. ಪ್ರಭಾಕರ ಕೋರೆಯವರನ್ನು ಅವರ ಸ್ಥಳದಲ್ಲಿ ಕೋ ಆಪ್ಟ್ ಮಾಡಲಾಯಿತು. ಮಲ್ಲಯ್ಯಸ್ವಾಮಿಗಳು ಪ್ರಭಾಕರ ಕೋರೆಯವರಿಗೆ ನೆರವಾಗಿ ನಿಂತರು. ಮಾತ್ರವಲ್ಲದೆ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷನನ್ನಾಗಿ ನೇಮಿಸುವಲ್ಲಿ, ಮಾರ್ಗದರ್ಶಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಅಂತೆಯೆ ಡಾ.ಕೋರೆಯವರು ಮಲ್ಲಯ್ಯ ಕವಟಗಿಮಠ ಅವರನ್ನು ಸದಾಸ್ಮರಿಸುತ್ತಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ಕವಟಗಿಮಠ ಮನೆತನದ ಮೂರು ತಲೆಮಾರುಗಳ ಅವಿನಾಭಾವ ಸಂಬಂಧ :
ಬೆಳಗಾವಿ ಜಿಲ್ಲಾ ಸಹಕಾರಿ ಪತ್ತಿನ ಬ್ಯಾಂಕಿನ ಜೊತೆಗೆ ಕವಟಗಿಮಠ ಮನೆತನವು ಹೊಂದಿದ್ದ ಸಂಬಂಧವೂ ಇಲ್ಲಿ ಉಲ್ಲೇಖಾರ್ಹ. ಕವಟಗಿಮಠ ಮನೆತನವು ಕಳೆದ ಮೂರು ತಲೆಮಾರಿನಿಂದ ಬೆಳಗಾವಿ ಡಿ.ಸಿ.ಸಿ ಬ್ಯಾಂಕಿನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ೧೯೩೨ ರಿಂದ ೧೯೪೯ರವರೆಗೆ ಹದಿನೇಳು ವಷಗಳ ಕಾಲ ಮಲ್ಲಯ್ಯಸ್ವಾಮಿಗಳ ತಂದೆ ಕಲ್ಲಯ್ಯಸ್ವಾಮಿಗಳು ಬ್ಯಾಂಕಿನ ನಿರ್ದೇಶಕರಾಗಿದ್ದರು. ನಂತರ ಮಲ್ಲಯ್ಯಸ್ವಾಮಿಗಳು ೧೯೬೪ ರಿಂದ ೧೯೭೫ ಹಾಗೂ ೧೯೮೦ ರಿಂದ ೧೯೮೩ರವರೆಗೆ ಬ್ಯಾಂಕಿನ ನಿರ್ದೇಶಕರಾಗಿ ನಿಕಟ ಸಂಬಂಧವನ್ನು ಹೊಂದಿದ್ದರು. ಈಗ ಮಲ್ಲಯ್ಯಸ್ವಾಮಿಗಳ ಹಿರಿಯ ಮಗ, ಯುವ ನೇತಾರ, ಕರ್ನಾಟಕ ಸರ್ಕಾರದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠರು ೧೯೯೬ರಿಂದ ಅದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಲ್ಲಯ್ಯಸ್ವಾಮಿಗಳ ಅವಧಿಯಲ್ಲಿ ಡಿ.ಸಿ.ಸಿ. ಬ್ಯಾಂಕ್ ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಂಡಿತು. ಮುಂದೆ ಮಲ್ಲಯ್ಯಸ್ವಾಮಿಗಳ ಕಾಲಾವಧಿಯಲ್ಲಿ ಡಿ.ಸಿ.ಸಿ ಬ್ಯಾಂಕಿನ ಸುವರ್ಣಮಹೋತ್ಸವ ಹಾಗೂ ವಜ್ರ ಮಹೋತ್ಸವಗಳು ಆಚರಿಸಲ್ಪಟ್ಟವು. ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿದ್ದಾಗ ಮಲ್ಲಯ್ಯಸ್ವಾಮಿಗಳು ತಮ್ಮ ಅಮೂಲ್ಯ ಸಲಹೆಗಳನ್ನಿತ್ತು ಅದರ ಶ್ರೇಯೋಭಿವೃದ್ಧಿಗೆ ಪರೋಕ್ಷವಾಗಿ ನೆರವಾಗಿದ್ದಾರೆ.
ಸಹಕಾರಿ ಕ್ಷೇತ್ರಕ್ಕೆಮಲ್ಲಯ್ಯಸ್ವಾಮಿಗಳ ವಿಶಿಷ್ಟ ಕೊಡುಗೆ :ಸಹಕಾರಿ ರಂಗದಲ್ಲಿ ಮಾಡಿದ ಕಾರ್ಯಸಾಧನೆ ಅಮೂಲ್ಯವಾದದ್ದು. ೧೯೫೬ ರಿಂದ ೧೯೭೭ರವರೆಗೆ ಸಹಕಾರಿ ರಂಗದ ದೊರೆಯಾಗಿ ಚಿಕ್ಕೋಡಿ ಭಾಗದಲ್ಲಿ ಅವರು ವಿರಾಜಿಸಿದ್ದಾರೆ. ಈ ಇಪ್ಪತ್ತು ವರ್ಷಗಳು ಅವರ ಜೀವನದ ಸುವರ್ಣ ಅಧ್ಯಾಯವೆನಿಸಿದೆ. ಸಹಕಾರಿ ರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಹಲವಾರು ಗೌರವಯುತವಾದ ಅವಕಾಶಗಳನ್ನು ಪಡೆದುಕೊಂಡರು. ಬೆಂಗಳೂರಿನ ಸಹಕಾರಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಸುಮಾರು ಆರು ವರ್ಷಗಳಕಾಲ ಸೇವೆಗೈಯುವ ಗೌರವಯುತ ಅವಕಾಶವನ್ನು ಪಡೆದರು. ಸಹಕಾರಿ ಸಂಘಗಳ ಆರ್ಬಿಟ್ರೇಟರ್ ಆಗಿಯೂ ಕಾರ್ಯನಿರ್ವಹಿಸುವ ಗೌರವ ಇವರ ಪಾಲಿಗೆ ಒದಗಿಬಂತು. ೧೯೯೨ರಲ್ಲಿ ಅಖಿಲ ಭಾರತ ಸಹಕಾರಿ ಸ್ಪಿನ್ನಿಂಗ್ ಮಿಲ್ ಫೆಡರೇಶನ್-ಮುಂಬೈ ಎಂಬ ಪ್ರತಿಷ್ಠಿತ ಸಂಸ್ಥೆಗೆ ಸದಸ್ಯರಾಗಿ ಚುನಾಯಿತರಾಗಿದ್ದು ಹೆಮ್ಮೆ ಪಡುವ ವಿಷಯ. ಚಿಕ್ಕೋಡಿ ಭಾಗದಲ್ಲಿ ಸಹಕಾರಿ ತತ್ವದ ಆಧಾರದ ಮೇಲೆ ಹಲವಾರು ಸಂಸ್ಥೆಗಳನ್ನು ಪ್ರಾರಂಭಿಸಿ ತರುಣ ಪೀಳಿಗೆಯವರೂ ಅವುಗಳಲ್ಲಿ ಭಾಗಿಯಾಗುವಂತೆ ಮಾಡಿದ ಶ್ರೇಯಸ್ಸು ಮಲ್ಲಯ್ಯಸ್ವಾಮಿಗಳಿಗೆ ಸಲ್ಲುತ್ತದೆ. ಚಿಕ್ಕೋಡಿ ಭಾಗದಲ್ಲಿ ಸಹಕಾರಿ ಆಂದೋಲನವನ್ನು ಕೈಕೊಂಡು ಸಹಕಾರಿ ರಂಗದ ಯಶಸ್ವಿ ಧುರೀಣರೆಂದೆನಿಸಿದರು. ಮಲ್ಲಯ್ಯಸ್ವಾಮಿಗಳನ್ನುಳಿದು ಸಹಕಾರಿ ರಂಗವಿಲ್ಲ ಎನಿಸುವಷ್ಟು ಈ ಭಾಗದಲ್ಲಿ ಕಾರ್ಯಮಾಡಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಕಾರ್ಯವೆಸಗುವ ಮೂಲಕ ಬೆಳಗಾವಿ ಜಿಲ್ಲೆಯ ಪ್ರಗತಿಗೆ ನೇರವಾಗಿ ನೆರವಾದವರು. ತಮ್ಮ ಅನೇಕ ಮಿತ್ರರು ಸಹಕಾರಿ ತತ್ವದ ಮೇಲೆ ಸಂಘಗಳನ್ನು ಸ್ಥಾಪಿಸುವಾಗಲೂ ಅವರಿಗೆ ನೆರವಾಗಿದ್ದಾರೆ. ಮುಳುಗುತ್ತಿರುವ ಅನೇಕ ಸಹಕಾರಿ ಸಂಘಗಳಿಗೆ ಜೀವಸೆಲೆಯಾಗಿ ಅವರು ನೆರವಿನ ಹಸ್ತ ಚಾಚಿದ್ದಾರೆ. ಸದಲಗಾ, ಸಂಕನವಾಡಿ, ಶಿರಗಾವ, ಶಿರಗಾವವಾಡಿ, ಕೆರೂರ (ಎರಡು ಸೊಸೈಟಿ) ಉಮರಾಣಿ , ಕಾರತಗಾ, ಜೈನಾಪೂರ ಗ್ರಾಮಗಳ ಸೊಸೈಟಿಗಳನ್ನು ಮುಳುಗುವ ಹಂತದಿಂದ ಮೇಲೆತ್ತಿ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ, ಸಹಾಯ ಮಾಡಿದ್ದಾರೆ. ಬೇರೆ ಎಲ್ಲ ಜಿಲ್ಲೆಗಳಿಗಿಂತ ಬೆಳಗಾವಿ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಮಲ್ಲಯ್ಯಸ್ವಾಮಿಗಳೇ ಮುಖ್ಯ ಕಾರಣರೆನಿಸಿದ್ದಾರೆ. ಅಂದು ಮಲ್ಲಯ್ಯಸ್ವಾಮಿಗಳು ನೆಟ್ಟ ಸಹಕಾರಿ ವೃಕ್ಷದ ಫಲವನ್ನು ಈಗಿನ ತಲೆಮಾರಿನ ರೈತರು ಉಣ್ಣುತ್ತಿದ್ದಾರೆ.
ಮೂರನೇ ತಲೆಮಾರಿನ ಸಹಕಾರಿರತ್ನಗಳು ಕವಟಗಿಮಠ ಸಹೋದರರು :
ಮಹಾಂತೇಶ ಕವಟಿಗಿಮಠ : ಮಲ್ಲಯಸ್ವಾಮಿಗಳ ಇಬ್ಬರು ಪುತ್ರರಲ್ಲಿ ಹಿರಿಯ ಪುತ್ರ ಮಹಾಂತೇಶ ಕವಟಗಿಮಠರು, ಎರಡನೆ ಮಗ ಜಗದೀಶ ಕವಟಗಿಮಠ. ಚಿಕ್ಕೋಡಿ ಭಾಗದಲ್ಲಿ ಇರ್ವರ ಕೊಡುಗೆ ಅಪ್ರತಿಮ ಹಾಗೂ ಅನನ್ಯ.
ತಂದೆಯ ನಿಧನ ನಂತರ ಸಹಕಾರಿ ಕ್ಷೇತ್ರದ ಚುಕ್ಕಾಣೆಯನ್ನು ಹಿಡಿದ ಮಹಾಂತೇಶ ಕವಟಿಮಠರು ಅವರ ಸಮರ್ಥ ಉತ್ತರಾಧಿಕಾರಿಯಾಗಿ ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಸಹಕಾರಿ ಕ್ಷೇತ್ರವನ್ನು ಬಲಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಚಿದಾನಂದ ಸಕ್ಕರೆ ಕಾರಖಾನೆಯ ನಿರ್ದೇಶಕರಾಗಿ, ೨೦೦೮ರಲ್ಲಿ ಒಂದು ಅವಧಿಗೆ ಅಧ್ಯಕ್ಷರಾಗಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಶ್ರಮಿಸಿದರು. ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದಲ್ಲಿಯೇ ಒಂದು ಮಾದರಿ ಸಕ್ಕರೆ ಕಾರಖಾನೆಯನ್ನಾಗಿ ರೂಪಿಸಿದರು. ಚಿಕ್ಕೋಡಿಯ ಹತ್ತಿರ ಕೆರೂರ ಗ್ರಾಮದಲ್ಲಿ ಆರೇ ದಿನದಲ್ಲಿ ರಾಷ್ಟ್ರಮಟ್ಟದ ಕೃಷಿಮೇಳವನ್ನು ಆಯೋಜಿಸುವ ಮೂಲಕ ರೈತರಿಗೆ ನೆರವಾಗುವಂತಹ ನೂತನ ಬೆಳೆಗಳ ಆಮಿಷ್ಕಾರ ಹಾಗೂ ಕಡಿಮೆ ವೆಚ್ಚದಲ್ಲಿ ಆದಾಯ ಬರುವ ನಿಟ್ಟಿನಲ್ಲಿ ವಿಶೇಷ ಕೃಷಿತಜ್ಞರನ್ನು ಕರೆಯಿಸಿ ವಿಚಾರಸಂಕಿರಣಗಳನ್ನು ಆಯೋಜಿಸಿದರು. ಅತ್ಯಾಧುನಿಕ ಯಂತ್ರೋಪಕರಣಗಳನ್ನು ಪರಿಚಯಿಸಿದರು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪನವರು ಈ ಕೃಷಿ ಮೇಳವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಇಲ್ಲಿಲ್ಲ ಮಹಾಂತೇಶ ಕವಟಗಿಮಠರು ರೈತರ ಬಗ್ಗೆ ಹೊಂದಿರುವ ಕಾಳಜಿ ಹಾಗೂ ಅವರಿಗೆ ಏನಾದರೂ ಉತ್ತಮವಾದುದನ್ನು ಮಾಡಬೇಕೆಂಬ ಸಂಕಲ್ಪಗಳೆ ಕಾರಣವಾಗಿದ್ದವು.
ಮಾತ್ರವಲ್ಲದೆ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ) ಅದರ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ಮುನ್ನಡಿಯನ್ನು ಬರೆದರು.
ಸತತ ಎರಡು ಸಲ ವಿಧಾನ ಪರಿಷತ್ತಿನ ಸದಸ್ಯರಾಗಿ, ಸರ್ಕಾರದ ಮುಖ್ಯ ಸಚೇತಕರಾಗಿ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿಗೆ ಅಹರ್ನಿಶಿಯಾಗಿ ಶ್ರಮಿಸಿದ್ದಾರೆ. ಗ್ರಾಮ ಪಂಚಾಯತ್‌ಗಳ ಹಲವಾರು ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡಿದ್ದಾರೆ. ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಜಾರಿಗೆ ತರುವ ಮೂಲಕ ನೀರಿನ ಭವಣೆಯಿಂದ ರೈತರನ್ನು ಪಾರುಮಾಡಿದ್ದು ಅವರ ವಿಶಿಷ್ಟ ಕೊಡುಗೆಗಳಲ್ಲಿ ಒಂದಾಗಿದೆ. ಸದನದ ಒಳಗೂ ಹಾಗೂ ಸದನದ ಹೊರಗೂ ರೈತರ ಧ್ವನಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಗ್ರಾಮಪಂಚಾಯತ್‌ಗಳನ್ನು ತಳಮಟ್ಟದಲ್ಲಿ ಸಂಘಟಿಸಿ ಅಭಿವೃದ್ಧಿಯ ಪರ್ವವನ್ನು ಹೇಳಿದವರು ಶ ಮಹಾಂತೇಶಣ್ಣಾ ಕವಟಗಿಮಠರು.
ಜಾಗತಿಕ ಸಂಸ್ಥೆಯಾಗಿ ಶಿಕ್ಷಣ ಹಾಗೂ ಆರೋಗ್ಯಕ್ಷೇತ್ರದಲ್ಲಿ ಅದ್ವಿತೀಯ ಕೊಡುಗೆಯನ್ನು ನೀಡಿರುವ ಕೆಎಲ್‌ಇ ಸಂಸ್ಥೆಯಲ್ಲಿ ಕಳೆದ ೨೨ ವರ್ಷಗಳಿಂದ ಆಡಳಿತ ಮಂಡಳಿಯ ಸದಸ್ಯರಾಗಿ ಸಂಸ್ಥೆಯನ್ನು ಡಾ.ಪ್ರಭಾಕರ ಕೋರೆಯವರೊಂದಿಗೆ ವಿಸ್ತಾರೋನ್ನತವಾಗಿ ಕಟ್ಟಿಬೆಳೆಸಿದ ಶ್ರೇಯಸ್ಸು ಕವಟಗಿಮಠ ಅವರಿಗೆ ಸಲ್ಲುತ್ತದೆ.
ಚಿಕ್ಕೋಡಿ ಶ್ರೀ ಸಿದ್ದೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ, ಶತಮಾನೋತ್ಸವ ಆಚರಿಸುತ್ತಿರುವ ಚಿಕ್ಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಮಹಾಮಂಡಳಿ ನಿರ್ದೇಶಕರಾಗಿ ಸಲ್ಲಿಸುತ್ತಿರುವ ಸೇವೆ ದಾಖಲಾರ್ಹವೆನಿಸಿದೆ.
ಜಗದೀಶ ಕವಟಗಿಮಠಅವರು ಕಳೆದ ೨೦ ವರ್ಷಗಳಿಂದ ಕರ್ನಾಟಕ ಸಹಕಾರಿ ಮಂಡಳಿಗಳ ನಿಕಟಪೂರ್ವ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ರಾಜ್ಯ ಸಹಕಾರಿ ಸೌಹಾರ್ದಗಳಲ್ಲಿ ವಿಶೇಷವಾದ ಬದಲಾವಣೆಗಳನ್ನು ತಂದು ಅದರ ಕಚೇರಿಗಳನ್ನು ಬೆಳಗಾವಿಗೆ ಬರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅದರೊಂದಿಗೆ ಸೌಹಾರ್ದ ಪ್ರಾದೇಶಿಕ ನ್ಯಾಯಾಲವನ್ನು ಬೆಳಗಾವಿ ಬರುವಂತೆ ಮಾಡಿದ್ದು ಅವರ ಕರ್ತೃತ್ವಶಕ್ತಿ ನಿಚ್ಚಳ ನಿದರ್ಶನ. ಚಿಕ್ಕೋಡಿಯಲ್ಲಿ ಸಾಯಿ ಕ್ರೆಡಿಟ್ ಸೌಹಾರ್ದ ಸಂಸ್ಥೆಯನ್ನು ಹುಟ್ಟುಹಾಕಿ ಇಂದು ೧೦೦ ಕೋಟಿಗಳ ಠೇವಣ ಉಳಿಯುವಂತೆ ಮಾಡಿದ್ದಾರೆ ಸುಮಾರು ೧೫ ಶಾಖೆಗಳಲ್ಲಿ ಇದು ಇಂದು ವಿಸ್ತರಿಸಿಕೊಂಡಿದೆ. ಚಿಕ್ಕೋಡಿಯ ಪುರಸಭೆಯು ಕಳೆದ ೨೦ ವರ್ಷಗಳಿಂದ ಇವರ ಸುಪರ್ದಿಯಲ್ಲಿ ಮುನ್ನಡೆದಿರುವುದು ಅವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ.ಚಿಕ್ಕೋಡಿ ತಾಲೂಕಿನ ಕೃಷಿ ಹುಟ್ಟುವಳಿ ಸಹಕಾರಿ ಮಾರುಕಟ್ಟೆ,ನಿಪ್ಪಾಣ ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಾತ್ರವಲ್ಲದೆ ಸಿಎಲ್‌ಇ ಸಂಸ್ಥೆಗಳ ಮೂಲಕ ೧೮ ಶಿಕ್ಷಣ ಸಂಸ್ಥೆಗಳನ್ನು ಕೂಡ ಗುಣಾತ್ಮಕವಾಗಿ ಬೆಳೆಸಿದ್ದಾರೆ. ಹೀಗೆ ಜಗದೀಶ ಕವಟಗಿಮಠ ಸಹೋದರರ ಶಿಕ್ಷಣ ಹಾಗೂ ಸಹಕಾರಿ ನೆಲೆಯಲ್ಲಿ ಅಗಾಧವಾದ ಸೇವೆಯನ್ನು ನೀಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಹಕಾರಿ ಕ್ಷೇತ್ರಕ್ಕೆ ದಾಪುಗಾಲಿಟ್ಟ ನಾಲ್ಕನೇ ತಲೆಮಾರು :
ಈ ಮಾತು ಕವಟಗಿಮಠ ಮನೆತನಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಕಲ್ಲಯ್ಯ ಸ್ವಾಮಿಯವರ ಮರಿಮೊಮ್ಮಗ ಹಾಗೂ ಮಹಾಂತೇಶ ಕವಟಗಿಮಠರ ಮಗ ಶರತಚಂದ್ರ ಕವಟಗಿಮಠರು ನೂತನ ಸೌಹಾರ್ದತೆ ನಿಯಮಿತದ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೆ ಸಾಕ್ಷಿಯಾಗಲಿದ್ದಾರೆ. ಕ್ರಿಯಾಶೀಲ ಹಾಗೂ ಭರವಸೆಯ ಯುವ ಪ್ರತಿಭಾಸಂಪನ್ನ ಶರತಚಂದ್ರ ತಮ್ಮ ಮನೆತನದ ಸಹಕಾರಿ ಪಥವನ್ನು ಮುನ್ನಡೆಸಲಿದ್ದಾರೆ. ತಂದೆಯವರ ಗರಡಿಯಲ್ಲಿ ಪಳಗುತ್ತಿರುವ ಬಿಬಿಎ ಪದವೀಧರ ಶರತ್‌ಚಂದ್ರ ತನ್ನ ರಚನಾತ್ಮಕವಾದ ಕೆಲಸಗಳಿಂದ ಈಗಾಗಲೇ ಗುರುತಿಸಿಕೊಂಡವರು. ಭವ್ಯವಾದ ಮನೆತನದ ಪರಂಪರೆ ಹಾಗೂ ಶಕ್ತಿ ಒಂದೆಡೆಗೆ ಇದ್ದರೆ, ಇನ್ನೊಂದೆಡೆಗೆ ಸಹಕಾರಿ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಅದಮ್ಯ ಉತ್ಸಾಹ, ಹುರುಪುಗಳನ್ನು ತುಂಬಿಕೊಂಡವರು. ಅವರ ಅಭಿಯಾನಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನತೆಯೂ ಕೈಜೋಡಿಸಲೆಂಬುದು ಹಿರಿಯಾಸೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ