Kannada NewsLatest

ಪರಮಾತ್ಮನ ಅವತರಣೆಯೆ ಮಹಾಶಿವರಾತ್ರಿ

ವಿಶ್ವಾಸ್ ಸೊಹೋನಿ

ಭಾರತೀಯರು ಆಚರಿಸುವ ಎಲ್ಲ ಹಬ್ಬ ಹರಿದಿನಗಳಲ್ಲಿ `ಶಿವರಾತ್ರಿಯೇ ಸರ್ವಶ್ರೇಷ್ಠ’. ಶಿವರಾತ್ರಿಯಂದು ಪತಿತಪಾವನನೂ ಜ್ಞಾನೇಶ್ವರನು ಆದ `ಸದಾಶಿವನು ಬಂದು’ ಭಕ್ತರ ತಾಪವನ್ನು ತೊಲಗಿಸಿ, ಪಾಪವನ್ನು ಹರಿಸಿ, ಕೇಡು, ದುಃಖ, ಭಯ, ರೋಗ, ಭೂತ ಪಿಶಾಚಿಗಳ ಕಾಟ, ಅಪಮೃತ್ಯು, ಅಶಾಂತಿಯ ಪರದಾಟವನ್ನು ಪರಿಹರಿಸಿ, ಭಯಾನಕ ರಾಕ್ಷಸೀಯ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದಿ ಮಾಯಾ ಪಂಜರದಿಂದ ಬಿಡಿಸಿ ಆಯುರಾರೋಗ್ಯ ಅಷ್ಟೈಶ್ವರ್ಯಗಳನ್ನು ಸದಾಕಾಲಕ್ಕಾಗಿ, ಶಾಶ್ವತವಾಗಿ ದೈವಿ ಜನ್ಮಸಿದ್ಧ ಅಧಿಕಾರಗಳನ್ನು ದಯಾಪಾಲಿಸುತ್ತಾನೆಂದು ಭಾರತೀಯರ ನಂಬಿಕೆ.

ಪ್ರತಿದಿನ ಸೂರ್ಯನಿಲ್ಲದ ಸಮಯಕ್ಕೆ ರಾತ್ರಿಎನ್ನಲಾಗುತ್ತದೆ. ಆದರೆ ಶಿವರಾತ್ರಿಯ ರಾತ್ರಿಯೇ ಬೇರೆ. ಸೂರ್ಯಸ್ತವಾದ ನಂತರದ ಕತ್ತಲಿನ ರಾತ್ರಿ ಇದಾಗಿರದೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಸೂರ್ಯನ ಬೆಳಕಿನಲ್ಲಿ ಅಜ್ಞಾನವೆಂಬ ಕತ್ತಲುಕವಿದಿರುವ ರಾತ್ರಿ ಇದಾಗಿರುತ್ತದೆ. ಅಜ್ಞಾನಾಂಧಕಾರ ಅವರಿಸಿರುವ ರಾತ್ರಿ ಇದಾಗಿರುತ್ತದೆ. ಯಾವಾಗ ಎಲ್ಲ ಮಾನವರೂ ಅಧರ್ಮ, ಅನ್ಯಾಯ, ಅನೀತಿ, ಅನೈತಿಕತೆ, ಅರಾಜಕತ್ವ, ಅಶಾಂತಿ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮಭ್ರಷ್ಟ, ಕರ್ಮಭ್ರಷ್ಟರಾಗಿ ಅಜ್ಞಾನವೆಂಬ ಅಂಧಕಾರದಲ್ಲಿ ತೇಲುತ್ತಿರುವರೋ, ಕಣ್ಣಿದ್ದೂ ಕಣ್ಣು ಕಾಣದ ಕುರುಡರಂತೆ ನಡೆಯುತ್ತಿರುವರೋ, ಅಂತಹ ರಾತ್ರಿಯೇ ಕಾಳರಾತ್ರಿ. ಎಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತುಂಬಿತುಳುಕುತ್ತಿವೆಯೋ, ಎಲ್ಲಿ ಅಧಿಕಾರ ಲಾಲಸೆ, ಕಾಳಸಂತೆ, ಲಂಚ, ವಂಚನೆ, ಜಾತೀಯತೆ, ಪ್ರಾಂತೀಯತೆ, ಭಾಷಾಗೊಂದಲ, ಸುಳ್ಳುಗ್ರಂಥಗಳ ಮಾರ್ಗದರ್ಶನ, ಆಂಧವಿಶ್ವಾಸ ಮುಂತಾದವುಗಳಲ್ಲಿ ಮನುಷ್ಯಾತ್ಮರು ಸಿಕ್ಕಿ ಹಾಕಿಕೊಂಡು ತಲ್ಲಣಿಸುತ್ತ ದಾರಿಕಾಣದೆ ತಡಕಾಡುತ್ತಿರುವರೋ, ಅದೇ ಘೋರ ರಾತ್ರಿ. ಯಾವಾಗ “ಹೇ ಪರಮಪಿತ ಪರಮಾತ್ಮನೇ ಈ ಎಲ್ಲ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡು ತಂದೇ” ಎಂದು ಜನ ಸಾಮಾನ್ಯರು ಸಾಧು ಸಜ್ಜನರು ಭಗವಂತನಿಗೆ ಮೊರೆ ಇಡುತ್ತಿರುವರೋ ಅದೇ ಘೋರರಾತ್ರಿ, ಅದೇ ಮಹಾಶಿವರಾತ್ರಿಯ ಆಗಮನರಾತ್ರಿ.

“ತಮಸೋಮಾ ಜ್ಯೋತಿರ್ಗಮಯ”. ಅಜ್ಞಾನನವೆಂಬ ಅಂಧಕಾರವನ್ನು ತೊಲಗಿಸಿ ಸತ್ಯ ಜ್ಞಾನ ಪ್ರಕಾಶವನ್ನು ವಿಶ್ವಕ್ಕೆ ದಯಪಾಲಿಸಲು ಜ್ಞಾನಸೂರ್ಯನಾದ ಶಿವಪರಮಾತ್ಮನ ಆಗಮನವೇ “ಸತ್ಯ ಶಿವರಾತ್ರಿ”. ಆ ರಾತ್ರಿಗೆ ವಿಷ್ಣುರಾತ್ರಿ, ರಾಮರಾತ್ರಿ, ಕೃಷ್ಣರಾತ್ರಿ ಎಂದು ಯಾರೂ ಕರೆಯುವದಿಲ್ಲ. ಆದರೆ ಶಿವರಾತ್ರಿ ಎಂದೇ ಕರೆಯಲಾಗುತ್ತಿದೆ. ಏಕೆಂದರೆ ಜ್ಞಾನಸಾಗರನೂ ಸರ್ವಜ್ಞನೂ ಆಗಿರುವ ಶಿವಪರಮಾತ್ಮನೊಬ್ಬನೇ ಅಜ್ಞಾನಾಂಧಕಾರದ ರಾತ್ರಿಯನ್ನು ತನ್ನ ಜ್ಞಾನ ಪ್ರಕಾಶದಿಂದ ತೊಲಗಿಸಬಲ್ಲವನಾಗಿದ್ದಾನೆ.

ಅಜ್ಞಾನಾಂಧರಾತ್ರಿಗೂ ಮತ್ತು ಜ್ಞಾನ ಸೂರ್ಯನಾದ ಪರಮಾತ್ಮನ ಆಗಮನದ ಸಮಯಕ್ಕೂ ಸಂಬಂಧವನ್ನು ಸೂಚಿಸುವ ಹಬ್ಬವೇ ಶಿವರಾತ್ರಿ ಅಥವಾ ಮಹಾಶಿವರಾತ್ರಿ. ಸರ್ವ ಆತ್ಮರ ತಂದೆಯೊಬ್ಬ, ಅವನೇ ನಿರಾಕಾರ ಶಿವನು, ಅವನೇ ಅಲ್ಲಾ, ಅವನೆ ಈಶ, ಅವನೇ ಗಾಡ್, ಓಂಕಾರನು, ದೇವನೊಬ್ಬ, ನಾಮ ಹಲವು ಭಕ್ತರೆನಿತೊ ಜಗದೋಳು. ಭಾವ ಒಂದೇ, ಭಾಷೆ ಹಲವು, ನಮ್ಮಲೇಕೆ ಭೇದವೂ. ನಾನು ಹಿಂದು, ನಾನು ಮುಸಲ್ಮಾನ, ಕ್ರೈಸ್ತರೆಂಬ ಭೇದವೂ. ನಾಳೆ ನಾಡನಾಳುವಂತಾ ಮಕ್ಕಳಲ್ಲಿ ಜಗಳವೂ. ಬ್ರಹ್ಮ, ವಿಷ್ಣು, ಬಸವ, ಎಸು, ನಾನಕ ಪೈಗಂಬರೆಲ್ಲ ಒಬ್ಬದೇವನ ಮಕ್ಕಳು ಸರ್ವಧರ್ಮವನ್ನು ಬಿಟ್ಟು, ದೇಹ ಧರ್ಮವನ್ನು ಸುಟ್ಟು, ನಿರಾಕಾರ ಜೋರ್ತಿಬಿಂದು ತಂದೆ ಶಿವನ ನೆನೆಯುವಾ.
ಪರಮಾತ್ಮನ ಅವತರಣೆ ಆಗಿದೆ! ವಿಚಿತ್ರವೆನಿಸಿದರೂ ಸತ್ಯವಾಗಿದೆ. ಇಂದಿನ ಸಂಪೂರ್ಣ ಸಮಾಜ ಮತ್ತು ಯುಗವು ವೈಜ್ಞಾನಿಕವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ವಿಜ್ಞಾನದ ಸಾಧನಗಳು ಯಾವುದೇ ವಸ್ತುವನ್ನು ಪರೀಕ್ಷಿಸುವ ಮತ್ತು ಸಂಶೋಧಿಸುವಲ್ಲಿ ತನ್ನ ಮಹತ್ವಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿವೆ. ಆದರೆ ಪರಮಾತ್ಮನ ಕಾರ್ಯಶೈಲಿಯು ಸಂಪೂರ್ಣ ಭಿನ್ನವಾಗಿದೆ. ಗೀತೆಯಲ್ಲಿಯೂ ಸಹ ಭಗವಂತನು ಈ ರೀತಿ ಹೇಳಿದ್ದಾನೆ – ‘ನಾನು ಸೃಷ್ಠಿಯಲ್ಲಿ ಅವತರಿತನಾದಾಗ ನನ್ನನ್ನು ಕೆಲವರಲ್ಲಿ ಕೆಲವರು ಮಾತ್ರ ಗುರುತಿಸುತ್ತಾರೆ. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಇಂದು ಅದೇ ಆತ್ಮ-ಪರಮಾತ್ಮನ ಮಿಲನದ ವೇಳೆ ಮತ್ತು ಹೊಸ ಪ್ರಪಂಚದ ಸ್ಥಾಪನೆಯ ಕಾರ್ಯ ನಡೆಯುತ್ತಿದೆ. ಪರಮಾತ್ಮನ ಮಿಲನದ ರೀತಿಯು ಅತಿ ಭಿನ್ನವಾದುದು ಮತ್ತು ದಿವ್ಯವಾದುದು. ಪರಮಾತ್ಮ ಮಿಲನದ ಅನುಭವವನ್ನು ಲಕ್ಷಾಂತರ ಅನುಯಾಯಿಗಳು ಮಾಡಿದ್ದಾರೆ.

ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶವೇ ಶಿವರಾತ್ರಿ ! -ಪ್ರೊ. ಜಿ. ಎಚ್. ಹನ್ನೆರಡುಮಠ ವಿಶೇಷ ಲೇಖನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button