*ಮಲಪ್ರಭಾ ಕಾರ್ಖಾನೆಗೆ ಪುನಶ್ಚೇತನ ನೀಡುವುದೇ ನಮ್ಮ ಪ್ಯಾನೆಲ್ ಗುರಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪುನಶ್ಚೇತನ ನೀಡುವುದು, ರೈತರ ಹಿತ ಕಾಪಾಡುವುದೇ ನಮ್ಮ ತಂಡದ ಗುರಿ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಾರಥ್ಯದ, ಕಿತ್ತೂರು ಕ್ಷೇತ್ರದ ಶಾಸಕ ಬಾಬಾ ಸಾಹೇಬ್ ಪಾಟೀಲ್, ಖಾನಾಪುರ ಕ್ಷೇತ್ರದ ಶಾಸಕ ವಿಠಲ್ ಹಲಗೇಕರ್ ಒಳಗೊಂಡ ಸಮಾನ ಮನಸ್ಕರ ತಂಡವನ್ನು (ಪ್ಯಾನಲ್) ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಮಾನ ಮನಸ್ಕರು ಜತೆಗೂಡಿ ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡುತ್ತೇವೆ. ಒಂದು ಕಾಲದಲ್ಲಿ ಮಲಪ್ರಭಾ ಕಾರ್ಖಾನೆಯಲ್ಲಿ ಬಂಗಾರದ ಹೊಗೆ ಬರುತ್ತಿತ್ತು, ಇಂದು ಕಾರ್ಖಾನೆ ಸಂಕಷ್ಟದಲ್ಲಿದೆ. ಕಾರ್ಖಾನೆಯಲ್ಲಿ ಗತವೈಭವ ಸ್ಥಾಪಿಸುವುದೇ ನಮ್ಮ ತಂಡದ ಕನಸಾಗಿದೆ. ನಮ್ಮ ತಂಡದಿಂದ ಸ್ಪರ್ಧಿಸಿರುವ 15 ಜನರನ್ನು ಗೆಲ್ಲಿಸಿಕೊಡಬೇಕು ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.

ನಮ್ಮ ತಂಡದ ಬಗ್ಗೆ ರೈತರು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಮೇಲೆ 200 ಕೋಟಿ ರೂ ಸಾಲ ಇದೆ. 17 ಸಾವಿರ ರೈತರು ಕಾರ್ಖಾನೆಯ ಸದಸ್ಯರಾಗಿದ್ದಾರೆ. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಸರ್ಕಾರದಿಂದಲೂ ಮುಂದಿನ ದಿನಗಳಲ್ಲಿ ನೆರವು ಪಡೆಯಲಿದ್ದೇವೆ ಎಂದರು.
ಕಬ್ಬು ಬೆಳೆಗಾರರಿಗೆ ನ್ಯಾಯಯುತವಾಗಿ ಪ್ರತಿ 15 ದಿನಕ್ಕೊಮ್ಮೆ ಹಣ ವಾಪತಿಸುವುದು, ಕಾರ್ಖಾನೆಯನ್ನೇ ನಂಬಿರುವ ಸುಮಾರು 700 ನೌಕರರಿಗೆ ತಿಂಗಳಿಗೆ ಸರಿಯಾಗಿ ಸಂಬಳ ನೀಡುವುದು. ರೈತರ, ನೌಕರರ ಹಿತಕಾಪಾಡುವುದೇ ನಮ್ಮ ತಂಡದ ಕನಸು ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.

ಕಾರ್ಖಾನೆಯ ಕ್ರಷಿಂಗ್ ಸಾಮರ್ಥ್ಯವನ್ನು ಜಾಸ್ತಿ ಮಾಡುವುದು. ಸರ್ಕಾರದ ಸವಲತ್ತುಗಳನ್ನು ತಂದು ಕಾರ್ಖಾನೆಯನ್ನು ಉನ್ನತೀಕರಣಗೊಳಿಸುವುದು. ಕಾರ್ಖಾನೆಯ ಸುಪರ್ದಿಯಲ್ಲಿರುವ ಸಮುದಾಯ ಭವನ ಬಡ ರೈತರಿಗೆ ಕಡಿಮೆ ದರಕ್ಕೆ ದಕ್ಕುವುದಂತೆ ಮಾಡುವುದು. ಕಾರ್ಖಾನೆಯ ಗತವೈಭವವನ್ನು ವಾಪಸ್ ತರುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಹಿರಿಯರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. 28 ರಂದು ನಡೆಯಲಿರುವ ಚುನಾವಣೆಯಲ್ಲಿ ಸರ್ವ ಸದಸ್ಯರು ನಮ್ಮ ತಂಡವನ್ನು ಬೆಂಬಲಿಸಬೇಕು. ಕಾರ್ಖಾನೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಚನ್ನರಾಜ್ ಹಟ್ಟಿಹೊಳಿ ಮನವಿ ಮಾಡಿದರು.

**
** 15 ಅಭ್ಯರ್ಥಿಗಳ ಪಟ್ಟಿ ಫೈನಲ್*
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಕಿತ್ತೂರು ಕ್ಷೇತ್ರದ ಶಾಸಕ ಬಾಬಾ ಸಾಹೇಬ್ ಪಾಟೀಲ್, ಖಾನಾಪುರ ಕ್ಷೇತ್ರದ ಶಾಸಕ ವಿಠಲ್ ಹಲಗೇಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಒಳಗೊಂಡ ಸಮಾನ ಮನಸ್ಕರ ತಂಡದ (ಪ್ಯಾನಲ್) 15 ಮಂದಿ ಉಮೇದುವಾರಿಕೆ ಸಲ್ಲಿಸಿದರು. ಚನ್ನರಾಜ್ ಹಟ್ಟಿಹೊಳಿ, ಶಿವನಗೌಡ ದೊಡಗೌಡ ಪಾಟೀಲ್, ರಾಮನಗೌಡ ಸಣಗೌಡ ಪಾಟೀಲ್, ಶಂಕರ ಪರಪ್ಪ ಕಿಲ್ಲೇದಾರ, ರಘು ಚಂದ್ರಶೇಖರ ಪಾಟೀಲ್, ಶಿವಪುತ್ರಪ್ಪ ಬಸವಣ್ಣೆಪ್ಪ ಮರಡಿ, ಸುರೇಶ್ ಯಲ್ಲಪ್ಪ ಹುಲಿಕಟ್ಟಿ, ಶ್ರೀಶೈಲ ಬಸಪ್ಪ ತುರಮರಿ, ಶ್ರೀಕಾಂತ ನಾಗಪ್ಪಾ ಇಟಗಿ (ಎಲ್ಲರೂ ಸಾಮಾನ್ಯ ವರ್ಗ), ಶಂಕ್ರೆಪ್ಪ ಸದಪ್ಪ ಹೊಳಿ (ಬ ವರ್ಗ) , ಫಕೀರಪ್ಪ ಸಕ್ರೆಣ್ಣವರ (ಅ ವರ್ಗ), ಲಲಿತಾ ಬಾಲಚಂದ್ರ ಪಾಟೀಲ, ಸುನೀತಾ ಮಹಾಂತೇಶ್ ಲಂಗೋಟಿ (ಇಬ್ಬರೂ ಮಹಿಳಾ ವರ್ಗ), ಬರಮಪ್ಪ ಕಲ್ಲಪ್ಪ ಶೀಗಿಹಳ್ಳಿ (ಎಸ್‌ಟಿ), ಬಾಳಪ್ಪ ದುರಗಪ್ಪ ಪೂಜಾರ (ಎಸ್‌ಸಿ) ಕಣದಲ್ಲಿದ್ದಾರೆ.