Latest

ಮಲಪ್ರಭೆಗೆ ಜೀವಕಳೆ ತುಂಬಬೇಕಿದೆ

ಸಂಗಮೇಶ ನಿರಾಣಿ

ಸಂಗಮೇಶ ಆರ್. ನಿರಾಣಿ

ಪಶ್ಚಿಮ ಘಟ್ಟಗಳು ನೂರಾರು ನದಿ ಹಾಗೂ ಜೀವತೊರೆಗಳ ಉಗಮಸ್ಥಾನಗಳಾಗಿವೆ. ಇಲ್ಲಿ ಹುಟ್ಟುವ ಕೆಲವು ನದಿಗಳು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರಿದರೆ, ಇನ್ನು ಕೆಲವು ಪೂರ್ವಾಭಿಮುಖವಾಗಿ ಹರಿದು ವಿಶಾಲವಾದ ಬಯಲುಸೀಮೆಯನ್ನು ಸಮೃದ್ದಗೊಳಿಸಿವೆ. ಪಶ್ಚಿಮದ ನದಿಗಳು ಪಕೃತಿಯನ್ನು ಸಮೃದ್ದಗೊಳಿಸಿದ್ದರೆ, ಪೂರ್ವದ ನದಿಗಳು ಜನರ ಬದುಕನ್ನೆ ಸಮೃದ್ದಗೊಳಿಸಿವೆ. ಅಂತಹ ಅಪೂರ್ವ ನದಿಗಳಲ್ಲಿ ಮಲಪ್ರಭಾ ನದಿಯು ಪ್ರಮುಖವಾಗಿದೆ.

ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹುಟ್ಟುತ್ತದೆ. ಬೆಳಗಾವಿ, ಬಾಗಲಕೋಟ ಜಿಲ್ಲೆಗಳಲ್ಲಿ ೩೦೪ ಕಿ.ಮೀ ಹರಿದು ಕೂಡಲಸಂಗಮದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಹಲಾತ್ರಿ, ಬೆಣ್ಣಿಹಳ್ಳ, ತುಪರಿಹಳ್ಳ, ತಾಸಹಳ್ಳಗಳು ಮಲಪ್ರಭೆಯನ್ನು ಸಂಗಮಿಸುತ್ತವೆ. ಮಲಪ್ರಭಾ ನದಿಯು ಕೃಷ್ಣಾ ನದಿಯ ಉಪನದಿಯಾಗಿದ್ದರೂ ಬೆಳಗಾವಿ, ಬಾಗಲಕೋಟ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ೧೧,೫೪೯ ಚ.ಕಿ.ಮೀ.ಯಷ್ಟು ವಿಶಾಲವಾದ ಜಲಾನಯನ ಪ್ರದೇಶವನ್ನು ಸೃಷ್ಟಿಸಿದೆ.

   ಶತಮಾನಗಳ ಹಿಂದೆ ಶ್ರೀಮಂತವಾಗಿ ಹರಿದಿದ್ದ ಮಲಪ್ರಭೆ ಇಂದು ಬಡವಾಗಿದ್ದಾಳೆ. ನದಿ ಹರಿವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ತನ್ನ ಜಲಾನಯನ ಪ್ರದೇಶವನ್ನು ಸಮರ್ಪಕವಾಗಿ ಸಲಹಲು ಸಾಧ್ಯವಾಗದಷ್ಟು ಮಲಪ್ರಭೆ ಕಳೆಗುಂದಿದ್ದಾಳೆ. ಇದಕ್ಕೆ ಹತ್ತು-ಹಲವಾರು ಕಾರಣಗಳಿವೆ. ಮಲಪ್ರಭೆಗೆ ಕೊರತೆಯಾಗುತ್ತಿರುವ ಜಲ ಸಂಪನ್ಮೂಲವನ್ನು ತುಂಬಿಕೊಡಲು ಸಾಕಷ್ಟು ಪರ್ಯಾಯ ಮಾರ್ಗಗಳಿದ್ದರೂ ಇಚ್ಚಾಶಕ್ತಿ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ.

 

ಮಲಪ್ರಭಾ ನೀರಾವರಿ ಯೊಜನೆ:

         ನಿರಂತರ ಬರಗಾಲಕ್ಕೆ ತುತ್ತಾಗುತ್ತಿದ್ದ ಬೈಲಹೊಂಗಲ, ಸವದತ್ತಿ, ರಾಮದುರ್ಗ, ನರಗುಂದ, ನವಲಗುಂದ,  ರೋಣ ಹಾಗೂ ಬದಾಮಿ ತಾಲೂಕಿನ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮಲಪ್ರಭಾ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಯಿತು. ೧೯೭೨ರಲ್ಲಿ ಮಲಪ್ರಭಾ ನದಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನ್ನವಳ್ಳಿ ಸಮೀಪದ ನವಿಲುತಿರ್ಥ ಬಳಿ ಜಲಾಶಯ ನಿರ್ಮಿಸಲಾಯಿತು. ಈ ಜಲಾಶಯವು ೩೭.೭೩ ಟಿ.ಎಂ.ಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಇದರಿಂದ ೨,೧೮,೧೯೧ ಹೆಕ್ಟೆರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ೨೨,೦೦೦ ಕೊಟಿ ವೆಚ್ಚದಲ್ಲಿ ೧೬೮ ಕಿ.ಮೀ. ಉದ್ದದ ಎಡದಂಡೆ ಮತ್ತು ೧೩೮ ಕಿ.ಮೀ. ಉದ್ದದ ಬಲದಂಡೆ ಕಾಲುವೆಗಳನ್ನು ನಿರ್ಮಿಸಲಾಗಿದೆ. ಎಡದಂಡೆ ಕಾಲುವೆಗೆ ಉತ್ತರ ಕರ್ನಾಟಕದ ಹೆಮ್ಮೆಯ ನೀರಾವರಿ ತಜ್ಞ ಶ್ರೀ ಎಸ್. ಜಿ. ಬಾಳೆಕುಂದ್ರಿಯವರ ಹೆಸರಿಡಲಾಗಿದೆ. ಬರಗಾಲ ಪೀಡಿತ ಪ್ರದೇಶವನ್ನು ಸಮೃದ್ದಗೊಳಿಸುವ ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದ ಜಲಾಶಯಕ್ಕೆ ನಿರಂತರ ನೀರಿನ ಕೊರತೆಯಾಗುತ್ತಿದ್ದೂ, ಇಲ್ಲಿಯವರೆಗೆ ಕೇವಲ ೪-೫ ಬಾರಿ ಮಾತ್ರ ಭರ್ತಿಯಾಗಿದೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಸಂಪೂರ್ಣ ನೀರಾವರಿ ಸಾಧಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

 

ಕೇಳಿಬರುತ್ತಿದೆ ನದಿ ಒತ್ತುವರಿ ಕೂಗು ! ಪರಿಸ್ಥಿತಿಗೆ ನೈಜ ಕಾರಣ ಏನು?

ಮೊದಲು ವಿಶಾಲವಾಗಿ ಹರಿಯುತ್ತಿದ್ದ ನದಿ ಇಂದು ವರ್ಷದ ಬಹುಪಾಲು ತಿಂಗಳು ನೀರಿಲ್ಲದೇ ಭಣಗುಡುತ್ತಿದೆ. ಮಳೆಗಾಲದಲ್ಲಿ ದೊರೆತಯುವ ಪೂರ್ಣ ನೀರನ್ನು ಜಲಾಶಯದಲ್ಲಿ ಶೇಖರಿಸಿದರೂ ಜಲಾಶಯ ಭರ್ತಿಯಾಗುತ್ತಿಲ್ಲ. ಹೀಗಾಗಿ ೧೯೭೨ರಿಂದ ಈಚೆಗೆ ನವೀಲುತೀರ್ಥ ಜಲಾಶಯದ ಕೆಳಭಾಗದಿಂದ ಕೂಡಲಸಂಗಮದವರೆಗೂ ೧೭೫ ಕಿ.ಮೀ ನದಿ ಪಾತ್ರದಲ್ಲಿ ನೈಸರ್ಗಿಕ ನೀರಿನ ಹರಿವು ಸಂಪೂರ್ಣ ನಿಂತು ಹೋಗಿದೆ. ಇದರಿಂದ ನದಿಯಲ್ಲಿ ನೀರು ಇಲ್ಲದಿದ್ದರಿಂದ ಸಹಜವಾಗಿಯೇ ಒತ್ತುವರಿಯಾಗಿದೆ. ಹೀಗಾಗಿ ಗತ ವೈಭವ ಹೊಂದಿರುವ ಮಲಪ್ರಭಾ ನದಿ ಅಳಿವಿನಂಚಿಗೆ ತಲುಪಿದೆ.

ಮಲಪ್ರಭಾ ನದಿಗೆ ನೀರಿನ ಲಭ್ಯತೆ ಕಡಿಮೆ ಇರುವುದು ತಿಳಿದಿದ್ದರೂ ಜಲಾಶಯ ಕಟ್ಟಿದ್ದರಿಂದ ನದಿ ಬಡವಾಯಿತು. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಾಲುವೆಗಳಿಗೂ ಪೂರ್ಣಪ್ರಮಾಣದಲ್ಲಿ ನೀರು ಬರಲಿಲ್ಲ. ವಿಶಾಲವಾಗಿದ್ದ ನದಿ ಪಾತ್ರ ಹಳ್ಳದಾಕಾರಕ್ಕೆ ತಲುಪಿತು.

ಎಲ್ಲ ನಾಗರಿಕತೆಗಳು ನದಿ ದಂಡೆ ಮೇಲೆ ಜನ್ಮ ತಾಳಿವೆ. ನಾಗರಿಕತೆ ವಿಕಾಸವಾದಂತೆ ನದಿ ಹರಿವಿದೆ, ಜನವಸತಿಗೆ ಆನುಕೂಲವಾಗುತ್ತದೆ ಎಂದು ನದಿ ದಂಡೆ ಮೇಲೆ ಹಳ್ಳಿಗಳು, ಪಟ್ಟಣಗಳು ಸೃಷ್ಟಿಯಾದವು. ಆದರೆ ಇಂದು ಅಲ್ಲಿ ನದಿ ಇದ್ದರೂ ನೀರು ಇಲ್ಲ. ಹೀಗಾಗಿ ಆ ನದಿಯನ್ನು ನಂಬಿ ಒಕ್ಕುಲತನ ನಡೆಸುತ್ತಿದ್ದ ರೈತ ಬಸವಳಿದಿದ್ದಾನೆ. ಈ ಕಡೆ ನದಿಯಲ್ಲಿ ನೀರು ಹರಿಯುತ್ತಿಲ್ಲ. ಆ ಕಡೆ ಲಕ್ಷಾಂತರ ಕೋಟಿ ಖರ್ಚು ಮಾಡಿ ಜಲಾಶಯ, ಕಾಲುವೆ ನಿರ್ಮಿಸಿದರೂ ಅದರ ಉಪಯೋಗ ರೈತನಿಗೆ ದೊರಕಲಿಲ್ಲ. ಒಟ್ಟಿನಲ್ಲಿ ನೀರಲ್ಲದೇ ಬದುಕೇ ದುರಂತವಾಗಿದೆ. ಈ ಎಲ್ಲ ನೈಜ ಸಮಸ್ಯೆಗೆ ಮೂಲ ಕಾರಣ ಯಾರು? ಸಮಸ್ಯೆಯ ಮೂಲ ಎಲ್ಲಿದೆ ಎಂಬುದು ಅರ್ಥವಾಗಿರಬೇಕಲ್ಲವೇ? ಜಲಾಶಯ ಕಟ್ಟಿದ ಮೇಲೂ ನೀರಿನ ನೈಸರ್ಗಿಕ ಹರಿವಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊAಡಿದ್ದರೆ, ನದಿ ನಿರಂತರವಾಗಿ ಹರಿಯುತ್ತಿದ್ದರೆ ಒತ್ತುವರಿಯ ಪ್ರಶ್ನೆ ಎದುರಾಗುತ್ತಿತ್ತೆ?

ಕೇವಲ ಪ್ರವಾಹ ಬಂದಾಗ ಮಾತ್ರ ಭೋರ್ಗರೆದು ನಂತರ ನೀರಿನ ಹರಿವೇ ನಿಂತು ಹೋಗುವ ದಯನೀಯ ಪರಿಸ್ಥಿತಿ ತಲುಪಿರುವ ಮಲಪ್ರಭಾ ನದಿಯ ಅಸ್ಮಿತೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ನದಿ ಒಂದು ರಾಷ್ಟ್ರದ ಸರ್ವಶ್ರೇಷ್ಟ ಸಂಪನ್ಮೂಲ. ನದಿ ಮಾಲಿನ್ಯವನ್ನು, ಒತ್ತುವರಿಯನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನದಿ, ಪರಿಸರ, ಜೀವ ವೈವಿದ್ಯ ಯಾವುದೂ ನಮ್ಮ ಸ್ವಯಾರ್ಜಿತ ಆಸ್ತಿಯಲ್ಲ. ಅದು ನಮ್ಮ ಪೂರ್ವಜರಿಂದ ನಿಸರ್ಗದತ್ತವಾಗಿ ಬಂದ ಬಳುವಳಿ. ಈ ಎಲ್ಲ ಸಿರಿ ಸಂಪತ್ತನ್ನು ಜತನವಾಗಿ ಮುಂದಿನ ಪೀಳಿಗೆಗೆ ಮುಟ್ಟಿಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ.

ಮಲಪ್ರಭೆಯನ್ನು ಜಲಾನಯನ ಪ್ರದೇಶದ ೪ ಜಿಲ್ಲೆಗಳ ೯ ತಾಲೂಕುಗಳು ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿವೆ. ಸಾವಿರಾರು ಎಕರೆ ಭೂಮಿ ನೀರಾವರಿಯಿಂದ ವಂಚಿತವಾಗಿದೆ. ಕೇವಲ ಕೃಷಿ ಮಾತ್ರವಲ್ಲದೇ ಹುಬ್ಬಳ್ಳಿ-ಧಾರವಾಡ ನಗರಗಳ ಕುಡಿಯುವ ನೀರಿಗೆ ನವಿಲುತೀರ್ಥ ಜಲಾಶಯವೇ ಆಧಾರವಾಗಿದೆ. ಖಾನಾಪೂರ, ಬೈಲಹೊಂಗಲ್, ಸವದತ್ತಿ, ರಾಮದುರ್ಗ, ಬಾದಾಮಿ ಪಟ್ಟಣಗಳು ಹಾಗೂ ನದಿ ಪಕ್ಕದ ಹಳ್ಳಿಗಳು ಕುಡಿಯುವ ನೀರಿಗೆ ಮಲಪ್ರಭೆಯನ್ನೆ ಅವಲಂಭಿಸಿವೆ. ಮಲಪ್ರಭೆಯ ನೀರಿನ ಕೊರತೆಗೆ ಪರ್ಯಾಯ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ.

ಕಳಸಾ ಬಂಡೂರಿ ಸಮಸ್ಯೆ ಇತ್ಯರ್ಥವಾಗಿ ಕೆಂದ್ರ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಗೆಜೆಟ್ ಹೊರಡಿಸಿದೆ. ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಕಾಯ್ದಿರಿಸಿದೆ. ಇದರಿಂದ ಲಭಿಸುವ ೩.೯ ಟಿಎಂಸಿ ಅಡಿ ನೀರಿನಿಂದ ಹುಬ್ಬಳ್ಳಿ-ಧಾರವಾಡ ನೀರಿನ ಸಮಸ್ಯೆ ಬಗೆಹರಿಸಬಹುದೇ ವಿನಃ ಮಲಪ್ರಭೆಯ ರೈತರ ಬದುಕನ್ನು ಬೆಳಗಲು ಸಾಧ್ಯವಿಲ್ಲ.

ಮಲಪ್ರಭೆಯನ್ನು ಸಮೃದ್ದಗೊಳಿಸಲು ವಿಫುಲ ಅವಕಾಶಗಳಿವೆ:

ಮೊದಲು ಈ ಒತ್ತುವರಿ ತೆರವಾಗಬೇಕು. ಒತ್ತುವರಿ ತೆರವುಗೊಳಿಸಿದ ನಂತರ ನದಿಯಲ್ಲಿ ನೀರು ನಿರಂತರವಾಗಿ ಹರಿಯುವಂತೆ ಮಾಡುವ ದೃಷ್ಟಿಯಲ್ಲಿ ಸರ್ಕಾರ ಚಿಂತನೆ ನಡೆಸಬೇಕಿದೆ ಇಲ್ಲವಾದಲ್ಲಿ ಈ ಸಮಸ್ಯೆ ಪುನಾರಾವರ್ತನೆಯಾಗುತ್ತದೆ. ಮಲಪ್ರಭೆಯ ನೀರಿನ ಕೊರತೆಯನ್ನು ೫ ನದಿಗಳಿಂದ ಪರಿಹರಿಸಬಹುದು. ಮಹಾದಾಯಿ ನದಿಯಿಂದ ನೇರವಾಗಿ ಮಲಪ್ರಭಾ ನದಿಗೆ ನೀರು ಹರಿಸಬಹುದು.

ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ಮೂಲಕ ೩ ಯೋಜನೆಗಳ ವರದಿ ತಯಾರಿಸಿ ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದರಂತೆ ಅಮೃತಧಾರೆ ಯೋಜನೆಯಡಿ ಪಶ್ಚಿಮ ಘಟ್ಟಗಳಲ್ಲಿಯೇ ಹುಟ್ಟುವ ಕಾಳಿ ನದಿಯಿಂದ ಮಲಪ್ರಭಾಗೆ ನೀರು ಹರಿಸಲು ೨ ಅವಕಾಶಗಳಿವೆ. ಸೂಪಾ ಜಲಾಶಯದ ಮೇಲ್ಭಾಗದಲ್ಲಿಯ ನೀರನ್ನು ಟನಲ್ ಮುಖಾಂತರ ೩೪ ಕಿ.ಮೀ ಅಂತರದಲ್ಲಿ ೨೩೮೦ ಕೋಟಿ ವೆಚ್ಚದಲ್ಲಿ ೨೫ ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸಬಹುದು ಅಥವಾ ಸೂಫಾ ಜಲಾಶಯದ ಕೆಳಭಾಗದಿಂದ ೨ ಹಂತದ ಲಿಫ್ಟಿಂಗ್ ಮೂಲಕ ೬೮ ಕಿ. ಮೀ. ಅಂತರದಲ್ಲಿ ೫೫೦೦ ಕೋಟಿ ವೆಚ್ಚದಲ್ಲಿ ಪೈಪಲೈನ್ ಮೂಲಕ ಮಲಪ್ರಭಾ ನದಿಗೆ ೨೫ ಟಿಎಂಸಿ ನೀರು ಹರಿಸಬಹುದು.

ಬಸವಧಾರೆ ಯೋಜನೆ ಮೂಲಕ ಕೃಷ್ಣಾ ನದಿಯ ನೀರನ್ನು ಮಳೆಗಾಲದಲ್ಲಿ ೪ ತಿಂಗಳು ಅಂಕಲಿ ಬಳಿ ಲಿಫ್ಟ್ ಮಾಡುವ ಮೂಲಕ ೪೪ ಕಿ.ಮೀ ದೂರದ ಪೈಪಲೈನ್ ಮೂಲಕ ಹಿಡಕಲ್ ಜಲಾಶಯಕ್ಕೆ ೩೦ ಟಿಎಂಸಿ ನೀರು ಹರಿಸಿದರೆ ಅಲ್ಲಿಂದ ೬೦ ಕಿ.ಮೀ. ಉದ್ದದ ಗ್ರಾವಿಟಿ ಕಾಲುವೆ ಮೂಲಕ ಮಲಪ್ರಭಾ ನದಿಗೆ ಸೇರಿಸಬಹುದು.

ವಿಜಯಧಾರೆ ಯೋಜನೆ ಮೂಲಕ ಹಿರಣ್ಯಕೇಶಿ ನದಿ ನೀರನ್ನು ಹುಕ್ಕೇರಿ ತಾಲೂಕಿನ ಹುನೂರು ಬಳಿ ಲಿಫ್ಟ್ ಮಾಡಿ ೧೮೦ ಕೋಟ ವೆಚ್ಚದಲ್ಲಿ ಕೇವಲ ೩ ಕಿ. ಮೀ ಅಂತರದಲ್ಲಿರುವ ಹಿಡಕಲ್ ಜಲಾಶಯಕ್ಕೆ ವಾರ್ಷಿಕ ೧೦ ಟಿ.ಎಂ.ಸಿ ಅಡಿ ನೀರು ಹರಿಸಿದರೆ ಅಲ್ಲಿಂದ ೬೦ ಕಿ.ಮೀ. ಉದ್ದದ ಗ್ರಾವಿಟಿ ಕಾಲುವೆ ಮೂಲಕ ಮಲಪ್ರಭಾ ನದಿಗೆ ಸೇರಿಸಬಹುದು.

ನದಿ ನಿರಂತರವಾಗಿ ಹರಿಯುತ್ತಿದ್ದರೆ ಒತ್ತುವರಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದಕ್ಕಾಗಿ ಕೃಷ್ಣಾ, ಘಟಪ್ರಭಾ ನದಿಗಳಿಗೆ ನಿರ್ಮಿಸಿರುವಂತೆ ಮಲಪ್ರಭಾ ನದಿಗೂ ನವೀಲತೀರ್ಥದಿಂದ ಕೂಡಲಸಂಗಮದವರೆಗೂ ೧೭೫ ಕಿ.ಮೀ ಅಂತರದಲ್ಲ್ಲಿ ಪ್ರತಿ ೨-೩ ಕಿ.ಮೀಗೆ ಒಂದರಂತೆ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ನಿಲ್ಲಿಸಬೇಕು. ಇದರಿಂದ ಅಂತರ್ಜಲ ವೃದ್ದಿಯಾಗಿ ಈ ಭಾಗದ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುತ್ತದೆ.

 

ರಿವರ್ ಉಳಿವಿಗಾಗಿ ರಿವರ್ಸ್ ಲಿಫ್ಟಿಂಗ್ ಮಾಡಿ ಮಲಪ್ರಭೆಗೆ ನೀರು ತುಂಬಿಸಿ !

ತಂತ್ರಜ್ಞಾನ ಮುಂದುವರೆದಿದೆ. ಪ್ರತಿ ಸಮಸ್ಯೆಗೂ ವೈಜ್ಞಾನಿಕ ಪರಿಹಾರವಿದೆ. ರೈತರ ಕಲ್ಯಾಣವಾಗಬೇಕು, ನದಿ ಸಮೃದ್ದವಾಗಿರಬೇಕು, ಭೂ ತಾಯಿ ಹಸಿರಾಗಿರಬೇಕು ಎಂಬ ಧ್ಯೇಯದೊಂದಿಗೆ ಚಿಂತನೆ ನಡೆಸಿದರೆ ಹೊಸ ಮಾರ್ಗ ತೆರೆದುಕೊಳ್ಳುತ್ತದೆ. ಮಲಪ್ರಭಾ ನದಿ ಕೂಡಲ ಸಂಗಮದಲ್ಲಿ ಕೃಷ್ಣೆಯನ್ನು ಸೇರುತ್ತದೆ. ಮುಂದೆ ನಾರಾಯಣಪೂರ ಜಲಾಶಯವಿರುವುದರಿಂದ ಜಲಾಶಯದ ಹಿನ್ನೀರು ಸಂಗಮದವರೆಗೂ ವ್ಯಾಪಿಸಿದೆ. ನವಿಲುತೀರ್ಥದಿಂದ ಸಂಗಮದವರೆಗೂ ನಿರಂತರ ಚೆಕ್‌ಡ್ಯಾಂಗಳನ್ನು ಕಟ್ಟಿ, ಪ್ರತಿ ಚೆಕ್‌ಡ್ಯಾಂಗಳನ್ನು ಸಂಗಮದಿAದ ರಿವರ್ಸ್ ಲಿಫ್ಟಿಂಗ್ ಮೂಲಕ ಭರ್ತಿ ಮಾಡಿದಲ್ಲಿ ಮಲಪ್ರಭೆ ಪಾತ್ರ ಹಿರಿದಾಗುತ್ತದೆ. ನದಿ ಸಮೃದ್ದಿಯಾಗುತ್ತದೆ. ಇದು ಹೊಸ ವಿಚಾರವೇನಲ್ಲ, ಈಗಾಗಲೇ ದೇಶದ ನಾನಾ ಮೂಲೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ತೆಲಂಗಾಣದ ಕಾಲೇಶ್ವರಂ ಯೋಜನೆಯಡಿ ಗೋದಾವರಿ ನದಿ ನೀರನ್ನು ಹಿಮ್ಮುಖವಾಗಿ ಲಿಫ್ಟ್ ಮಾಡಿ ನದಿ, ಕೆರೆಗಳನ್ನು ತುಂಬಿಸಿದ್ದಾರೆ. ಒಂದು ಗೋದಾವರಿ ನದಿ ಇಡೀ ರಾಜ್ಯವನ್ನೇ ಸಮೃದ್ದವಾಗಿಸಿದೆ. ಇದಲ್ಲದೇ ನಮ್ಮ ಜಿಲ್ಲೆಯಲ್ಲಿಯೇ ಕೃಷ್ಣಾನದಿಗೆ ಕಟ್ಟಿರುವ ಚಿಕ್ಕಪಡಸಲಗಿ, ಗಲಗಲಿ ಬ್ಯಾರೇಜ್‌ಗಳಲ್ಲಿ ನೀರನ್ನು ಹಿಮ್ಮುಖವಾಗಿ ಲಿಫ್ಟ್ ಮಾಡುವುದು ಹಲವಾರು ವರ್ಷಗಳಿಂದ ನಡೆದು ಬಂದಿದೆ.

 

ಮಲಪ್ರಭೆಗಿದೆ ಧಾರ್ಮಿಕ, ಸಾಂಸ್ಕೃತಿಕ ಹಿರಿತನ:

ಮಲಪ್ರಭೆ ತನ್ನ ಒಡಲಿನಲ್ಲಿ ಧಾರ್ಮಿಕತೆ, ಪರಂಪರೆಯನ್ನು ಪೋಷಿಸಿ ಬೆಳೆÀಸಿದ್ದಾಳೆ. ಪುರಾಣಗಳಲ್ಲಿ ಮಲಪ್ರಭೆಯನ್ನು ‘ಮಲಾಪಹರಿ’ ಎಂದು ಕರೆಯುತ್ತಿದ್ದರು. ಕಾಲಾಂತರದಲ್ಲಿ ಅದು ಮಲಪ್ರಭಾ ಆಯಿತು. ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಥಾನ ಕರ್ನಾಟಕ-ಮಹಾರಾಷ್ಟçದ ಅಸಂಖ್ಯ ಭಕ್ತರಿಗೆ ಪವಿತ್ರ ಸ್ಥಳ. ಜಮದಗ್ನಿ ಋಷಿ, ರೇಣುಕಾದೇವಿ & ಪರುಶುರಾಮರ ಕುರಿತು ಇಲ್ಲಿ ಹಲವಾರು ಐತಿಹ್ಯಗಳಿವೆ. ರಾಮಾಯಣ ಕಾಲದಲ್ಲಿ ರಾಮದುರ್ಗ ತಾಲೂಕಿನ ಮಲಪ್ರಭಾ ದಂಡೆ ಮೇಲೆ ಶಬರಿ ಆಶ್ರಮವಿತ್ತು. ಅಲ್ಲಿಯೇ ಶಬರಿಗೆ ರಾಮನ ದರ್ಶನವಾಗಿದೆ. ಬದಾಮಿ ಬಳಿ ಬನಶಂಕರಿದೇವಿ ಶಕ್ತಿಪೀಠವಿದೆ. ಬದಾಮಿ ಚಾಲುಕ್ಯರು ಮಲಪ್ರಭೆಯ ದಂಡೆಯಲ್ಲಿ ವಾತಾಪಿಯನ್ನು (ಬಾದಾಮಿ) ರಾಜಧಾನಿ ಮಾಡಿಕೊಂಡು ಸಾಮ್ರಾಜ್ಯ ಕಟ್ಟಿದ್ದಾರೆ.

ಸಮಾನತೆಗೆ ನಾಂದಿ ಹಾಡಿದ ೧೨ ಶತಮಾನದ ಶ್ರೇಷ್ಟ ಸಮಾಜ ಸುಧಾರಕ, ವಿಶ್ವಗುರು ಬಸವಣ್ಣನವರ ಐಕ್ಯಮಂಟಪ ಕೃಷ್ಣೆ ಮಲಪ್ರಭೆಯನ್ನು ಸಂಗಮಿಸುವ ಕೂಡಲ ಸಂಗಮದಲ್ಲಿದೆ. ಇಲ್ಲಿಯ ಐತಿಹಾಸಿಕ ಸಂಗಮೇಶ್ವರ ದೇವಸ್ಥಾನವೂ ಪ್ರಸಿದ್ದವಾಗಿದೆ. ಕಾಕತಾಳೀಯವೆಂಬಂತೆ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕೆಯವರ ಐಕ್ಯಮಂಟಪವು ಮಲಪ್ರಭಾ ದಂಡೆಯ ಎಂ.ಕೆ. ಹುಬ್ಬಳ್ಳಿ ಬಳಿ ಇರುವುದು ವಿಶೇಷ. ಬಾಗಲಕೋಟೆ ಜಿಲ್ಲೆಯ ಶಿವಯೋಗ ಮಂದಿರ ಈ ಎಲ್ಲ ಕ್ಷೇತ್ರಗಳು ವಿರಶೈವ ಲಿಂಗಾಯತರ ಪವಿತ್ರ ಶೃದ್ದಾ ಕೇಂದ್ರಗಳು. ಬದಾಮಿ ಚಾಲುಕ್ಯರ ಕಾಲದ ಬಾದಾಮಿ ಗುಹೆಗಳು, ಐಹೊಳೆ, ಪಟ್ಟದಕಲ್ಲು ಮಹಾಕೂಟ ಯುನೆಸ್ಕೋ ಪಟ್ಟಿಯಲ್ಲಿ ಸೆರ್ಪಡೆಯಾದ ಪಾರಂಪರಿಕ ತಾಣಗಳಿವೆ.

ಮಲಪ್ರಭಾ ನದಿಯು ಮುನ್ನವಳ್ಳಿ ಬಳಿ ಉತ್ತರಾಭಿಮುಖವಾಗಿ ಹರಿಯುವುದರಿಂದ ಋಷಿ-ಮುನಿಗಳು ತಪಸ್ಸು ಮಾಡಲು ಪವಿತ್ರವಾಗಿತ್ತು ಎಂಬದು ಧಾರ್ಮಿಕ ನಂಬಿಕೆ. ಸಪ್ತರ್ಷಿಗಳಲ್ಲಿ ಒಬ್ಬರಾದ ಆಗಸ್ತಯರು ಇಲ್ಲಿ ತಪಸ್ಸು ಮಾಡಿದ್ದಾರೆ. ಅಮರಶಿಲ್ಪಿ ಜಕಣಾಚಾರ್ಯ ಕೆತ್ತಿದ ಪಂಚಲಿಂಗೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ. ಮಾದನೂರಿನ ವಿಷ್ಣುತಿರ್ಥರು ಇಲ್ಲಿ ೧೧ ವರ್ಷ ತಪಸ್ಸು ಮಾಡಿದ್ದಾರೆ. ಹಾನಗಲ್‌ನ ಕುಮಾರೇಶ್ವರರು, ಭಾರದ್ವಾಜ ಮುನಿಗಳು, ಚಿದಂಬರರು ಹಾಗೂ ಅವರ ಶಿಷ್ಯರಾದ ಕೈವಲ್ಯಾನಂದರು ಮಲಪ್ರಭೆಯ ತಟದಲ್ಲಿ ಧಾರ್ಮಿಕ ಕೈಂಕರ್ಯ ಕೈಗೊಂಡಿದ್ದಾರೆ.

ನಮ್ಮ ನಾಡಿನ ಧಾರ್ಮಿಕ, ಸಾಂಸ್ಕೃತಿಕ, ಪರಂಪರೆಯ ಮೂಲ ಮಲಪ್ರಭೆ. ಆಕೆ ಅದೆಷ್ಟೋ ಐತಿಹಾಸಿಕ ಘಟನೆಗಳನ್ನು ತನ್ನೊಡಲಲ್ಲಿ ಹಾಕಿಕೊಂಡಿದ್ದಾಳೆ. ಸಂತ-ಮಹಾಂತರ ಜ್ಞಾನದ ಕಣಜ ಮಲಪ್ರಭೆಯಿಂದ ವೃದ್ದಿಯಾಗಿದೆ. ಜಗನ್ಮಾತೆಯರ ದಿವ್ಯಶಕ್ತಿಯ ಅನಾವರಣವಾಗಿದೆ. ಅಷ್ಟೆ ಅಲ್ಲದೇ ಮಲಪ್ರಭೆಯ ಎರಡೂ ದಂಡೆಗಳ ಮೇಲೆ ಫಲವತ್ತಾದ ಭೂಮಿ ಇದೆ. ಮಣ್ಣಿನಲ್ಲಿ ಚಿನ್ನವನ್ನು ಬೆಳೆಯುವ ಶಕ್ತಿ ಹೊಂದಿದ ಉತ್ತರ ಕರ್ನಾಟಕದ ರೈತ ಕುಟುಂಬಗಳು ಆಕೆಯ ಮಡಿಲಿನಲ್ಲಿ ಬದುಕು ಕಟ್ಟಿಕೊಂಡಿವೆ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಮಲಪ್ರಭೆಗೆ ನಮ್ಮ ರೈತರ ಬದುಕನ್ನು ಶ್ರೀಮಂತಗೊಳಿಸುವ ಮತ್ತು ಆ ಮೂಲಕ ಉತ್ತರ ಕರ್ನಾಟಕವನ್ನು ಹಸಿರನ್ನಾಗಿಸುವ ದಿವ್ಯ ಪ್ರಭೆ ಇದೆ.

ಉತ್ತರ ಕರ್ನಾಟಕದ ನೆಲ-ಜಲ ಸಂರಕ್ಷಣೆ ಮತ್ತು ಸರ್ವಾಂಗೀಣ ಅಭಿವೃದ್ದಿಯ ವಿಷಯದಲ್ಲಿ ಎಲ್ಲ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಇಚ್ಚಾಶಕ್ತಿ ಪ್ರದರ್ಶಿಸಬೇಕು. ರಾಜಕಾರಣ ಏನೇ ಇರಲಿ ಉತ್ತರ ಕರ್ನಾಟಕದ ವಿಷಯ ಬಂದರೆ ಒಗ್ಗಟ್ಟಾಗಿ ನಿಂತು ನ್ಯಾಯ ಪಡೆದುಕೊಳ್ಳುವತ್ತ ಕಾರ್ಯಪ್ರವೃತ್ತರಾಗಬೇಕು. ಕೇವಲ ರಾಜಕಾರಣಿಗಳಷ್ಟೆ ಅಲ್ಲ, ಇಲ್ಲಿಯ ನಾಗರಿಕರು, ಸಂಘ ಸಂಸ್ಥೆಗಳು, ಮಾಧ್ಯಮ ಮಿತ್ರರು, ನಿವೃತ್ತ ಅಧಿಕಾರಿಗಳು, ಸಂತರು, ಶರಣರು, ಹೋರಾಟಗಾರರು ಕೈಜೋಡಿಸಬೇಕು. ನಮ್ಮ ನಾಡು, ನೆಲ, ಜಲದ ಬಗ್ಗೆ ಅಭಿಮಾನ ಬೆಳಸಿಕೊಳ್ಳಬೇಕು. ಅಭಿಮಾನ ಶೂನ್ಯರಾದರೇ ನಮ್ಮ ಬೆಳವಣಿಗೆ ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡು ಎಚ್ಚರಿಕೆಯಿಂದ ಮುಂದಿನ ಹೆಜ್ಜೆಗಳನ್ನಿಡೋಣ. ಏನೇ ಅನ್ಯಾಯವಾದರೂ ಕಾವೇರಿಕೊಳ್ಳದ ರೈತರು ಸಿಡಿದು ನಿಲ್ಲುತ್ತಾರೆ. ತಮ್ಮ ಪಾಲನ್ನು ಹಕ್ಕಿನಿಂದ ಪಡೆಯುತ್ತಾರೆ. ಕೃಷ್ಣೆಯ ಕೊಳ್ಳದ ರೈತರಿಗೆನಾಗಿದೇ? ನಮ್ಮ ನೆಲ-ಜಲದ ಕುರಿತು ಕಾಳಜಿ ಇಲ್ಲವೇ?

ಕೃಷ್ಣೆಯನ್ನು ಮಹಾರಾಷ್ಟ್ರ, ಆಂದ್ರ, ತೆಲಂಗಾಣದಲ್ಲಿ ಅಮ್ಮ, ಆಯಿ ಎಂದು ಆರಾಧಿಸುತ್ತಾರೆ. ದಕ್ಷೀಣದ ರೈತರು ಕಾವೇರಿಯನ್ನು ಇಡೀ ನಾಡಿನ ಜೀವನದಿ ಎಂದು ಕರೆಯುತ್ತಾರೆ. ಕಾವೇರಿಗಿಂತಲೂ ೩ ಪಟ್ಟು ಹಿರಿದಾದ ಕೃಷ್ಣೆಗೆ ಆ ಅರ್ಹತೆ ಇಲ್ಲವೇ? ಗಂಗೆ, ಕಾವೇರಿ, ಗೋದಾವರಿಗೆ ಕುಂಭಮೇಳಗಳನ್ನು ನಡೆಸುತ್ತಾರೆ. ಸಾಂಸ್ಕೃತಿಕ ಹಿರಿಮೆ-ಗರಿಮೆಗಳನ್ನು ಹೆಚ್ಚಿಸುತ್ತಾರೆ. ಶತ ಶತಮಾನಗಳಿಂದಲೂ ಕೃಷ್ಣೆ, ಘಟಪ್ರಭೆ ಮತ್ತು ಮಲಪ್ರಭೆಯರು ನಮ್ಮನ್ನು ತಾಯಿಯಂತೆ ವಾತ್ಸಲ್ಯದಿಂದ ಪೊರೆಯುತ್ತಿದ್ದಾರೆ. ಆ ತಾಯಿಯ ಮೇಲೆ ಮಕ್ಕಳಾದ ನಮಗೆ ಮಾತೃ ವಾತ್ಸಲ್ಯ ಹುಟ್ಟಲಿಲ್ಲವೇಕೆ? ಆಕೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಅಭಿಮಾನ ಮೂಡಲಿಲ್ಲವೇಕೆ? ಈ ನಿಟ್ಟಿನಲ್ಲಿ ಚಿಂತನೆಗಳು ನಡೆಯಬೇಕು. ನಾವು ಬದಲಾಗಬೇಕು. ನಮ್ಮ ನಾಡು-ನುಡಿಯ ಕುರಿತು ಭಕ್ತಿ-ಭಾವ ಬೆಳಸಿಕೊಳ್ಳಬೇಕು. ಅನ್ಯಾಯವಾದಾಗ ಸಿಡಿದು ನಿಲ್ಲಬೇಕು. ನಾಡಿಗೆ ಸಿಗುವ ಸವಲತ್ತನ್ನು ಪಡೆಯುವುದರಲ್ಲಿ ರಾಜಿಯಾಗುವ ಮಾತೇ ಬೇಡ. ಎಲ್ಲರೂ ಸೇರಿ ದುಡಿಯೋಣ. ನಾಡಿಗೆ ಸೇವೆ ಮಾಡುವ ಸಣ್ಣ ಅವಕಾಶ ಸಿಕ್ಕರೂ ಅವಕಾಶ ವಂಚಿತರಾಗದೇ ನಾಡ ಸಮೃದ್ದಿಗಾಗಿ ಹಗಲಿರುಳು ಶ್ರಮಿಸೋಣ.

ಒಬ್ಬಳು ಹೆತ್ತ ತಾಯಿ, ಇನ್ನೊಬ್ಬಳು ಹೊತ್ತ ತಾಯಿ, ಈ ಭೂಮಿತಾಯಿ. ಹೆತ್ತ ತಾಯಿ ಜನ್ಮ ನೀಡುತ್ತಾಳೆ. ಕೈ ಹಿಡಿದು ನಡೆಸುತ್ತಾಳೆ. ಕಡೆಗೊಂದು ದಿನ ಯಾವುದೋ ಘಳಿಗೆಯಲ್ಲಿ ನಮ್ಮನ್ನು ಬಿಟ್ಟು ಹೋಗುತ್ತಾಳೆ. ಆದರೆ ಈ ಭೂಮಿ ತಾಯಿ ಜೀವನವಿಡಿ ಅನ್ನ, ನೀರು, ಆಶ್ರಯ ಕೊಟ್ಟು ಸಲಹುತ್ತಾಳೆ. ಜೀವನ ಅಂತ್ಯವಾದ ನಂತರವೂ ತನ್ನ ಗರ್ಭದಲ್ಲಿ ಶಾಶ್ವತವಾಗಿ ಆಶ್ರಯ ನೀಡುತ್ತಾಳೆ. ಈ ಭೂಮಿತಾಯಿ ಸಮೃದ್ದವಾಗಿದ್ದರೆ ಮಾತ್ರ ನಮ್ಮ ಬದುಕು ಬೆಳಕು. ನದಿ ಇದ್ದರೂ, ನೀರಿಲ್ಲದೇ ಭೂಮಿ ತಾಯಿಯನ್ನು ಬಂಜರು ಮಾಡುವ ಬದಲು ನದಿಯನ್ನು ಸಂರಕ್ಷಿಸೋಣ. ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮಲಪ್ರಭೆಯನ್ನು ಸಮೃದ್ದಗೊಳಿಸೋಣ. ರೈತನ ಹೊಲಗಳಿಗೆ ನಿರುಣಿಸೋಣ. ಅನ್ನದಾತನ ಮುಖದಲ್ಲಿ ಮಂದಹಾಸವನ್ನು ಮುಡಿಸೋಣ, ಮಣ್ಣಿನಲ್ಲಿ ಚಿನ್ನದಂತಹ ಬೆಳೆ ಬೆಳೆಯೋಣ.

ಮೆರೇ ದೇಶ ಕೀ ಧರತಿ ಸೋನಾ ಉಘಲೇ, ಊಘಲೇ ಹಿರೆ ಮೋತಿ ! ಎಂಬ ಕವಿಯ ಕನವರಿಕೆ ನಿಜವಾಗಲಿ

(ಲೇಖಕರು – ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button