Kannada NewsKarnataka NewsNationalPolitics

*ಧರ್ಮಾಧಾರಿತ ವಸತಿ ಮೀಸಲಾತಿ ಅಸಂವಿಧಾನಿಕ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ವಸತಿ ಯೋಜನೆಗಳಲ್ಲಿ ಧರ್ಮಾಧಾರಿತವಾಗಿ ಮುಸ್ಲಿಂರಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲು ಮುಂದಾದ ಕ್ರಮವನ್ನು ಪ್ರಶ್ನಿಸಿ ಕಾನೂನು ಹೋರಾಟಕ್ಕಿಳಿಯಲು ಚಿಂತನೆ ನಡೆಸುತ್ತೇವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ಸಂಜೆ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯಾವುದರಲ್ಲೂ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವುದು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂಬುದನ್ನು ಸುಪ್ರೀಂ ಹೇಳಿದೆ. ಹಾಗಾಗಿ ನಾವೀಗ ರಾಜ್ಯ ಸರ್ಕಾರದ ತುಷ್ಟೀಕರಣದ ಕ್ರಮ ವಿರೋಧಿಸಿ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಇಳಿಯುತ್ತೇವೆ ಎಂದು ಸ್ಪಷ್ಟಪಡಿಸಿದರು.

Home add -Advt

ರಾಜ್ಯ ಸರ್ಕಾರ ಈ ಹಿಂದೆ ರಾಹುಲ್ ಗಾಂಧಿ ಸೂಚನೆ ಮೇರೆಗೆ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಿತು. ಈಗ ನೋಡಿದರೆ ವಸತಿ ಯೋಜನೆಗಳಲ್ಲಿ ಸಹ ಮುಸ್ಲಿಂ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. ಇದು ಅಸಂವಿಧಾನಿಕ ಮತ್ತು ಕಾನೂನು ಬಾಹಿರವಾದ ಕ್ರಮವೆಂದು ಸಚಿವ ಜೋಶಿ ಖಂಡಿಸಿದರು.

ವಸತಿ ಯೋಜನೆಯಲ್ಲಿ ಈ ಮೊದಲು ಮುಸ್ಲಿಂರಿಗೆ ಶೇ.10ರಷ್ಟ ಮೀಸಲಾತಿ ಇದ್ದುದೇ ಅಸಂವಿಧಾನಿಕವಾಗಿತ್ತು. ಈಗದನ್ನು ಮತ್ತೆ ಶೇ.15ಕ್ಕೆ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಉಳಿದೆಲ್ಲ ಸಮುದಾಯಗಳ ಕಡುಬಡವರಿಗೆ ತೀವ್ರ ಅನ್ಯಾಯವಾಗುತ್ತದೆ ಎಂದು ಆಕ್ಷೇಪಿಸಿದರು.

ಇತರೆ ಸಮುದಾಯದ ಬಡವರಿಗೆ ದ್ರೋಹ 

ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬರೀ ತುಷ್ಟೀಕರಣ ರಾಜಕಾರಣದಲ್ಲೇ ನಿರತವಾಗಿದೆ. ಎಲ್ಲದರಲ್ಲೂ ಮುಸ್ಲಿಂರಿಗೆ ಮೀಸಲಾತಿ ನೀಡುತ್ತಿರುವುದರಿಂದ ಸಾಮಾನ್ಯ ವರ್ಗದ ಬಡವರಿಗೆ, ಎಸ್ಸಿ-ಎಸ್ಟಿ ಮತ್ತು ಓಬಿಸಿಗಳಿಗೆ ಬಹು ಅನ್ಯಾಯವಾಗುತ್ತದೆ. ತನ್ನ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಇತರ ಸಮುದಾಯದವರಿಗೆ ದ್ರೋಹ ಬಗೆಯುತ್ತಿದೆ ಎಂದು ಸಚಿವ ಜೋಶಿ ಹರಿ ಹಾಯ್ದರು.

ವಸತಿ ಯೋಜನೆಗಳಿಗೆ ಬಹುತೇಕ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಅನುದಾನ ಬರುತ್ತದೆ. ಆದರೆ, ರಾಜ್ಯ ಸರ್ಕಾರ ಬೇರೆ ಬೇರೆ ವಸತಿ ಯೋಜನೆಗಳಡಿ ಮುಸ್ಲಿಂರಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿರುವುದು ಸರಿಯಲ್ಲ. ಇತರೆ ಹಿಂದುಳಿದವರು ವಸತಿ ವಂಚಿತರಾಗುತ್ತಾರೆ. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಾನೂನು ಹೋರಾಟ ನಡೆಸುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ತಿಳಿಸಿದರು.

ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ದೇಶದಲ್ಲೆಲ್ಲೂ ಇಲ್ಲ

ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿ ನೀಡಿರುವಂತಹ ಧರ್ಮಾಧಾರಿತ ಮೀಸಲಾತಿ ಬಹುಶಃ ದೇಶದಲ್ಲೆಲ್ಲೂ ಇಲ್ಲ. ಮುಸ್ಲಿಂರಿಗೆ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ದುಸ್ಸಾಹಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ನಿರ್ಲಕ್ಷಿಸಿ ಧರ್ಮಾಧಾರಿತ ಮೀಸಲಾತಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಚುನಾವಣಾ ಲಾಭಕ್ಕಾಗಿ ಈ ಕಾರ್ಯಸೂಚಿ ಮುಂದಿಡುತ್ತಿದೆ. ರಾಜಕೀಯ ಲಾಭಕ್ಕಾಗಿ ಸಮುದಾಯಗಳನ್ನು ವಿಭಜಿಸುವ ಪ್ರಯತ್ನ ನಡೆಸಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.

Related Articles

Back to top button