Belagavi NewsBelgaum NewsKannada NewsKarnataka News

*ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ 10 ದಿನ ಭಾರಿ ಮಳೆ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ  ಉಂಟಾಗಲಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಕರ್ನಾಟಕದಲ್ಲಿ  ಮುಂದಿನ ಕೆಲವು ದಿನಗಳ ಕಾಲ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.

ಶ್ರೀಲಂಕಾ ಕರಾವಳಿಯಲ್ಲಿದ್ದ ವಾಯುಭಾರ ಕುಸಿತವು ಅಂಡಮಾನ್ ಬಳಿ ಶಿಥಿಲಗೊಳ್ಳುತ್ತಿದ್ದು ಸೆಪ್ಟೆಂಬರ್ 19ರಂದು ಮ್ಯಾನ್ಮಾರ್‌ನ ಪಶ್ಚಿಮ ಕರಾವಳಿಯಲ್ಲಿ ಹೊಸ ವಾಯುಭಾರ ಕುಸಿತ ರೂಪುಗೊಳ್ಳಲಿದೆ. ಇದು ಮತ್ತಷ್ಟು ತೀವ್ರಗೊಂಡು ಸೆಪ್ಟೆಂಬರ್ 23ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ಸೆಪ್ಟೆಂಬರ್ 25ರ ಸುಮಾರಿಗೆ ಒಡಿಸ್ಸಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ.

ಈ ಸಿಸ್ಟಮ್ ಎಫೆಕ್ಟ್‌ನಿಂದಾಗಿ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ವಿವಿಧ ಭಾಗಗಳಲ್ಲಿ ಮುಂದಿನ 10 ದಿನಗಳ ಕಾಲ ಮಳೆಯ ವಾತಾವರಣ ಮುಂದುವರಿಯಲಿದೆ. 

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸದ್ಯಕ್ಕೆ ಸಂಜೆ ಅಥವಾ ರಾತ್ರಿ ವೇಳೆ ತುಂತುರು ಮಳೆಯಾಗಲಿದ್ದು ಸೆಪ್ಟೆಂಬ‌ರ್ 19ರಿಂದ ಉತ್ತರ ಕನ್ನಡದಲ್ಲೂ ಹಾಗೂ ಸೆಪ್ಟೆಂಬರ್ 20ರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗಗಳಲ್ಲಿ ಮಳೆ ಇನ್ನಷ್ಟು ಜೋರಾಗಲಿದೆ.

ಇನ್ನು ಮಲೆನಾಡು ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಸಕಲೇಶಪುರದಲ್ಲಿ ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದ್ದು, ಸೆಪ್ಟೆಂಬರ್ 20ರಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ. ಇದರೊಂದಿಗೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಮಂಡ್ಯ ಹಾಸನ, ತುಮಕೂರು ಭಾಗಗಳಲ್ಲೂ ಮುಂದಿನ 10 ದಿನಗಳ ಕಾಲ ಅಲ್ಲಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button