
ಪ್ರಗತಿವಾಹಿನಿ ಸುದ್ದಿ; ಗದಗ: ಪ್ರಧಾನಿ ನರೇಂದ್ರ ಮೋದಿ ವಿಷದ ಹಾವು ಇದ್ದಂತೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚತ್ತಿರುವ ಖರ್ಗೆ, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾನು ಪ್ರಧಾನಿ ಮೋದಿಯವರನ್ನು ವಿಷದ ಹಾವು ಎಂದಿಲ್ಲ. ವೈಯಕ್ತಿಕವಾಗಿ ನಾನು ಯಾರನ್ನೂ ಟೀಕಿಸಿಲ್ಲ, ನಾನು ಹೇಳಿದ್ದು ಇಡೀ ಭಾರತೀಯ ಜನತಾ ಪಾರ್ಟಿ ಬಗ್ಗೆ ಹೊರತು ಮೋದಿಯವರ ಬಗ್ಗೆಯಲ್ಲ ಎಂದು ಹೇಳಿದ್ದಾರೆ.
ವ್ಯಕ್ತಿಗತವಾಗಿ ನಾನು ಯಾರನ್ನೂ ಟೀಕಿಸಿಲ್ಲ, ಯಾರ ಹೆಸರನ್ನೂ ಹೇಳಿಲ್ಲ, ಇಡೀ ಬಿಜೆಪಿ ಹಾವು ಇದ್ದಂತೆ ಎಂದು ಹೇಳಿದ್ದೇನೆ, ಬಿಜೆಪಿಯ ತತ್ವ, ಸಿದ್ಧಾಂತಗಳ ಬಗ್ಗೆ ನಾನು ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ಗದಗದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ಮೋದಿ ವಿಷದ ಹಾವು ಇದ್ದಂತೆ. ವಿಷ ನೆಕ್ಕಿದವ ಸತ್ತೇ ಹೋಗುತ್ತಾನೆ ಎಂದು ಗುಡುಗಿದ್ದರು. ಖರ್ಗೆ ಹೇಳಿಕೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು.