Latest

ತೆಲಂಗಾಣದ ರಾಜ್ಯಪಾಲನಾಗುತ್ತೇನೆ ಎಂದು ನಿವೃತ್ತ ಯೋಧನಿಗೆ ವಂಚನೆ; ಕಾರ್ಪೆಂಟರ್ ಗೂ ಮೋಸ ಮಾಡಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ತಾನು ತೆಲಂಗಾಣದ ರಾಜ್ಯಪಾಲನಾಗುತ್ತಿದ್ದೇನೆ ಎಂದು ಹೇಳಿ ವ್ಯಕ್ತಿಯೋರ್ವ ನಿವೃತ್ತ ಯೋಧರೊಬ್ಬರಿಗೆ ಬರೋಬ್ಬರಿ 27 ಲಕ್ಷದ 97 ಸಾವಿರ ರೂಪಾಯಿ ವಂಚಿಸಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಮಾರುತಿ ಘೋಡಕೆ ಹಣ ಕಳೆದುಕೊಂಡ ಸಿಆರ್ ಪಿ ಎಫ್ ನಿವೃತ್ತ ಯೋಧ. ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸಾವಳೇಶ್ವರ ನಿವಾಸಿಯಾಗಿರುವ ಮಾರುತಿ ಘೋಡಕೆ, ಕಲಬುರ್ಗಿ ನಗರದಲ್ಲಿ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾರುತಿ ಘೋಡಕೆ ಅವರಿಗೆ ಶಾಂತಕುಮಾರ್ ಜಟ್ಟೂರ್ ಎಂಬ ವ್ಯಕ್ತಿ ಪರಿಚಯರಾಗಿ, ಆತ ತಾನು ತೆಲಂಗಾಣದ ರಾಜ್ಯಪಾಲನಾಗುತ್ತಿದ್ದೇನೆ. ಹಾಗಾಗಿ ತನಗೆ ಭದ್ರತಾ ಸಿಬ್ಬಂದಿ ಬೇಕು. ನಿಮ್ಮನ್ನು ತನ್ನ ಖಾಯಂ ಭದ್ರತಾ ಸಿಬ್ಬಂದಿ ಮಾಡುತ್ತೇನೆ ಎಂದು ಹೇಳಿ ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಕೆಲ ದಿನಗಳ ಬಳಿಕ ತನ್ನ ಬಳಿ ಬೇಕಾದಷ್ಟು ಹಣವಿದೆ ಆದರೆ ಪ್ರೋಟೋಕಾಲ್ ಇರುವುದರಿಂದ ಅದನ್ನು ಪಡೆಯಲು ಸಾಧ್ಯವಿಲ್ಲ. ಸ್ವಲ್ಪ ಹಣ ಕೊಡಿ ನಂತರದಲ್ಲಿ ಅದನ್ನು ವಾಪಸ್ ಕೊಡುತ್ತೇನೆ ಎಂದು ಹೇಳಿ 2022ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ 27 ಲಕ್ಷದ 97 ಸಾವಿರರೂಪಾಯಿ ಹಣ ಪಡೆದುಕೊಂಡಿದ್ದರಂತೆ. ಶಾಂತಕುಮಾರ್ ರಾಜ್ಯಪಾಲರಾಗುತ್ತಿದ್ದಾರೆ ಎಂಬ ಭರವಸೆಯಲ್ಲಿ ಮಾರುತಿ ಘೋಡಕೆ ಹಣ ಕೊಟ್ಟಿದ್ದರು. ಆದರೆ ಶಾಂತಕುಮಾರ್ ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದಾರೆ. ಹಣ ಕೇಳಿದರೆ ನಾಳೆ ಕೊಡುತ್ತೇನೆ ನಾಡಿದ್ದು ಕೊಡುತ್ತೇನೆ ಎಂದು ಹೇಳುತ್ತಲೇ ದಿನ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಂತಕುಮಾರ್, ಮಾರುತಿ ಘೋಡಕೆ ಅವರ ಬಳಿ ಮಾತ್ರವಲ್ಲ ಕಲಬುರ್ಗಿಯಲ್ಲಿ ಹಲವರಿಗೆ ಇದೇ ರೀತಿ ತಾನು ತೆಲಂಗಾಣದ ರಾಜ್ಯಪಾಲನಾಗುತ್ತೇನೆ ಎಂದು ಹೇಳಿಕೊಂಡು ತಮ್ಮ ಕೆಲಸ ಸಾಧಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರ್ಪೆಂಟರ್ ಗುಂಡಣ್ಣ ಎಂಬುವವರಿಗೂ ಹೀಗೆ ಹೇಳಿ ಮನೆ ನವೀಕರಣ ಕೆಲಸ ಮಾಡಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಹಣ ನೀಡಿಲ್ಲ ಎನ್ನಲಾಗಿದೆ. ಇದೇ ರೀತಿ ಹಲವರಿಗೆ ಶಾಂತಕುಮಾರ್ ವಂಚಿಸಿರುವ ಆರೋಪ ಕೇಳಿಬಂದಿದೆ. ತನಿಖೆಯಿಂದಷ್ಟೆ ಸತ್ಯಾಸತ್ಯತೆ ಬಯಲಾಗಬೇಕಿದೆ.

Home add -Advt

*ಆತ್ಮಹತ್ಯೆಗೆ ಶರಣಾದ ದಂತವೈದ್ಯೆ*

https://pragati.taskdun.com/dental-doctorsuicidebangalore/

Related Articles

Back to top button