ಮಂಗಳೂರಿನಲ್ಲೊಂದು ವಿಚಿತ್ರ ಘಟನೆ
ಪ್ರಗತಿವಾಹಿನಿ ಸುದ್ದಿ, ಮಂಗಳೂರು – ಮೃತಪಟ್ಟಿದ್ದಾನೆಂದು ತಿಳಿದ ವ್ಯಕ್ತಿಯ ಅಂತ್ಯ ಸಂಸ್ಕಾರದ ಸಿದ್ಧತೆ ನಡೆಯುತ್ತಿದ್ದಾಗಲೇ ಆತ ಕಣ್ಣು ಬಿಟ್ಟು ಉಸಿರಾಡಿದ ವಿಸ್ಮಯಕಾರಿ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಾಸರಗೋಡಿನ ಬದಿಯಡ್ಕ ಗ್ರಾಮದ ಗುರುವ (೬೨) ಎಂಬುವವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುವ ಅವರು ಆಕ್ಸಿಜನ್ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದಾರೆ, ಅವರಿಗೆ ಅಳವಡಿಸಲಾಗಿದ್ದ ಆಕ್ಸಿಜನ್ ತೆಗೆದರೆ ಮೃತಪಡುತ್ತಾರೆ ಎಂದು ವೈದ್ಯರು ತಿಳಿಸಿದ್ದರು.
ಅದರಂತೆ ಆಕ್ಸಿಜನ್ ತೆರವುಗೊಳಿಸಿದ್ದ ಸಂಬಂಧಿಗಳು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಮ್ಮೂರಿಗೆ ಫೋನ್ ಮಾಡಿ ತಿಳಿಸಿದ್ದರು. ಗುರುವ ಅವರನ್ನು ಆಂಬುಲೆನ್ಸ್‌ನಲ್ಲಿ ಊರಿಗೆ ಸಾಗಿಸುತ್ತಿದ್ದರು. ಇತ್ತ ಊರಿನಲ್ಲಿದ್ದ ಸಂಬಂಧಿಗಳು ಅಂತ್ಯಸಂಸ್ಕಾರಕ್ಕೆ ಚಿತೆ ತಯಾರು ಮಾಡಿಕೊಳ್ಳುವ ಸಿದ್ಧತೆ ನಡೆಸಿದ್ದರು.
ಆದರೆ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ಮಾರ್ಗ ಮಧ್ಯೆ ಗುರುವ ಅವರ ದೇಹದಲ್ಲಿ ಚಲನೆ ಕಂಡುಬಂದಿದೆ. ತಕ್ಷಣ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಜೀವಂತ ಇರುವುದು ಗೊತ್ತಾಗಿದೆ. ಪ್ರಸ್ತುತ ಗುರುವ ಅವರಿಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮತಾಂತರಕ್ಕೆ ಕಿರುಕುಳ; ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ