Kannada NewsKarnataka NewsLatest

*ಗುಂಡಿಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಮುಂದಾದ ವ್ಯಕ್ತಿಯೂ ಸಾವು*

ಪ್ರಗತಿವಾಹಿನಿ ಸುದ್ದಿ: ಗದ್ದೆಯಲ್ಲಿ ಶುಂಠಿ ಕೀಳಲು ತೆರಳಿದ್ದ ಮಹಿಳೆ ಗುಂಡಿಗೆ ಬಿದ್ದಿದ್ದು, ಅವರನ್ನು ಉಳಿಸಲು ಮುಂದಾದ ವ್ಯಕ್ತಿಯೂ ವಿಷಕಾರಿ ಅನಿಲದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿತ್ಯ (46) ಮೃತಪಟ್ಟ ಮಹಿಳೆ. ಅವರನ್ನು ರಕ್ಷಿಸಲು ಪ್ರಯತ್ನಿಸಿ ಪ್ರಾಣ ಕಳೆದುಕೊಂಡವರು ಜನಾರ್ದನ (43) ಎಂದು ಗುರುತಿಸಲಾಗಿದೆ.

ಮನೆಯ ಬಳಕೆಗೆ ಶುಂಠಿ ತರಲು ನಿತ್ಯ ಅವರು ಸಂಬಂಧಿಕರ ಮನೆ ಸಮೀಪದ ಗದ್ದೆಗೆ ತೆರಳಿದ್ದರು. ಅಲ್ಲಿ ಬಹಳ ವರ್ಷಗಳಿಂದ ಬಳಕೆಯಲ್ಲಿರದ ಹಳೆಯ ಶೌಚಾಲಯದ ಗುಂಡಿ ಏಕಾಏಕಿ ಕುಸಿದಿದೆ. ಪರಿಣಾಮ ನಿತ್ಯ ಅವರು ಗುಂಡಿಯೊಳಗೆ ಬಿದ್ದಿದ್ದಾರೆ.

ಘಟನೆಯನ್ನು ಗಮನಿಸಿದ ಜನಾರ್ದನ ಅವರು ತಡಮಾಡದೆ ಮಹಿಳೆಯನ್ನು ರಕ್ಷಿಸಲು ಗುಂಡಿಗೆ ಇಳಿದಿದ್ದಾರೆ. ಆದರೆ ಒಳಗೆ ಅಪಾಯಕಾರಿ ವಿಷಾನಿಲ ತುಂಬಿಕೊಂಡಿದ್ದ ಪರಿಣಾಮ ಇಬ್ಬರೂ ಹೊರಬರಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದ ಬಳಿಕ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button