
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಮ್ಮ ಕುಟುಂಬಕ್ಕೇ ಟಿಕೆಟ್ ನೀಡಬೇಕೆನ್ನುವುದು ನಮ್ಮ ಸಾವಿರಾರು ಅಭಿಮಾನಿಗಳ ಆಸೆಯಾಗಿತ್ತು. ಅದು ಈಡೇರಿದೆ. ದಿ.ಸುರೇಶ ಅಂಗಡಿಯವರ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಮಂಗಲಾ ಅಂಗಡಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫೋನ್ ಮಾಡಿ ನಿಮಗೆ ಟಿಕೆಟ್ ಕೊಟ್ಟರೆ ನಿಲ್ಲಲು ರೆಡಿ ಇದ್ದೀರಾ ಎಂದು ಕೇಳಿದ್ದರು. ಟಿಕೆಟ್ ಕೊಟ್ಟಿದ್ದಕ್ಕೆ ಪಕ್ಷದ ನಾಯಕರಿಗೆಲ್ಲ ಧನ್ಯವಾದ ಸಲ್ಲಿಸುತ್ತೇನೆ. ಮಕ್ಕಳು ಯಂಗಸ್ಟರ್ಸ್ ಇರೋದ್ರಿಂದ ಅವರಿಗೆ ಕೊಟ್ಟರೆ ಚೊಲೋ ಎಂದು ಹೇಳಿದ್ದೆ ಎಂದೂ ಅವರು ಹೇಳಿದರು.
ಅಂಗಡಿಯವರು ನಿಧನರಾದ ನಂತರ ಪ್ರತಿನಿತ್ಯ ನಮ್ಮ ಕುಟುಂಬದ ಅಭಿಮಾನಿಗಳು ಬಂದು ನಿಮಗೇ ಟಿಕೆಟ್ ಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಿದ್ದರು. ಅಂಗಡಿ ಅವರು ಲಕ್ಷಾಂತರ ಜನರ ಅಭಿಮಾನವನ್ನು ಗಳಿಸಿದ್ದರು. ಅದನ್ನು ಉಳಿಸಿಕೊಂಡು, ಅವರೆಲ್ಲರ ಜೊತೆ ನಾವು ನಿಲ್ಲುತ್ತೇವೆ ಎಂದು ಮಂಗಲಾ ಅಂಗಡಿ ತಿಳಿಸಿದರು.
ಟಿಕೆಟ್ ಸಿಕ್ಕಿದ್ದಕ್ಕೆ ಖುಷಿಯಾದರೂ ಅಂಗಡಿಯವರು ನಮ್ಮ ಜೊತೆ ಇಲ್ಲದಿರುವುದಕ್ಕೆ ದುಃಖವಾಗುತ್ತಿದೆ. ಅವರ ಕನಸನ್ನು ನನಸು ಮಾಡುವತ್ತ ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಮಗಳು ಶೃದ್ಧಾ ಶೆಟ್ಟರ್ ಮಾತನಾಡಿ, ನಮ್ಮ ಕುಟುಂಬದ ಯಾರಿಗೇ ಆದರೂ ಟಿಕೆಟ್ ನೀಡಿ ಎಂದು ಕೇಳಿದ್ದೆವು. ನನಗೇ ಕೊಡಿ ಎಂದು ಕೇಳಿರಲಿಲ್ಲ. ಈಗ ಸಂತೋಷವಾಗಿದೆ. ಎಲ್ಲರ ಸಹಕಾರದಿಂದ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.
ಬಿಜೆಪಿ ಕೊನೆಯ ಕ್ಷಣದಲ್ಲಿ ಗೇಮ್ ಪ್ಲ್ಯಾನ್ ಬದಲಾಯಿಸಿದ್ದು ಏಕೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ