
ಪ್ರಗತಿವಾಹಿನಿ ಸುದ್ದಿ: ಶಿರಸಿ: ಪೂರ್ವಿಕರು ಸ್ಥಾಪಿಸಿದ ದೇವಸ್ಥಾನವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು. ಅದು ನಮ್ಮ ಜವಬ್ದಾರಿ ಎಂದು ಹೈಕೋರ್ಟ ನ್ಯಾಯಾಧೀಶರಾದ ಶಂಕರ ಜಿ.ಪಂಡಿತ್ ಹೇಳಿದರು.
ಭಾನುವಾರ ತಾಲೂಕಿನ ಮಂಜುಗುಣಿಯಲ್ಲಿ ಅವರು ಸುಮಾರು ೫೦ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡ ಕಾಮಗಾರಿ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ದಾನಿಗಳಿಗೆ ಸನ್ಮಾನಿಸಿ ಮಾತನಾಡಿದರು.
ದೇವರ ಮುಂದೆ ನಾವೆಲ್ಲ ಸಮಾನರು. ದೇವರ ಮುಂದೆ ಭಕ್ತಿಯಿಂದ ಎಲ್ಲರೂ ತಲೆ ಬಾಗಲೇ ಬೇಕು ಎಂದ ಅವರು, ದೇವಾಲಯವನ್ನು ಸಂರಕ್ಷಿಸುವವರು ದೇವರನ್ನು ಅವರನ್ನು ಸಂರಕ್ಷಿಸುತ್ತಾರೆ ಎಂದರು.
ನಾನು ಇಲ್ಲಿ ಮಾತನಾಡಲು ಬಂದಿಲ್ಲ. ಇಲ್ಲಿ ಬಂದಿದ್ದರಿಂದ ಹೃದಯ ತುಂಬಿ ಬಂದಿದೆ. ಶ್ರೀನಿವಾಸ ಭಟ್ಟರ ಮಾತು ಹೊಟ್ಟೆ ತುಂಬಿಸಿದೆ ಎಂದು ಬಣ್ಣಿಸಿದರು.
ದೇವಸ್ಥಾನಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಇದೆ. ನಮ್ಮ ಪೂರ್ವಿಕರು ಪ್ರಕೃತಿ ಆರಾಧಕರು ಕೂಡ ಹೌದು ಎಂದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟ ಮಂಜುಗುಣಿ, ಗುರುವನ್ನು ದೇವರೆಂದು ಕರೆದರು. ದೇವರನ್ನು ಗುರುವೆಂದು ಭಾವಿಸಿದ ಪರಂಪರೆ. ಒಳ್ಳೆಯದನ್ನು ಸೃಷ್ಟಿಸಿ ಉಳಿಸಿ ಬೆಳಸಿಕೊಡಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. ಕೆಟ್ಟದನ್ನು ನಾಶ ಮಾಡಬೇಕು. ನಂತರ ಒಳ್ಳೆಯದನ್ನು ಸೃಜಿಸಬೇಕು. ಅದನ್ನು ಬೆಳೆಸಬೇಕು ಎಂದರು.
ಹಿರಿಯ ಲೆಕ್ಕ ಪರಿಷೋಧಕ, ನ್ಯಾಯಾಧೀಶ ಪ್ರಕಾಶ ಹೆಗಡೆ ಹುಳಗೋಳ, ದೇವಸ್ಥಾನಗಳ ಸ್ಥಳ ಮಹಾತ್ಮೆಗಳೇ ಭಕ್ತರನ್ನು ಸೆಳೆಯುತ್ತವೆ ಎಂದರು.
ಇದೇ ವೇಳೆ ವಿ.ಟಿ.ಹೆಗಡೆ ಜಾನ್ಮನೆ, ಇಂಜನೀಯರ್ ಅರುಣ ನಾಯಕ, ಆಡಳಿತ ಮಂಡಳಿಯ ಮಹಾಬಲೇಶ್ವರ ಹೆಗಡೆ ಕೂರ್ಸೆ, ಅನಂತ ಪೈ, ಭರಸಗುಣಿ ಶ್ರೀರಾಮ ಹೆಗಡೆ, ಅನಿತಾ ಪಂಡಿತ್ ಇತರರು ಇದ್ದರು. ಹಲವು ಭಕ್ತ ದಾನಿಗಳನ್ನು ಗೌರವಿಸಲಾಯಿತು. ಅನಂತ ಶಾಸ್ತ್ರಿ ವೇದಘೋಷ ನಡೆಯಿತು. ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ಅನಿತಾ ಹೆಗಡೆ ಕೂಗ್ತೆಮನೆ ನಿರ್ವಹಿಸಿದರು. ಮಂಜುಗುಣಿಯ ವೆಂಕಟರಮಣ ದೇವರು ಸಭೆಯ ಅಧ್ಯಕ್ಷತೆವಹಿಸಿತ್ತು.
ಮಂಜುಗುಣಿ ಉತ್ಸವ ಎಂದರೆ ಒಂದು ಯಾತ್ರೆ. ದೇವರ ಸನ್ನಿಧಾನದಲ್ಲಿ ನಿನ್ನ ಮನಸ್ಸು ನಿಲ್ಲಲಿ ಎಂಬುದು ಇದರ ಅರ್ಥ. ಹೊಟ್ಟೆಗೇನು ತುಂಬಿದೆ ಎಂಬುದಲ್ಲ, ತಲೆಯಲ್ಲಿ ಏನು ತುಂಬಿದೆ ಎಂಬುದು ಮುಖ್ಯ. ನಾವು ಭಗವಂತನನ್ನು ತುಂಬಿಕೊಳ್ಳಬೇಕು, ಅವನ ಅನುಗ್ರಹದಿಂದ ಒಳ್ಳೆಯತನ ಹೊಂದಬೇಕು ಎಂದು ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ತಿಳಿಸಿದರು.

ಭೂ ವೈಕುಂಠದಲ್ಲಿ ಅಭಿವೃದ್ಧಿಗಳ ಸಮರ್ಪಣೆ
ಶಿರಸಿ: ಭೂ ವೈಕುಂಠ ಮಂಜುಗುಣಿಯ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗೂ ವಿವಿಧ ನೂತನ ಅಭಿವೃದ್ಧಿ ಕಾರ್ಯಗಳ ಸಮರ್ಪಣಾ ಸಮಾರಂಭವು ಭಾನುವಾರದಂದು ಆರಾಧನೆಯ ಭಾವದಲ್ಲಿ ನಡೆಯಿತು.
ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ, 2000ನೇ ಇಸವಿಯಿಂದ ಹಂತಹಂತವಾಗಿ ಕೈಗೊಳ್ಳಲಾಗಿದ್ದ ದೇವಸ್ಥಾನದ ಪ್ರಾಕಾರ ಕಟ್ಟಡಗಳ ಸಮಗ್ರ ಜೀರ್ಣೋದ್ಧಾರ, ಗೋಶಾಲೆ, ತೀರ್ಥಕೆರೆಗಳ ನವೀಕರಣ ಹಾಗೂ ನಿತ್ಯ ಅನ್ನಪ್ರಸಾದ ವ್ಯವಸ್ಥೆ ಸೇರಿದಂತೆ ಹಲವು ಸೇವೆಗಳು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಂಡವು. ಬೆಳಿಗ್ಗೆಯಿಂದಲೇ ವಿವಿಧ ಹೋಮ-ಹವನ ಹಾಗೂ ವಿಶೇಷ ಪೂಜೆಗಳು ಜರುಗಿದವು.
ರಜತಮಯ ಶಿಖರ ಕಲಶ ಸ್ಥಾಪನೆ, ವಿಮಾನ ವೇಂಕಟೇಶ ಪ್ರತಿಷ್ಠೆ, ಬೃಹತ್ ಸಂರಕ್ಷಣಾ ಪಟ ಸಮರ್ಪಣೆ, ಕರ್ನಾಟಕದಲ್ಲಿಯೇ ಅತ್ಯಂತ ವಿಸ್ತಾರವೆನಿಸಿದ (185 ಅಡಿ ಉದ್ದ ಹಾಗೂ 111 ಅಡಿ ಅಗಲ) ಬೃಹತ್ ಆಚ್ಛಾದನೆಯನ್ನು ದೇವಸ್ಥಾನಕ್ಕೆ ಅರ್ಪಿಸಲಾಯಿತು.
ನೂತನವಾಗಿ ನಿರ್ಮಾಣಗೊಂಡ ಬೆಳ್ಳಿಯ ‘ಭೂ ವೈಕುಂಠದ್ವಾರ ಮಂಟಪ’ ಪ್ರವೇಶ ಹಾಗೂ ಶಿಲಾಮಯ ಗಜಮಿಥುನಗಳ ಸಮರ್ಪಣೆ ನಡೆಯಿತು.
ಗಮನ ಸೆಳೆದ ನೃತ್ಯ ರೂಪಕ
ವಿಶ್ವಶಾಂತಿ ಸರಣಿಯ ಹನ್ನೊಂದನೇಯ ರೂಪಕ ವಿಶ್ವಾಭಿಗಮನಮ್ ಯಕ್ಷ ನೃತ್ಯ ರೂಪಕ ಪ್ರೇಕ್ಷಕರ ಗಮನ ಸೆಳೆಯಿತು. ಮುಮ್ಮೇಳದಲ್ಲಿ ಕು. ತುಳಸಿ ಹೆಗಡೆ ಅಭಿನಯಿಸಿದರೆ, ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮದ್ದಲೆಯಲ್ಲಿ ಶರತ್ ಜಾನಕೈ, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಿದರು. ಇದಕ್ಕೂ ಮುನ್ನ ಆನಂದ ಭಟ್ಟ ದಾಯಿಮನೆ ಸಂಗಡಿಗರಿಂದ ಭಜನೆ ಭಕ್ತಿ ಭಾವದಲ್ಲಿ ತೇಲಿಸಿತು.



