*ಭೀಮಣ್ಣ ಖಂಡ್ರೆ ನಿಧನಕ್ಕೆ ಡಾ.ಪ್ರಭಾಕರ ಕೋರೆ, ಹುಕ್ಕೇರಿ ಸ್ವಾಮೀಜಿ ಸೇರಿ ಹಲವರ ಶೋಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ/ ಬೆಂಗಳೂರು/ ನವದೆಹಲಿ :
ಮಾಜಿ ಸಚಿವರು, ನಾಡಿನ ಹಿರಿಯ ರಾಜಕಾರಣಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರಾದ ಶರಣ ಭೀಮಣ್ಣ ಖಂಡ್ರೆಯವರ ನಿಧನದಿಂದ ಸಮಾಜ ಬಡವಾಗಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಬದುಕಿನುದ್ದಕ್ಕೂ ಶರಣ ಚಿಂತನೆಗಳಂತೆ ಬಾಳಿದ ಧೀಮಂತ ನಾಯಕ ಭೀಮಣ್ಣ ಖಂಡ್ರೆಯವರಾಗಿದ್ದರು. ಮಹಾಸಭೆಯ ಅಧ್ಯಕ್ಷರಾಗಿ ಸಮಾಜವನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದರು. ಮಹಾಸಭೆಗೆ ಅವರ ಕೊಡುಗೆ ಅನನ್ಯ ಹಾಗೂ ಚಿರಸ್ಮರಣೀಯವೆನಿಸಿದೆ. ಮಹಾತ್ಮಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಭೀಮಣ್ಣ ಖಂಡ್ರೆಯವರು ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡು ಏಕೀಕರಣಕ್ಕಾಗಿ ಹೋರಾಡಿದ ಕನ್ನಡ ಸೇನಾನಿ.
ಸಮಾಜದ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ತೀವ್ರವಾಗಿ ಖಂಡಿಸುತ್ತಿದ್ದ ಅವರು ಹಾವನೂರ ವರದಿಯನ್ನು ಸ್ಪಷ್ಟವಾಗಿ ಪ್ರಶ್ನಿಸಿದ್ದರು. ಸಮಾಜಕ್ಕೆ ಅನ್ಯಾಯವಾದಾಗ ತೀವ್ರವಾಗಿ ಪ್ರತಿಭಟಿಸುವ ಛಾತಿ ಅವರದಾಗಿತ್ತು. ಸಮಾಜ ಇಬ್ಬಾಗುವುದನ್ನು ಸಾಕಷ್ಟು ವಿರೋಧಿಸಿದ್ದ ಭೀಮಣ್ಣ ಖಂಡ್ರೆಯವರು ಕೊನೆ ಉಸಿರಿನ ವರೆಗೆ ಸಮಾಜದ ಕುರಿತು ಚಿಂತಿಸಿದರು. ಅವರ ಬದುಕು ಸಾತ್ವಿಕವಾಗಿತ್ತು. ನಾಡಿ ಸಮಾಜಕ್ಕೆ ಅವರು ನೀಡಿದ ಸೇವೆಯನ್ನು ನಾವೆಲ್ಲರೂ ಸ್ಮರಿಸಿಕೊಳ್ಳಲೇಬೇಕು.
ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು, ಆ ಪ್ರಯತ್ನದಲ್ಲಿ ಕೂಡ ಸಫಲರಾದ ಹುಟ್ಟು ಹೋರಾಟಗಾರ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿಯಾಗಿವೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲಿಕೆ ದುಃಖವನ್ನು ಕುಟುಂಬಕ್ಕೆ ಸಹಿಸಿಕೊಳ್ಳುವ ಶಕ್ತಿಯನ್ನು ಪರಮಾತ್ಮನು ಕರುಣಿಸಲೆಂದು ಡಾ.ಪ್ರಭಾಕರ ಕೋರೆಯವರು ಸಮಸ್ತ ಕೆಎಲ್ಇ ಸಂಸ್ಥೆಯಿಂದ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಿದ್ದಾರೆ.
ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂತಾಪ
ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಬೆಳಗಾವಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಒಂದೇ ತಿಂಗಳಲ್ಲಿ ವೀರಶೈವ ಮಹಾಸಭಾದ ಎರಡು ವಜ್ರಗಳನ್ನು ಕಳೆದೊಂಡು ಸಮಾಜ ದೊಡ್ಡ ಶೋಕದಲ್ಲಿ ಮುಳುಗಿದೆ. ಭೀಮಣ್ಣ ಖಂಡ್ರೆ ಅವರು ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ವೇಳೆ ಗುರು ವೀರಕ್ತರನ್ನು ಒಂದು ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ. ಸಮಾಜದ ಸುಧಾರಣೆಯಲ್ಲಿ ಮಂಚೂಣಿಯಲ್ಲಿರುತ್ತಿದ್ದ ಅವರ ಅಗಲಿಕೆಯಿಂದ ಅವರ ಅಭಿಮಾನಿಗಳು ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಭೀಮಣ್ಣ ಖಂಡ್ರೆ ಅಗಲಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶೋಕ
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷರೂ ಆಗಿದ್ದ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರ ಅಗಲಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಭೀಮಣ್ಣ ಖಂಡ್ರೆ ಅವರು ಹೋರಾಟಗಾರರಾಗಿ, ಸಮಾಜ ಸಂಘಟಕರಾಗಿ ಮತ್ತು ರಾಜಕಾರಣಿಯಾಗಿ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಹೈದರಾಬಾದ್ ಕರ್ನಾಟಕ ವಿಮೋಚನೆ, ಕರ್ನಾಟಕ ಏಕೀಕರಣದಂತಹ ಪ್ರಮುಖ ಚಳುವಳಿಗಳ ಮುಂಚೂಣಿ ವಹಿಸಿ ಕನ್ನಡ ನಾಡಿನ ಹಿತಕ್ಕೆ ಶ್ರಮಿಸಿದ್ದಾರೆ. ಅಲ್ಲದೇ, ಶಾಸಕ-ಸಚಿವರಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷರಾಗಿ ಸಹ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಎಂದು ಜೋಶಿ ಸ್ಮರಿಸಿದ್ದಾರೆ.
ಡಾ.ಭೀಮಣ್ಣ ಖಂಡ್ರೆ ಅವರು ನಿಧನದಿಂದ ಕನ್ನಡ ನಾಡು ವಂತ್ತು ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ವಿಷಾದಿಸಿರುವ ಸಚಿವರು, ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಮತ್ತು ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.
ಭೀಮಣ್ಣ ಖಂಡ್ರೆ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ
ಭೀಮಣ್ಣ ಖಂಡ್ರೆ ಸಮಾಜಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸಿದ್ದರು:ಬಸವರಾಜ ಬೊಮ್ಮಾಯಿ
ಬೆಂಗಳೂರು: ಹಿರಿಯ ನಾಯಕರಾಗಿದ್ದ ಭೀಮಣ್ಣ ಖಂಡ್ರೆ ಅವರ ನಿಧನದ ಸುದ್ದಿ ಕೇಳಿ ದುಖಿತನಾಗಿದ್ದೇನೆ. ಭೀಮಣ್ಣ ಖಂಡ್ರೆ ಅವರು ಹಿರಿಯ ಮಾರ್ಗದರ್ಶಕರಾಗಿದ್ದರು. ಅವರು ಆದರ್ಶದ ಬದುಕು ನಡೆಸಿದ್ದಾರೆ. ಹೋರಾಟದ ಬದುಕು ನಡೆಸಿದ್ದಾರೆ. ವಿಶೇಷವಾಗಿ ರೈತರಿಗೆ ದೀನ ದಲಿತರಿಗೆ ಮತ್ತು ಬೀದರಿನ ಅಭಿವೃದ್ಧಿಯಲ್ಲಿ ಅವರು ಮಾಡಿರುವ ಕೆಲಸ ಕಾರ್ಯಗಳು ಸ್ಥಿರಸ್ಥಾಯಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಮೂಲಕ ಸಂತಾಪ ಸೂಚಿಸಿರುವ ಅವರು, ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿ ಬೆಳೆಸಿದ್ದರು. ಗಟ್ಟಿ ಧ್ಬನಿಯಾಗಿದ್ದರು. ಸಮಾಜಕ್ಕೆ ನ್ಯಾಯ ಒದಗಿಸಲು ಕೊನೆ ಉಸಿರು ಇರುವವರೆಗೂ ಹೋರಾಟ ಮಾಡಿದ್ದರು. ಅವರ ಅಗಲಿಕೆಯಿಂದ ಕರ್ನಾಟಕ ಬಡವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಬಡವಾಗಿದೆ. ನಮ್ಮ ತಂದೆಯವರೊಂದಿಗೆ ಬಹಳ ನಿಕಟವಾದ ಸಂಬಂಧ ಇಟ್ಟುಕೊಂಡಿದ್ದ ನಾಯಕರು ಅಗಲಿರುವುದು ವಯಕ್ತಿಕವಾಗಿ ನನಗೆ ತುಂಬ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
ಬೆಳಗಾವಿ ಜಿಲ್ಲಾ ಘಟಕ ಅಖಿಲ ಭಾರತ ವೀ.ಲಿಂ.ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಕಂಬನಿ :
ಸಮಾಜಸೇವೆ, ಸರಳತೆ ಮತ್ತು ಶರಣ ಮೌಲ್ಯಗಳ ಪ್ರತೀಕವಾಗಿದ್ದ ಭೀಮಣ್ಣ ಖಂಡ್ರೆ ಅವರು ಲಿಂಗೈಕ್ಯರಾಗಿರುವ ಸುದ್ದಿ ವೀರಶೈವ ಲಿಂಗಾಯತ ಸಮಾಜ ಹಾಗೂ ನಾಡಿನ ಅಪಾರ ಅಭಿಮಾನಿಗಳಿಗೆ ತೀವ್ರ ದುಃಖವನ್ನುಂಟುಮಾಡಿದೆ ಎಂದು ಬೆಳಗಾವಿ ಜಿಲ್ಲಾ ಘಟಕ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಕಂಬನಿ ಮಿಡಿದಿದ್ದಾರೆ.
ತಮ್ಮ ಜೀವನವನ್ನು ಗುರು ಲಿಂಗ ಜಂಗಮ ಸೇವೆಗೆ ಅರ್ಪಿಸಿದ್ದ ಅವರು, ಜನರ ಹೃದಯಗಳಲ್ಲಿ ಅಚ್ಚಳಿಯದ ಸ್ಥಾನವನ್ನು ಗಳಿಸಿದ್ದರು. ಬಸವಾದಿ ಶಿವಶರಣರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಭೀಮಣ್ಣ ಖಂಡ್ರೆ ಅವರು, ಲಿಂಗಾಯತ ಸಮಾಜದ ಶಕ್ತಿಯಾಗಿದ್ದರು, ಗಟ್ಟಿ ಧ್ವನಿಯಾಗಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯನ್ನು ವ್ಯಕ್ತಿ ಆಧಾರಿತ ಸಂಸ್ಥೆಯಿಂದ ಸಾಂಸ್ಥಿಕ ನೆಲಗಟ್ಟಿನ ಮೇಲೆ ಬಲಿಷ್ಠ ಸಂಘಟನೆಯಾಗಿ ರೂಪಿಸಿದ್ದುದು ಅವರ ಬಹುದೊಡ್ಡ ಕೊಡುಗೆ. ಅವರು ಉಸಿರಿರುವ ವರೆಗೂ ಸಮಾಜಕ್ಕಾಗಿ ಚಿಂತಿಸಿದರು. ಅವರ ನಿಸ್ವಾರ್ಥ ಸೇವಾಭಾವ ಇಂದಿನ ಸಮಾಜದ ಯುವಕರಿಗೆ ಪ್ರೇರಣೆಯಾಗಿ ನಿಂತಿದೆ.
ಗಾಂಧೀವಾದಿಗಳಾಗಿ ಸ್ವತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಅವರ ಕೊಡುಗೆ ಅಸದಳ. ಅವರು ನಮ್ಮ ಮಧ್ಯೆ ದೇಹಾತೀತರಾಗಿದ್ದರೂ, ಅವರ ಮೌಲ್ಯಗಳು, ಆದರ್ಶಗಳು ಮತ್ತು ಸಮಾಜಕ್ಕಾಗಿ ಮಾಡಿದ ಸತ್ಕಾರ್ಯಗಳು ಸದಾ ಜೀವಂತವಾಗಿರಲಿವೆ. ಅವರ ಅಗಲಿಕೆಯ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಬೆಳಗಾವಿ ಜಿಲ್ಲಾ ಘಟಕದ ಸಮಸ್ತ ಪದಾಧಿಕಾರಿಗಳು ಹಿರಿಯ ಚೇತನ ಭೀಮಣ್ಣ ಖಂಡ್ರೆಯವರಿಗೆ ಅಶ್ರುತರ್ಪಣ ಸಲ್ಲಿಸುತ್ತದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣೀಸಲೆಂದು ಪ್ರಾರ್ಥಿಸುತ್ತದೆ.




