ಬೆಳಗಾವಿಯಲ್ಲಿ ಡಿಕೆಶಿ ಪರ ಬೃಹತ್ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರ ಬಂಧನ ವಿರೋಧಿಸಿ ರಾಜ್ಯದ ಹಲವು ಕಡೆಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದೆ. ಅದೇ ರೀತಿ ಬೆಳಗಾವಿಯಲ್ಲೂ ಇಂದು ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡರಾದ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳಕರ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜು ಸೇಠ್, ಸಿ.ಸಿ. ಪಾಟೀಲ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಆರ್ ಟಿಒ ವೃತ್ತದ ಕಾಂಗ್ರೆಸ್ ಕಚೇರಿಯಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಚನ್ನಮ್ಮ ವೃತ್ತದಲ್ಲಿ ಟೈಯರ್ ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು, ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು, ನಾವೆಲ್ಲರೂ ಡಿ ಕೆ ಶಿವಕುಮಾರ ಅವರ ಬೆಂಬಲಕ್ಕೆ ಇದ್ದೇವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಆಡಳಿತ ನಡೆಸಿದ್ದರೂ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ಈಗಿನ ಬಿಜೆಪಿ ಸರಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ. ವಿಪಕ್ಷ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜು ಸೇಠ್ ಮಾತನಾಡಿ, ಡಿ.ಕೆ. ಶಿವಕುಮಾರ ಅವರು ಯಾವುದೇ ಅಕ್ರಮ ಆಸ್ತಿ ಗಳಿಕೆ ಮಾಡದಿದ್ದರೂ ಇಡಿ ಮೂಲಕ ಕೇಂದ್ರ ಸರಕಾರ ವಿನಾಕಾರಣ ತೊಂದರೆ ನೀಡುತ್ತಿದೆ, ಕೇಂದ್ರದ ಬಿಜೆಪಿ ಸರಕಾರ ಕಾಂಗ್ರೇಸ್ ನಾಯಕರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದರು.
ಮಹಾಂತೇಶ ಮತ್ತಿಕೊಪ್ಪ, ಯುವರಾಜ ಕದಂ, ನಾನಪ್ಪ ಪಾರ್ವತಿ, ಯಲ್ಲಪ್ಪ, ಸಂಭಾಜಿ ಯಮೋಜಿ, ತೌಸಿಪ್, ನಿಲೇಶ, ಆರ್ ವಿ ಪಾಟೀಲ, ಪ್ರಕಾಶ ಪಾಟೀಲ, ಬಸವರಾಜ ಮ್ಯಾಗೋಟಿ, ಅರ್ಜುನ ಪಾಟೀಲ, ಮಹಾವೀರ ಪಾಟೀಲ, ಮಾನಿಕ್ ಸಂಕೇಶ್ವರ ಹಾಗೂ ಗ್ರಾಮೀಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ