ಸೋಮವಾರ ಮತ್ತೆ ಕಲ್ಯಾಣ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
12 ನೇ ಶತಮಾನದಲ್ಲಿ ಬಸವಾದಿ ಶರಣರ ಕ್ರಾಂತಿಯು ಜಗತ್ತಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿರುವ ಕ್ರಾಂತಿ. ವರ್ಗ-ವರ್ಣ, ಮೇಲು-ಕೀಳು ರಹಿತ, ಲಿಂಗತಾರತಮ್ಯ ರಹಿತ ಆ ಕ್ರಾಂತಿಯ ಆಶಯಗಳನ್ನು ಇಂದಿನ ಯುವ ಜನಾಂಗಕ್ಕೆ ತಲುಪಿಸುವ ಅತ್ಯಂತ ವಿಶಿಷ್ಟ ಕಾರ್ಯಕ್ರಮವಾಗಿರುವ ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.
ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಆಗಷ್ಟ 26 ರಂದು ಬೆಳಗಾವಿ ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಆಗಷ್ಟ 26 ರಂದು ಬೆಳಿಗ್ಗೆ 11 ಗಂಟೆಗೆ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಡಾ.ಪಂಡಿತಾರಾಧ್ಯ ಸ್ವಾಮೀಜಿಗಳು, ತೋಂಟದಾರ್ಯ ಶ್ರೀ ಸಿದ್ದರಾಮ ಸ್ವಾಮೀಜಿಗಳು ಹಾಗೂ ಸಾಹಿತಿಗಳಾದ ಡಾ.ವಿ.ಎಸ್.ಮಾಳಿ ಮತ್ತು ಡಾ.ಅವಿನಾಶ ಕವಿ ಅವರುಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಮಹಾಂತ ಭವನದಿಂದ ಕೆಪಿಟಿಸಿಎಲ್ ಸಭಾಗೃಹದವರೆಗೆ ಸಾಮರಸ್ಯ ಮತ್ತು ಸಂತ್ರಸ್ತರ ನೆರವು ನಡಿಗೆ ನಡೆಯಲಿದೆ. ಸುಮಾರು 5 ಸಾವಿರ ಜನ ಭಾಗವಹಿಸಲಿದ್ದಾರೆ. ಈ ನಡಿಗೆಯಲ್ಲಿ ನೆರೆ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲಾಗುವುದು.
ಸಂಜೆ 5 ಗಂಟೆಗೆ ಕೆಪಿಟಿಸಿಎಲ್ ಸಭಾಗೃಹದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯುವುದು. ಡಾ.ಪಂಡಿತಾರಾಧ್ಯ ಶಿವಾಚಾರ್ಯರು, ತೋಂಟದಾರ್ಯ ಶ್ರೀ ಸಿದ್ದರಾಮ ಸ್ವಾಮೀಜಿಗಳು, ಜಿಲ್ಲೆಯ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗಂಗಪ್ಪ ಮಾಳಗಿ ಅಧ್ಯಕ್ಷತೆ ವಹಿಸುವರು. ಕಾಯಕ ಜೀವಿಗಳ ಕ್ರಾಂತಿ ಕುರಿತು ವೀರಣ್ಣ ರಾಜೂರ ಮತ್ತು ವಚನಕಾರ್ತಿಯರ ಲೋಕದೃಷ್ಟಿ ಕುರಿತು ಡಾ.ವಿನಯ ವಕ್ಕುಂದ ಉಪನ್ಯಾಸ ನೀಡಲಿದ್ದಾರೆ. ಸಭೆಯ ನಂತರ ವಚನ ರೂಪಕ ನೃತ್ಯ ಮತ್ತು ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ