Belagavi NewsBelgaum NewsHealthKannada NewsKarnataka NewsLatest

*ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅರ್ಥಪೂರ್ಣವಾಗಿ ಕ್ಯಾನ್ಸರ್ ದಿನಾಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಸಂಪತ್ ಕುಮಾರ ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಂಗಳವಾರ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು.

ಬದುಕಿನಲ್ಲಿ ವಿಶ್ವಾಸವನ್ನೇ ಕಳೆದುಕೊಂಡಿದ್ದವರು ಕ್ಯಾನ್ಸರ್ ರೋಗದಿಂದ ಗುಣಮುಖರಾಗಿ ಸಹಜ ಜೀವನ ನಡೆಸುತ್ತಿರುವ ಕುರಿತು ಜನರಿಗೆ ತಿಳಿಸಿ, ಅವರ ಮೂಲಕವೇ ಕಾರ್ಯಕ್ರಮ ಉದ್ಘಾಟನೆ ಮತ್ತು ಅಂತವರಿಗೆ ಸನ್ಮಾನ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲಾಯಿತು.

ಸಮಾರಂಭವನ್ನು ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿತಿನ ಗಂಗಣೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವೈದ್ಯಕೀಯ ತಂತ್ರಜ್ಞಾನದಲ್ಲಾಗುವ ಬದಲಾವಣೆ ಕ್ಯಾನ್ಸರ್ ರೋಗಿಗಳ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ. ಕ್ಯಾನ್ಸರ್ ಹೊಂದಿದ ರೋಗಿಗಳು ಗುಣಮುಖರಾಗಿ ಸಾಮಾನ್ಯರಂತೆ ಜೀವನ ಸಾಗಿಸಲು ಸಾಧ್ಯ. ಆದರೆ ಕ್ಯಾನ್ಸರ್ ಎಂದೊಡನೆ ರೋಗಿಗಳು ಬೆಚ್ಚಿ ಬೀಳುತ್ತಾರೆ. ಅವರಲ್ಲಿರುವ ಭಯವನ್ನು ಹೋಗಲಾಡಿಸುವ ಕಳಕಳಿಯನ್ನು ತೋರ್ಪಡಿಸಬೇಕು. ಸಮಾಜಿಕವಾಗಿ ಅವರನ್ನು ದೂರವಿಡದೇ, ನಾವು ಜೀವನ ನಡೆಸುತ್ತೇವೆ ಎಂಬ ಆಶಾಭಾವನೆ ಅವರಲ್ಲಿ ಮೂಡಬೇಕು. ಅದರಂತೆ ರೋಗಿಗಳೂ ಕೂಡ ನಿಗಧಿತ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕೆಂದು ಕರೆ ನೀಡಿದರು.

ಆರ್ಥಿಕ ಹಾಗೂ ಸಾಮಾಜಿಕವಾಗಿ ಬಳಲುವ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವೆಲ್ಲರೂ ಕೈಜೋಡಿಸಿ, ಅವರಿಗೆ ವಿಶೇಷ ನೆರವು ನೀಡುತ್ತ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಬೇಕು. ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕಾಗಿದೆ ಎಂದರು.

ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಅತ್ಯಾಧುನಿಕವಾಗಿ ನಿರ್ಮಿಸಲಾದ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.

ರೋಗಿಗಳು ಹೆದರದೆ ಧೈರ್ಯದಿಂದ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು. ಆರಂಭಿಕ ಹಂತದಲ್ಲೇ ಬಂದರೆ ಚಿಕಿತ್ಸೆ ಯಶಸ್ವಿಯಾಗುವ ಪ್ರಮಾಣ ಹೆಚ್ಚಾಗಿರುತ್ತದೆ. ಯಾವುದೇ ಹಿಂಜರಿಕೆ ಇಲ್ಲದೆ ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ವೈದ್ಯರು ರೋಗಿಗಳ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾರೆ. ಯಾರೂ ಆತಂಕಪಡಬೇಕಾಗಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಕ್ಯಾನ್ಸರ್ ನಿಂದ ಗುಣಮುಖರಾದ ರೋಗಿಗಳನ್ನು ಸತ್ಕರಿಸಲಾಯಿತು. ರೋಗಿಗಳು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.

ಶಿವನಗೌಡ ಎನ್ನುವ ವಯೋವೃದ್ಧರು ಮಾತನಾಡಿ, ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ನನ್ನ ಜೀವನವೇ ಮುಗಿಯಿತು ಎಂದು ಕಂಗಾಲಾಗಿದ್ದೆ. ಮನೆಯವರೆಲ್ಲ ಅಳುತ್ತಿದ್ದರು. ಆದರೆ ಕೆಎಲ್ಇ ಆಸ್ಪತ್ರೆಗೆ ಬಂದಾಗ ವೈದ್ಯರು ಧೈರ್ಯ ತುಂಬಿದರು. ಸ್ನೇಹಪರವಾಗಿ ನಡೆಸಿಕೊಂಡರು. ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿದರು. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ಇಲ್ಲಿ ತಜ್ಞ ವೈದ್ಯರಿದ್ದು, ಎಲ್ಲ ರೀತಿಯ ವ್ಯವಸ್ಥೆ ಇದೆ. ಬೆಂಗಳೂರು, ಮುಂಬೈನಿಂದ ಸಹ ರೋಗಿಗಳು ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಇನ್ನೂ ಹಲವು ರೋಗಮುಕ್ತರು ಮಾತನಾಡಿ ಆಸ್ಪತ್ರೆಯ ಸೌಲಭ್ಯ , ಚಿಕಿತ್ಸೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಚೆ ಇಲಾಖೆಯ ಬೆಳಗಾವಿ ವಿಭಾಗದಿಂದ ಅಂಚೆ ಕವರ ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಕೆಎಲ್‌ಇ ಯುಎಸ್‌ಎಂ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ‍್ಯರಾದ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ರಾಜೇಶ ಪವಾರ, ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಆರಿಫ್ ಮಾಲ್ದಾರ, ಕ್ಲಿನಿಕಲ್ ಆಡಳಿತಾಧಿಕಾರಿ ಹಾಗೂ ರೆಡಿಯೇಶನ್ ಅಂಕಾಲಾಜಿಯ ಡಾ. ಇಮ್ತಿಯಾಜ ಅಹ್ಮದ, ಕ್ಯಾನ್ಸರ್ ತಜ್ಞ ವೈದ್ಯರಾದ ಡಾ. ಕುಮಾರ ವಿಂಚುರಕರ, ಡಾ. ಮಹೇಶ ಕಲ್ಲೋಳ್ಳಿ, ಡಾ. ಸಂತೋಷ ಮಠಪತಿ, ಡಾ. ರಶ್ಮಿ ಪಾಟೀಲ, ಡಾ. ರಾಜೇಂದ್ರ ಮೆಟಗುಡಮಠ, ಡಾ. ರೋಹನ ಭಿಸೆ, ಡಾ. ಸಪ್ನಾ ಕೆ., ಡಾ. ರಾಘವೇಂದ್ರ ಸಾಗರ, ಡಾ. ರೋಹಿತ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button