Latest

ರೈತರ ಆಶೋತ್ತರಗಳನ್ನು ಈಡೇರಿಸಿದ ಸಮಾಧಾನವಿದೆ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಮೆಗಾಡೈರಿ ಘಟಕ ಉದ್ಘಾಟನೆ ಮಾಡುವ ಮೂಲಕ ಹಾಲು ಉತ್ಪಾದಕ ರೈತರ ಆಶೋತ್ತರಗಳನ್ನು ಈಡೇರಿಸಿದ ಸಮಾಧಾನವಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿಯಲ್ಲಿ ಅವರು ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ನಾವು ಯಾವುದಕ್ಕೆ ಹೋರಾಟ ಮಾಡಿದ್ದೇವೋ ಆ ಕಾರಣವನ್ನು ಸಾಕಾರಗೊಳಿಸುವ ಸೌಭಾಗ್ಯ ನಮಗೆ ದೊರೆತಿರುವುದು ನಿಜಕ್ಕೂ ಖುಷಿ ತಂದಿದೆ ಎಂದ ಅವರು ಹಾವೇರಿ ಜಿಲ್ಲೆಯ ಬಹುದಿನಗಳ ಬೇಡಿಕೆ ಈಡೇರಿರುವುದು ನನಗೆ ಸಂತೋಷ ತಂದಿದೆ. ಹಿಂದಿನ ಸರ್ಕಾರಗಳಲ್ಲಿ ಈಡೇರಿರದ ಸಂಗತಿ ನನಗೆ ಅವಕಾಶ ಸಿಕ್ಕ ಸಂದರ್ಭದಲ್ಲಿ ಇದನ್ನು ಮಾಡಲೇಬೇಕು ಎಂದು ತೀರ್ಮಾನಿಸಿ ಮೆಗಾಡೈರಿ, ಯು.ಹೆಚ್.ಟಿ ಹಾಗೂ ಸ್ಯಾಚೆಟ್ ಘಟಕಗಳು ಪ್ರಾರಂಭವಾಗಿರುವುದು ಸಂತೋಷ ತಂದಿದೆ ಎಂದರು.

ಹಾಲು ಉತ್ಪಾದನೆ ಸುಮಾರು ಒಂದು ಲಕ್ಷ ಲೀಟರ್ ಗೂ ಮೀರಿ ಆಗುತ್ತಿದೆ. ಡೈರಿ ಮಾಡುವ ಮೊದಲು 75 ಲಕ್ಷ ಲೀ. ಇತ್ತು. ಘಟಕ ಸಂಪೂರ್ಣವಾಗಿ ಕಾರ್ಯಗತವಾದರೆ ನಮ್ಮದೇ ಪ್ಯಾಕೇಜಿಂಗ್ ಹಾಗೂ ಮಾರ್ಕೆಟಿಂಗ್ ಮಾಡಿದಾಗ ಇನ್ನೂ ಹೆಚ್ಚಿನ ಹಾಲು ಕೊಳ್ಳಬಹುದು ಮತ್ತು ರೈತರಿಗೆ ಹೆಚ್ಚಿನ ಸೌಲಭ್ಯ ಗಳನ್ನು ನೀಡಬಹುದು ಎಂದರು.

ಹಾವೇರಿ ಜಿಲ್ಲೆಯ ರೈತರ ಕನಸು ನನಸಾಗಿದೆ. ಹಾಲು ಒಕ್ಕೂಟ, ಮೆಗಾ ಡೈರಿ ಸ್ಥಾಪಿಸಲಾಗುತ್ತಿದೆ. ಈ ಮುಂಚೆ ಟೆಟ್ರಾ ಪ್ಯಾಕ್ ಯುಹೆಚ್ ಟಿ ಹಾಲು ಸ್ಥಾವರ ಹಾಗೂ ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಟಕಕ್ಕೂ ಅಡಿಗಲ್ಲು ಹಾಕಿದ್ದು, ಇಂದು ಉದ್ಘಾಟಿಸಲಾಗಿದೆ. ಟೆಟ್ರಾ ಪ್ಯಾಕ್ ನ ಯುಹೆಚ್ ಟಿ ಹಾಲು ಸ್ಥಾವರದಲ್ಲಿ ಸುಮಾರು 80 ಸಾವಿರ ದಿಂದ 1 ಲಕ್ಷದವರೆಗೂ ಸಾಮರ್ಥ್ಯವಿದೆ. ಸ್ಯಾಚೆಟ್ ಹಾಲು ಘಟಕದ ಸಾಮರ್ಥ್ಯ 25 ರಿಂದ 50 ಸಾವಿರ ಲೀ. ವರೆಗೆ ಇದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button