ಮೇಕೆದಾಟು: ಸರ್ಕಾರಕ್ಕೆ ಹೊಸ ಇಕ್ಕಟ್ಟು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಬೆನ್ನಲ್ಲೇ ಇದೀಗ ಪರಿಸರವಾದಿಗಳು ಮೇಕೆದಾಟು ಯೋಜನೆ ಬೇಡ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್ ಜನಪ್ರಿಯತೆ ಹೆಚ್ಚುತ್ತಿರುವುದನ್ನು ನೋಡಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ್ದ ರಾಜ್ಯ ಸರಕಾರ ಇದೀಗ ಪರಿಸರವಾದಿಗಳ ಸವಾಲು ಎದುರಿಸಬೇಕಾಗಿದೆ.

ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವುದಾಗಿ ಈಗಾಗಲೇ ರಾಜ್ಯ ಸರಕಾರ ಲಿಖಿತ ಭರವಸೆ ನೀಡಿದೆ. ಅಲ್ಲದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ಅನುಷ್ಠಾನಗೊಳಿಸುವ ಅವಕಾಶವಿದ್ದರೂ ಕಾರ್ಯರೂಪಕ್ಕೆ ತಂದಿರಲಿಲ್ಲ ಎಂಬ ಆರೋಪವನ್ನೂ ಬೊಮ್ಮಾಯಿ ಸರಕಾರ ಮಾಡಿದೆ.

ಬಿಜೆಪಿ ಕಾಂಗ್ರೆಸ್ ನಡುವಿನ ಈ ಹಗ್ಗ ಜಗ್ಗಾಟ ನಡೆಯುತ್ತಿರುವಾಗಲೇ ಪರಿಸರವಾದಿಗಳು ಮೇಕೆದಾಟು ವಿರೋಧಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಯಾನವನ್ನೇ ಆರಂಭಿಸಿದ್ದಾರೆ. ಟ್ವಿಟರ್‌ನಲ್ಲಿ ಪಶ್ಚಿಮ ಘಟ್ಟಗಳು ಟ್ವಿಟರ್ ಮೂಲಕ ಯೋಜನೆಯನ್ನು ವಿರೋಧಿಸಿ ನೂರಾರು ಜನ ಅಭಿಪ್ರಾಯ ಮಂಡಿಸುತ್ತಿದ್ದಾರೆ. ೯ ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಯಿಂದ ಸಾವಿರಾರು ಎಕರೆ ಕಾಡು ನಾಶವಾಗುತ್ತದೆ. ಕಾಡು ಉಳಿದರೆ ಮಾತ್ರ ಮುಂದಿನ ತಲೆಮಾರಿಗೆ ಸಮೃದ್ಧ ನೀರು ಸಿಗಲು ಸಾಧ್ಯ, ಹಾಗಾಗಿ ಯೋಜನೆಯನ್ನು ಕೈ ಬಿಟ್ಟು, ಅದೇ ಹಣದಲ್ಲಿ ಕೆರೆ, ಹಳ್ಳಗಳನ್ನು ತುಂಬಿಸಿ, ನೀರಿಂಗಿಸುವ ಕಾರ್ಯಕ್ಕೆ ವಿನಿಯೋಗಿಸಿ ರೈತರಿಗೆ ನೀರು ಕೊಡಿ ಎಂಬುದು ಟ್ವಿಟರ್ ಅಭಿಯಾನದ ಒಟ್ಟಾರೆ ಆಗ್ರಹವಾಗಿದೆ.

ಮೇಧಾ ಪಾಟ್ಕರ್ ಭಾಗಿ

ಇನ್ನು ಮೇಕೆದಾಟು ಯೋಜನೆ ವಿರೋಧಿಸಿ ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಕೂಡ ರಂಗಕ್ಕಿಳಿದಿದ್ದಾರೆ. ಮೇಧಾ ಪಾಟ್ಕರ್ ಈ ಯೋಜನೆಯನ್ನು ಖಂಡಿಸಿ ಎತ್ತಿರುವ ಪ್ರಶ್ನೆಗಳಿಗೆ ರಾಜ್ಯ ಸರಕಾರವೇ ಉತ್ತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಚಿತ್ರನಟ ಚೇತನ್ ಸೇರಿದಂತೆ ಹಲವು ಖ್ಯಾತ ನಾಮರು ಮೇಕೆದಾಟು ಯೋಜನೆ ವಿರೋಧದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಪರಿಸರವಾದಿಗಳ ಹಿಡಿತ ಬಿಗಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಯೋಜನೆಯ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಹುಟ್ಟಿಸಿದೆ.

ಸೋಮವಾರ ಸಂಜೆ ಸಿಎಂ ಮಹತ್ವದ ಸಭೆ: ಶಾಲೆಗಳಿಗೆ ರಜೆ ನಿರ್ಧಾರವಾಗುತ್ತಾ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button