Kannada NewsKarnataka NewsLatest

ಶಿವಾಜಿ ಭಕ್ತರಿಗೆ, ಶಿವಾಜಿ ವಂಶಸ್ಥರಿಗೆ ಎಂಇಎಸ್ ಅವಮಾನ : ಮರಾಠಿ ಭಾಷಿಕರ ತೀವ್ರ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿದ್ದೆಯಿಂದ ಎಚ್ಚೆತ್ತಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ, ಲಕ್ಷಾಂತರ ಛತ್ರಪತಿ ಶಿವಾಜಿ ಅನುಯಾಯಿಗಳಿಗೆ ಮತ್ತು ಛತ್ರಪತಿ ಶಿವಾಜಿ ವಂಶಸ್ಥರಿಗೆ ಅವಮಾನ ಮಾಡಲು ಮುಂದಾಗಿದೆ.

ಛತ್ರಪತಿ ಶಿವಾಜಿಯ ವಂಶಸ್ಥರೇ ಆಗಿರುವ ಯುವರಾಜ ಸಂಭಾಜಿರಾಜೇ ಛತ್ರಪತಿಯವರೇ ಲೋಕಾರ್ಪಣೆ ಮಾಡಿರುವ ಮೂರ್ತಿಯನ್ನು ಮಾರ್ಚ್ 19ರಂದು ಶುದ್ಧೀಕರಣ ಮಾಡುವುದಾಗಿ ಘೋಷಿಸುವ ಮೂಲಕ ಎಂಇಎಸ್ ಛತ್ರಪತಿ ಶಿವಾಜಿ ವಂಶಸ್ಥರಿಗೇ ಅವಮಾನ ಮಾಡಲು ಮುಂದಾಗಿದೆ. ಅಲ್ಲದೆ, ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಯಿಂದಾಗಿ ಖುಷಿಯಲ್ಲಿದ್ದ ಶಿವ ಭಕ್ತರಿಗೂ ಎಂಇಎಸ್ ಮುಖಂಡರು ಅವಮಾನ ಮಾಡುತ್ತಿದ್ದಾರೆ.

ಲಕ್ಷಾಂತರ ಜನರ ಬಹುವರ್ಷದ ಕನಸಾಗಿದ್ದ ರಾಜಹಂಸಗಡ ಕೋಟೆಯ ಮೇಲೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ನಿರಂತರ ಪ್ರಯತ್ನದಿಂದಾಗಿ ಛತ್ರಪತಿ ಶಿವಾಜಿ ಮೂರ್ತಿ ಇದೀಗ ಸ್ಥಾಪನೆಯಾಗಿದೆ. ಅದರಲ್ಲೂ, ಛತ್ರಪತಿ ಶಿವಾಜಿಯ 13ನೇ ವಂಶಸ್ಥರಾಗಿರುವ ಯುವರಾಜ ಸಂಭಾಜಿರಾಜೇ ಛತ್ರಪತಿ ಸ್ವತಃ ಆಗಮಿಸಿ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದಾರೆ.

2 ದಿನಗಳ ಕಾಲ ಶಾಸ್ತ್ರೋಕ್ತ ವಿಧಿವಿಧಾನಗಳ ಮೂಲಕ, ರಾಜದರ್ಭಾರದಲ್ಲಿ ನಡೆಯುವ ಪಟ್ಟಾಭಿಷೇಕದ ಮಾದರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಅಭೂತಪೂರ್ವ ರೀತಿಯಲ್ಲಿ ಕಾರ್ಯಕ್ರಮ ನಡೆದಿದೆ. ಯುರಾಜ ಸಂಭಾಜಿರಾಜೇ ಛತ್ರಪತಿ ಸ್ವತಃ ಈ ಎಲ್ಲ ಕಾರ್ಯಗಳನ್ನು ಮೆಚ್ಚಿದ್ದಲ್ಲದೆ, ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ತಮಗೆ ಎಲ್ಲಿಲ್ಲದ ಖುಷಿ ತಂದಿದೆ ಎಂದಿದ್ದರು. ಛತ್ರಪತಿ ಶಿವಾಜಿ ಎಲ್ಲ ಎಲ್ಲೆಗಳನ್ನು ಮೀರಿದವರು. ಅಂತಹ ಮಹಾನ್ ವ್ಯಕ್ತಿಗೆ ಇಂದು ಸಂದ ಗೌರವ ಎಂದೂ ಹೇಳಿದ್ದರು.

ಇಂತಹ ಸಂದರ್ಭದಲ್ಲಿ, ಇದು ನಿಜವಾದ ಶಿವ ಸೈನಿಕರು, ಛತ್ರಪತಿ ಶಿವಾಜಿ ಅನುಯಾಯಿಗಳು ಸಂಭ್ರಮಿಸಬೇಕಾದ ಕ್ಷಣ. ಹಾಗಾಗಿಯೇ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಬಿರು ಬಿಸಿಲೆನ್ನದೆ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ತಮ್ಮ ಕನಸು ಈಡೇರಿದ್ದಕ್ಕೆ, ಛತ್ರಪತಿ ಶಿವಾಜಿ ಮಹಾರಾಜರಿಗೆ ನಿಜವಾದ ಗೌರವ ಸಂದಿದ್ದಕ್ಕೆ, ಇಷ್ಟೊಂದು ಸುಂದರ ಮೂರ್ತಿ ಐತಿಹಾಸಿಕ ಕೋಟೆಯ ಮೇಲೆ ವಿಜ್ರಂಭಿಸುತ್ತಿರುವುದಕ್ಕೆ ಅವರ ಖುಷಿ ನೂರ್ಮಡಿಸಿತ್ತು.

ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಛತ್ರಪತಿ ಶಿವಾಜಿ ಮೂರ್ತಿಯನ್ನು ಶುದ್ಧೀಕರಣ ಮಾಡಲು ಮುಂದಾಗಿರುವುದು ಮರಾಠಿ ಭಾಷಿಕರಷ್ಟೇ ಅಲ್ಲ, ಸಮಸ್ತ ಶಿವಾಜಿ ಅನುಯಾಯಿಗಳಿಗೆ ತೀವ್ರ ನೋವುಂಟುಮಾಡಿದೆ. ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಛತ್ರಪತಿ ಶಿವಾಜಿ ಕುರಿತ ಎಂಇಎಸ್ ಮುಖಂಡರ ಹುಸಿ ಭಕ್ತಿ ಅನಾವರಣವಾಗಿದೆ ಎಂದು ತೀವ್ರವಾಗಿ ಕಿಡಿಕಾರುತ್ತಿದ್ದಾರೆ.

ಮಾರ್ಚ್ 19ರಂದು ನಡೆಸಲುದ್ದೇಶಿಸಿರುವ ಶುದ್ಧೀಕರಣ ಕಾರ್ಯವನ್ನು ಕೈಬಿಡದಿದ್ದರೆ ಎಂಇಎಸ್ ಮುಖಂಡರ ವಿರುದ್ಧ ಮರಾಠಿ ಭಾಷಿಕರು ಬೆಳಗಾವಿ ಜಿಲ್ಲೆಯಾದ್ಯಂತ ನಿಷೇಧ ನಿರ್ಣಯ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸುತ್ತಿದ್ದಾರೆ. ತಮ್ಮ ರಾಜಕೀಯ ತೆವಲಿಗಾಗಿ ಇಂತಹ ಅಚಾತುರ್ಯ ಕೆಲಸಕ್ಕೆ ಮುಂದಾಗಿರುವ ಎಂಇಎಸ್ ನ ಕೆಲವೇ ಕೆಲವು ನಾಯಕರು ಮುಗ್ದ ಮರಾಠಿಗರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಒಳ್ಳೆಯ ಕೆಲಸವನ್ನು ಯಾರೇ ಮಾಡಿದರೂ ಪ್ರಶಂಸಿಸಬೇಕು. ಅದರಲ್ಲೂ ಇಷ್ಟೊಂದು ಸುಂದರವಾದ ಛತ್ರಪತಿ ಶಿವಾಜಿ ಮೂರ್ತಿ ಸ್ಥಾಪನೆಯಂತಹ ಕೆಲಸಕ್ಕೆ ಪಕ್ಷ ಬೇಧ ಮರೆತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಬೇಕು. ಅದನ್ನು ಬಿಟ್ಟು ಒಳ್ಳೆಯ ಕೆಲಸಕ್ಕೂ ಕಲ್ಲು ಹಾಕಲು ಮುಂದಾದರೆ ಎಂಇಎಸ್ ನ್ನು ನಿರ್ಮೂಲನೆ ಮಾಡಬೇಕಾದೀತು ಎಂದು ಮರಾಠಿ ಭಾಷಿಕರು, ಶಿವಸೈನಿಕರು ಎಚ್ಚರಿಕೆ ನೀಡಿದ್ದಾರೆ.

ದೇವರು ಮೈಲಿಗೆಯಾಗಲು ಸಾಧ್ಯವೇ?

ಮರಾಠಿ ಭಾಷಿಕರು ಛತ್ರಪತಿ ಶಿವಾಜಿಯನ್ನು ದೇವರೆಂದೇ ಪರಿಗಣಿಸುತ್ತಾರೆ. ಇದೀಗ ಎಂಇಎಸ್ ಮುಖಂಡರು ಅಂತಹ ದೇವರನ್ನೇ ಶುದ್ಧೀಕರಣಗೊಳಿಸಲು ಮುಂದಾಗಿದ್ದಾರೆ. ದೇವರು ಮೈಲಿಗೆಯಾಗಲು ಸಾಧ್ಯವೇ? ಅಥವಾ ಛತ್ರಪತಿ ಶಿವಾಜಿಯನ್ನು ಎಂಇಎಸ್ ಮುಖಂಡರು ದೇವರೆಂದು ಒಪ್ಪುವುದಿಲ್ಲವೇ? ಈ ಗೊಂದಲವನ್ನು ಅವರು ಪರಿಹರಿಸಬೇಕಿದೆ ಎನ್ನುವುದು ಶಿವಭಕ್ತರ ಆಗ್ರಹವಾಗಿದೆ.

ಒಟ್ಟಾರೆ ನೆಲೆ ಕಳೆದುಕೊಂಡಿರುವ ಮಹಾರಾಷ್ಟ್ರ ಏಕಾಕರಣ ಸಮಿತಿ ನಾಯಕರು ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಛತ್ರಪತಿ ಶಿವಾಜಿ ವಿಷಯವನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವುದು ವಿಪರ್ಯಾಸವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button