*BREAKING: ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳಗಳು ಪತ್ತೆ: ಮುಖ್ಯ ಶಿಕ್ಷಕ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನ ನೀಡುತ್ತಿದ್ದ ಬಿಸಿಯೂಟದ ಅನ್ನ-ಸಾಂಬಾರ್ ನಲ್ಲಿ ಹುಳುಗಳು ಪತ್ತೆಯಾಗಿದ್ದ ಪ್ರಕರಣ ಸಂಬಂಧ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶಿವು ನಾಯ್ಕ್ ಅಮಾನತುಗೊಂಡವರು. ಚಿಕ್ಕಬನ್ನಿಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಡಿಸೆಂಬರ್ 14ರಂದು ಹುಳುಗಳು ಪತ್ತೆಯಾಗಿತ್ತು. ಘಟನೆ ಬೆನ್ನಲ್ಲೇ ಪೋಷಕರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಕ್ಕಿ-ಬೇಳೆಯನ್ನು ಸ್ವಚ್ಚಗೊಳಿಸಿದೇ ಅಡುಗೆ ಸಿಬ್ಬಂದಿ ಅಡುಗೆ ಮಾಡುತ್ತಿದ್ದು, ಮಕ್ಕಳ ಆರೋಗ್ಯದ ಸ್ಥಿತಿ ಏನಾಗಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೆ ಜಿಲ್ಲಾ ಪಂಚಾಯತ್ ಸಿಇಒ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಲ್ಲದೇ ಜಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗೂ ನೋಟಿಸ್ ಜಾರಿ ಮಾಡಿದ್ದಾರೆ.



