*ಬೆಳಗಾವಿಯಲ್ಲಿ ಮಧ್ಯರಾತ್ರಿ ಅಬಕಾರಿ ದಾಳಿ: ಅಕ್ರಮ ಮದ್ಯ ಸಾಗಿಸುತ್ತಿದ್ದ ಟ್ಯಾಂಕರ್ ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ 12 ಚಕ್ರದ ಟ್ಯಾಂಕರ್‌ನ್ನು ಅಬಕಾರಿ ಅಧಿಕಾರಿಗಳು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿದ್ದ ಸುಮಾರು 24 ಸಾವಿರ ಲೀಟರ್ ಮದ್ಯಸಾರ ಸೇರಿದಂತೆ ಟ್ಯಾಂಕರ್‌ನ ಒಟ್ಟು ಮೌಲ್ಯ ₹32.40 ಲಕ್ಷ ಎಂದು ಅಂದಾಜಿಸಲಾಗಿದೆ.
ಅಕ್ಟೋಬರ್ 10ರ ಮಧ್ಯರಾತ್ರಿ ಹೊಳಿಹೊಸೂರು–ಎಂ.ಕೆ. ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗಾವಲು ನಡೆಸುತ್ತಿದ್ದ ವೇಳೆ, ಎಂ.ಕೆ. ಹುಬ್ಬಳ್ಳಿ ಸಮೀಪ ಭಾರತ್ ಬೆಂಜ್ ಕಂಪನಿಯ ಕೆಎ-25 ಎಎ-3750 ನೋಂದಣಿ ಸಂಖ್ಯೆಯ ಟ್ಯಾಂಕರ್ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ತಪಾಸಣೆ ನಡೆಸಿದಾಗ ಟ್ಯಾಂಕರ್‌ನಲ್ಲಿ ಭಾರಿ ಪ್ರಮಾಣದ ಮದ್ಯಸಾರ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಕೂಡಲೇ ವಾಹನ ಹಾಗೂ ಮದ್ಯಸಾರವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ವಾಹನ ಚಾಲಕ ವಿಜಯಪುರ ಜಿಲ್ಲೆಯ ಬೋಳಚಿಕ್ಕಲಕಿ ಗ್ರಾಮದ ಬಂದೇನವಾಜ್ ನಬಿ ಸಾಬ್ ಅವರಿಗೆ ಬಿಎನ್‌ಎಸ್‌ಎಸ್ ಕಾಯ್ದೆ-2023ರ ಕಲಂ 35(3)ರಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಾಹನ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ.
ಬೆಳಗಾವಿ ಕೇಂದ್ರ ಸ್ಥಾನ ಅಬಕಾರಿ ಅಪರ ಆಯುಕ್ತರು ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ, ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಮತ್ತು ರಾಮದುರ್ಗ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಬೈಲಹೊಂಗಲ ವಲಯದ ಅಬಕಾರಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಶ್ರೀಶೈಲ ಅಕ್ಕಿ, ಉಪ ನಿರೀಕ್ಷಕ ಮಹಾದೇವ ಗುಡ್ಡದ, ವಿರೇಶ ಯರಗೊಪ್ಪ ಸೇರಿದಂತೆ ಅಬಕಾರಿ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



