ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ವಲಸೆ ಕಾರ್ಮಿಕರಿಗೆ ಊರುಗಳಿಗೆ ತೆರಳಲು ಕೆ ಎಸ್ ಆರ್ ಟಿಸಿ ವ್ಯವಸ್ಥೆ ಮಾಡಿದ್ದು, ಆದರೆ ಪ್ರಯಾಣದ ಖರ್ಚನ್ನು ಕಾರ್ಮಿಕರೇ ಭರಿಸುವಂತೆ ಹೇಳಿದೆ. ಆದರೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು, ಬಡ ಕಾರ್ಮಿಕರು ಕಂಗಾಲಾಗಿದ್ದರು.
ಇದು ತೀವ್ರ ವಿವಾದವಾಗುತ್ತಿದ್ದಂತೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿದ್ದು, ಮೊದಲಿನ ದರದಲ್ಲೇ ಕಾರ್ಮಿಕರನ್ನು ಕರೆದೊಯ್ಯುವಂತೆ ಆದೇಶಿಸಿದ್ದಾರೆ.
ಲಾಕ್ಡೌನ್ನಿಂದಾಗಿ ವಲಸೆ ಕಾರ್ಮಿಕರು ಬೇರೆ ಬೇರೆ ಊರುಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಂದೂವರೆ ತಿಂಗಳಿಂದ ಸಂಬಳವೂ ಇಲ್ಲದೆ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಕಾರ್ಮಿಕರನ್ನು ಊರಿಗೆ ಕಳುಹಿಸಲು ದುಪ್ಪಟ್ಟು ಹಣ ಪಡೆಯುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ನಮ್ಮನ್ನು ಊರುಗಳಿಗೆ ಕರೆದುಕೊಂಡು ಹೋಗುವುದಾದರೆ ಹೋಗಲಿ ಆದರೆ ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು ಹಲವರು ಅಳಲು ತೋಡಿಕೊಳ್ಳುತ್ತಿದ್ದರು.
ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಆಗಮಿಸಿದ್ದು, ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದಾರೆ. ಬಸ್ ಹತ್ತುವ ಮೊದಲೇ ಊರುಗಳಿಗೆ ತೆರಳುವ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ನಂತರ ಬಸ್ ಹತ್ತಲು ಸೂಚನೆ ನೀಡಲಾಗುತ್ತಿದೆ.
ಬೆಂಗಳೂರಿನಿಂದ ಬಳ್ಳಾರಿಗೆ ಹೋಗಲು ಒಬ್ಬರಿಗೆ 400ರೂ ಬದಲು 800 ರೂ ವಸೂಲಿ ಮಾಡಲಾಗುತ್ತಿದೆ. ಚಿತ್ರದುರ್ಗಕ್ಕೆ 3೦೦ರೂ ಬದಲು 602 ರೂ. ಬೆಳಗಾವಿಗೆ 800 ರೂ ಬದಲು 1478 ರೂ. ಪಡೆದು ಸುಲಿಗೆ ಮಾಡಲಾಗುತ್ತಿತ್ತು.
ಇದು ತೀವ್ರ ವಿವಾದವಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಂಗಲ್ ದರದಲ್ಲೇ ಕಾರ್ಮಿಕರು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಉಚಿತವಾಗಿ ಕಾರ್ಮಿಕರನ್ನು ಕಳಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ