Belagavi NewsBelgaum NewsPolitics

*ಹಾಲಿನ ದರ ಏರಿಕೆಯಿಂದ ರೈತರಿಗೆ ಅನುಕೂಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಬಿಜೆಪಿ ನಾಯಕರಿಂದ ಸರ್ಕಾರದ ಮೇಲೆ ಸುಳ್ಳು ಆರೋಪ


ಪ್ರಗತಿವಾಹಿನಿ ಸುದ್ದಿ:
ಹಾಲಿನ ದರ ಏರಿಕೆ ಮಾಡಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಏರಿಕೆಯಾಗಿರುವ ನಾಲ್ಕು ರೂಪಾಯಿ ನೇರವಾಗಿ ರೈತರಿಗೆ ಸೇರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗಣೇಶಪುರ ಪೈಪ್‌‌ಲೈನ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಬೆಳಗಾವಿ ಜಿಲ್ಲೆಯ ನಿರ್ಮಿತಿ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಹಾಲಿನ ದರ ಏರಿಕೆಯಿಂದ ರೈತರಿಗೆ ಅನುಕೂಲ ಆಗಲಿದ್ದು, ಕೆಎಂಎಫ್ ಈ ಹಣ ಇಟ್ಟುಕೊಳ್ಳುವುದಿಲ್ಲ ಎಂದರು.

Home add -Advt

ಇಂಧನ ಇಲಾಖೆಯ ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ ಹಗರಣ ನಡೆದಿದೆ ಎನ್ನು ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಬಿಜೆಪಿ ನಾಯಕರಿಗೆ ಬೇರೆ ಕೆಲಸವಿಲ್ಲ. ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದೇ ಕೆಲಸವಾಗಿದೆ. ಟೆಂಡರ್ ನಲ್ಲಿ ಯಾವುದೇ ಹಗರಣ ನಡೆದಿಲ್ಲ. ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಟೆಂಡರ್ ಪಡೆದಿರುವ ಕಂಪನಿಗೆ ಇಲ್ಲೂ ಟೆಂಡರ್ ಸಿಕ್ಕಿದೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲೇ ಉತ್ತರ ನೀಡಿದ್ದಾರೆ ಎಂದರು.

ಯತ್ನಾಳ್ ಅವರ ಹೊಸ ಪಕ್ಷಕ್ಕೆ ಶುಭವಾಗಲಿ
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಅವರು ಹೇಳಿದಂತೆ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಯಾವುದೇ ಒಳ ಒಪ್ಪಂದವಿಲ್ಲ. ಅವರು (ಯತ್ನಾಳ್) ನಾಲಿಗೆಗೂ ಮೆದುಳಿಗೂ ಸಂಬಂಧವಿಲ್ಲದಂತೆ ಮಾತನಾಡುತ್ತಾರೆ. ಅವರು ಕಟ್ಟಲು‌ ಹೊರಟಿರುವ ಹೊಸ ಪಕ್ಷಕ್ಕೆ ಶುಭವಾಗಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾರೈಸಿದರು.

ಪೊಲೀಸರು ಕ್ರಮ ಕೈಗೊಳ್ಳುವರು
ನಾನು ಜಿಲ್ಲಾ ಉಸ್ತುವಾರಿ ಸಚಿವೆಯಾದ ಬಳಿಕ ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವರು ಎಂದರು.

ಈ‌ ವೇಳೆ ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಇದ್ದರು.

Related Articles

Back to top button