Kannada NewsKarnataka NewsLatest

ಬೆಳ್ಳಿ ರಥೋತ್ಸವದ ಭವ್ಯ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತಸ್ತೋಮ

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಇಲ್ಲಿಗೆ ಸಮೀಪದ ನಿಡಸೋಸಿಯ ದುರದುಂಡೀಶ್ವರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಸಾಯಂಕಾಲ ಬೆಳ್ಳಿ ರಥದ ಭವ್ಯ ಮೆರವಣಿಗೆ ಸಂದರ್ಭದಲ್ಲಿ ವಾದ್ಯಮೇಳಗಳ ಸಂಭ್ರಮ ಭಕ್ತರ ಉತ್ಸಾಹ ಆ ಶಿವನೇ ಧರೆಗಿಳಿದಂತಹ ವಾತಾವರಣ ನಿರ್ಮಾಣ ಮಾಡಿತ್ತು.
 ರಜತ ಮಹೋತ್ಸವದ ಸಂದರ್ಭದಲ್ಲಿ ಶ್ರೀಮಠಕ್ಕೆ ಕಾಣಿಕೆ ರೂಪದಲ್ಲಿ ಬಂದ ಬೆಳ್ಳಿ ಒಟ್ಟುಗೂಡಿಸಿ ಭಕ್ತರ ಆಶಯದಂತೆ ಬೆಳ್ಳಿ ರಥವೊಂದನ್ನು ನಿರ್ಮಿಸಲಾಗಿದ್ದು, ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳಿಂದ ಶ್ರೀಮಠದ ರಥೋತ್ಸವಕ್ಕೆ ಚಾಲನೆ ದೊರೆಯಿತು.
ರಥದಲ್ಲಿ ಶ್ರೀ ದುರದುಂಡೀಶ್ವರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ವಾದ್ಯಮೇಳಗಳ ತಂಡ ರಥೋತ್ಸವಕ್ಕೆ ವಿಶೇಷ ಮೆರಗು ತಂದುಕೊಟ್ಟಿತು. ಮಹಾದ್ವಾರದಿಂದ ಮೆರವಣಿಗೆ ಮೂಲಕ ಆಗಮಿಸಿದ ರಥಕ್ಕೆ ದಾರಿಯುದ್ದಕ್ಕೂ ರಂಗೋಲಿ ಬಿಡಿಸಿ, ತಳೀರು ತೋರಣ ಕಟ್ಟಿ, ದಾರಿಯುದ್ದಕ್ಕೂ ಬಿಂದಿಗೆಯ ಮೂಲಕ ನೀರೆರೆದು ಭಕ್ತಿಪೂರ್ವಕ ನಮನ ಸಲ್ಲಿಸಿದರು.
ರಥೋತ್ಸವಕ್ಕೆ ಕಲಾತಂಡಗಳ ಮೆರಗು:
ನಂತರ ರಾತ್ರಿಯಾಗುತ್ತಿದ್ದಂತೆ ಬಾನಂಗಳದಲ್ಲಿ ಸಿಡಿಮದ್ದುಗಳ ಬಣ್ಣ-ಬಣ್ಣದ ಚಿತ್ತಾರ ರಥೋತ್ಸವದ ಆಕರ್ಷಣೆ ಕೇಂದ್ರ ಬಿಂಧುವಾಗಿತ್ತು. ನಂತರ ಗ್ರಾಮದ ಹಿರೇಮಠಕ್ಕೆ ರಥಕ್ಕೆ ಹಿರೇಮಠ ಮನೆತನದವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಲಕ್ಷ್ಮೀ ಓಣಿ, ಕುರುಬರ ಓಣಿ, ವಾಡೇದ ಓಣಿ, ಮಠದ ಓಣಿ ಮಾರ್ಗವಾಗಿ ಹನುಮಾನ ಗಲ್ಲಿ, ಬೋರಗಲ್ಲ ರೋಡವರೆಗೂ ಸಂಚರಿಸಿತು.
ಈ ಸಂದರ್ಭದಲ್ಲಿ ಬಮ್ಮನಳ್ಳಿಯ ಶಿವಯೋಗಿ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಹಾರನಹಳ್ಳಿಯ ಚೇತನ ದೇವರು, ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಸುರೇಶ ಬೆಲ್ಲದ, ಜಗದೀಶ ಕವಟಗಿಮಠ, ಸುನೀಲ ಪರ್ವತರಾವ, ಪವನ ಪಾಟೀಲ, ಶಿವಾನಂದ ಗಂಡ್ರೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಥೋತ್ಸವದ ನಿಮಿತ್ತ ಪಿಎಸ್‌ಐ ಗಣಪತಿ ಕೊಗನೊಳ್ಳಿ ಬೀಗಿ ಭದ್ರತೆ ಒದಗಿಸಿದ್ದರು. ರಥೋತ್ಸವದದಲ್ಲಿ ಗ್ರಾಮದ ಹಿರಿಯರು ಸೇರಿದಂತೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸೆಲ್ಪಿಗಾಗಿ ಮುಗಿಬಿದ್ದ ಅಭಿಮಾನಿಗಳು:
ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಕಂಡ ಅಭಿಮಾನಿಗಳು ಒಬ್ಬರಾದ ಮೇಲೊಬ್ಬರಂತೆ ಸೆಲ್ಪಿ ಕ್ಲಿಕ ಮಾಡಿಕೊಳ್ಳುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು. ಇದರಿಂದಾಗಿ ಒಂದು ಕಡೆ ರಥೋತ್ಸವದ ಜನ ಸಾಗುತ್ತಿದ್ದರೆ ಇತ್ತ ಮಾಜಿ ಸಂಸದರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ನೂರಾರು ಯುವಕರು ಮುಗಿಬ್ಬಿದ್ದಿದ್ದರು.

ಇಂದು ಮಹಾಪ್ರಸಾದ ಮಹೋತ್ಸವ

ಮಾ. ೧೨ರಂದು ಮ.೧೨ ಗಂಟೆಗೆ ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಮಹಾಪ್ರಸಾದ ಪೂಜಾ ಸಮಾರಂಭವ ಪೀಠಾಧಿಪತಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button