Latest

ಕುಡಿಯುವ ನೀರಿನ ಹೊಸ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಚಿವರ ಸೂಚನೆ

ಕುಡಿಯುವ ನೀರಿನ ಹೊಸ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಚಿವರ ಸೂಚನೆ

ಪ್ರಗತಿವಾಹಿನಿ ಸುದ್ದಿ – ಹಾಸನ : ಜಿಲ್ಲೆಯಲ್ಲಿ 86 ಕೋಟಿ ರೂಪಾಯಿಗಳ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಯಾವುದೇ ಗ್ರಾಮವೂ ನೀರಿನ ಬವಣೆ ಎದುರಿಸದಂತೆ ನಿಗಾವಹಿಸಿ ಕ್ರಿಯಾ ಯೋಜನೆ ಸಿದ್ದಪಡಿಸಲು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಸಾಕಷ್ಟು ನದಿಗಳು, ಹಳ್ಳಗಳು ಹರಿಯುತ್ತವೆ, ಮಲೆನಾಡಿನಲ್ಲ್ಲಿ ನೀರೂ ಸಿಗುತ್ತಿದ್ದು ಅವುಗಳೆಲ್ಲದರ ಸದ್ಬಳಕೆಯಾಗಬೇಕು ಹಾಗೂ ಪ್ರತಿ ಹಳ್ಳಿಗಳಿಗೂ ನಲ್ಲಿ ನೀರು ಪೂರೈಕೆಯಾಗಬೇಕು ಜಲಧಾರೆ ಯೋಜನೆಯೂ ವ್ಯಾಪಕವಾಗಿ ಅನುಷ್ಠಾನವಾಗಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಆನಂದ್ ಅವರು ಮಾತನಾಡಿ ಈ ಹಿಂದೆ 164 ಕೋಟಿ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ 119 ಕೋಟಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸದ್ಬಳಕೆಯಾಗಿದೆ. ಉಳಿದ 35 ಕೋಟಿ ರೂಪಾಯಿಯಲ್ಲಿ ವಿದ್ಯುಚ್ಚಕ್ತಿ ಬಿಲ್‍ಗೆ 16 ಕೋಟಿ ಹಾಗೂ ಮುಂದುವರೆದ ಕಾಮಗಾರಿಗಳಿಗೆ 7 ಕೋಟಿ ರೂಪಾಯಿ ಪಾವತಿಸಬೇಕಾಗಿದ್ದು 12 ಕೋಟಿ ರೂ.ಗೆ ಹೊಸ ಕೆಲಸಗಳು ಲಭ್ಯವಿದೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಆಲೂರು- ಸಕಲೇಶಪುರ ಕ್ಷೇತ್ರದ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಅವರು ವಿದ್ಯುತ್ ಬಿಲ್‍ಗೆ ಶೇ.50 ರಷ್ಟು ಪಾವತಿಸಿ ಉಳಿದ ಹಣವನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಬೇಕು ಇದರಿಂದ ಒಟ್ಟಾರೆ 20 Pಕೋಟಿಟಿ ರೂ ಹೊಸ ಯೋಜನೆಗೆ ಲಭ್ಯವಾಗಲಿದೆ ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ ಲಭ್ಯ ಹಣಕ್ಕೆ ಪೂರಕವಾಗಿ ರೂಪಿಸಿದ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು. ಅಲ್ಲದೇ ಈ ಹಿಂದೆ ತೀವ್ರ ಬರ ಹಿನ್ನೆಲೆಯಲ್ಲಿ ತಮ್ಮ ಕೋರಿಕೆ ಮೇರೆಗೆ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಸಂಚಾರಿ 35 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಕ್ರಿಯಾ ಯೋಜನೆ ತಯಾರಿಸಿದ್ದರು. ಅವೆಲ್ಲವೂ ಸೇರಿದಂತೆ 86 ಕೋಟಿ ರೂಗಳ  ಕ್ರಿಯಾ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಇದೇ ವೇಳೆ ಆಲೂರು ತಾಲ್ಲೂಕಿಗೆ ಗೊರೂರು ಮತ್ತು ಯಗಚಿ ಕೋಶಗಳಿಂದ ನೀರು ಪೂರೈಸುವ ಯೋಜನೆ ರೂಪಿಸುವಂತೆ ಸಚಿವರು ಹೇಳಿದರು.

ಕೃಷಿ ತೊಟಗಾರಿಕೆ, ರೇಷ್ಮೆ, ಸಣ್ಣ ನೀರಾವರಿ, ಅರಣ್ಯ, ಪಶುಪಾಲನೆ ಇಲಾಖೆ ಹಾಗೂ ಹಾಸನ ಹಾಲು ಒಕ್ಕೂಟ ಮೂಲಕ ಜಿಲ್ಲೆಯಲ್ಲಿ ಸಾಧ್ಯವಿರುವ ಕಡೆಗಳಲ್ಲಿ ದನ ಕರುಗಳಿಗೆ ಮೇವು ಬೆಳೆಯುವಂತೆ ಹಾಗೂ ಮೆಕ್ಕೆ ಜೋಳ ಖರೀದಿಗೆ ಅಗತ್ಯ ಕ್ರಮವಹಿಸುವಂತೆ ಸಚಿವ ರೇವಣ್ಣ ತಿಳಿಸಿದರು.

ಹೇಮಾವತಿ ಜಲಾಶಯದ ಹಿನ್ನಾರು ಹಾಗೂ ಇತರ ಜಲಾಶಯ, ಕೆರೆಗಳ ಭಾಗದಲ್ಲಿ ಬೀಜದ ವಿತರಣಾ ಕಿಟ್‍ಗಳನ್ನು ಬಳಸಿ ಮೇವು ಬೆಳೆಯಲು ಅವರು ನಿರ್ದೇಶನ ನೀಡಿದರು.

ಸಕಲೇಶಪುರ ಕ್ಷೇತ್ರದ ಶಾಸಕರು ಕ್ಷೇತ್ರದ ನೀರಾವರಿ ಸಮಸ್ಯೆ ಹಾಗೂ ಅತಿವೃಷ್ಟಿಬಾಧಿತ ಹಿಜ್ಜನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರು ತಮ್ಮ ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಜಿಲ್ಲಾ ಪಂಚಾಯಿತಿಯ ಪ್ರಭಾರ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ.ಎಲ್. ವೈಶಾಲಿ, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.////

Web Title : Minister instructs to submit proposals for new drinking water projects

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button