*ಬೆಳಗಾವಿಯಲ್ಲಿ ಮತ್ತೊಂದು ವೈಭವಯುತ ಹೊಟೆಲ್ ಆರಂಭ* *ವುಡ್ ರೋಸ್ ಹೊಟೆಲ್ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅತ್ಯಂತ ಅಹ್ಲಾದಕರ ವಾತಾವರಣ ಹೊಂದಿರುವ ಬೆಳಗಾವಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ಪ್ರದೇಶ. ಇಲ್ಲಿನ ಪ್ರವಾಸೋದ್ಯಮ ಬೆಳೆಯಲು ಸುಸಜ್ಜಿತ ಹೊಟೆಲ್ ಗಳು ಪೂರಕ ವಾತಾವರಣ ಸೃಷ್ಟಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿ ಎರಡನೇ ರಾಜಧಾನಿ ಎನ್ನುವ ರೀತಿಯಲ್ಲಿ ಬೆಂಗಳೂರಿನ ಮಾದರಿಯಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಹಿರಿಯ ಐಎಫ್ಎಸ್ ಅಧಿಕಾರಿ ಗಿರೀಶ್ ಹೊಸೂರ್ ಅವರ ಪುತ್ರ ಡಾ.ಋತ್ವಿಕ್ ಹೊಸೂರ್ ಒಡೆತನದಲ್ಲಿ ಆರಂಭವಾಗಿರುವ ವುಡ್ ರೋಸ್ ಬ್ಯಾಂಕ್ವೆಟ್ಸ್ ಮತ್ತು ಹೊಟೆಲ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನೂತನ ಉದ್ಯಮ ಆರಂಭಿಸುತ್ತಿರುವ ಗಿರೀಶ್ ಹೊಸೂರ್ ಕುಟುಂಬಕ್ಕೆ ಶುಭ ಕೋರುತ್ತೇನೆ. ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಇಲ್ಲಿನ ವಾತಾವರಣ ಮತ್ತು ಸಂಪರ್ಕ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಕೂಡ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುವ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ಬೆಳೆಯುತ್ತಿದೆ ಎಂದು ಸಚಿವರು ತಿಳಿಸಿದರು.
ಸರಕಾರ ಒಂದು ಕಡೆ ಬೆಳಗಾವಿ ಭಾಗದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡುತ್ತಿದ್ದರೆ, ಖಾಸಗಿ ಸಂಸ್ಥೆಗಳು, ಉದ್ಯಮಿಗಳು ಕೂಡ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇಂತಹ ಹೊಟೆಲ್ ಗಳಿಂದ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗಿ, ಉದ್ಯೋಗಾವಕಾಶ ಸೃಷ್ಟಿ, ಆರ್ಥಿಕ ಬೆಳವಣಿಗೆ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದ ಅವರು, ಈ ಉದ್ಯಮ ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಏಕಸ್ ಏರೋಸ್ಪೆಸ್, ಕೆಎಲ್ಇ ಸಂಸ್ಥೆಗಳಿಂದಾಗಿ ಬೆಳಗಾವಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ವಾತಾವರಣ ಉತ್ತಮವಾಗಿದ್ದು, ಜನರು ಕೂಡ ಬಹಳ ಸುಸಂಸ್ಕೃತರು. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಇಲ್ಲಿ ಅವಕಾಶವಿದೆ ಎಂದರು.

ಗಿರೀಶ್ ಹೊಸೂರ್ ಅವರು ಊರಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಮಹದಾಯಿ ಕೊಳ್ಳವನ್ನು ಅಭಯಾರಣ್ಯ ವ್ಯಾಪ್ತಿಯಿಂದ ಹೊರತಂದು ಕಳಸಾ ಬಂಡೂರಿ ಯೋಜನೆಯಾಗುವುದಕ್ಕೆ ಅವಕಾಶ ಮಾಡಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಅಧಿಕಾರಿಯಾಗಿ ರಾಜ್ಯಕ್ಕೆ ಮತ್ತು ಈ ಪ್ರದೇಶಕ್ಕೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅತ್ಯಂತ ಕ್ರಿಯಾಶೀಲ ಸಚಿವೆಯಾಗಿದ್ದು, ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಡಾ.ಪ್ರಭಾಕರ ಕೋರೆ ಅವರು ಬೆಳಗಾವಿಗಿಂತ ಹುಬ್ಬಳ್ಳಿಯಲ್ಲಿ ದೊಡ್ಡ ಮೆಡಿಕಲ್ ಕಾಲೇಜು ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ಒಟ್ಟಾಗಿ ಕೆಲಸ ಮಾಡುವಲ್ಲಿ ವಿಫಲ – ಕೋರೆ
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಶೆಯ ಕಾರ್ಯಾಧ್ಯಕ್ಷ, ಮಾಜಿ ಸಂಸದ ಡಾ.ಪ್ರಭಾಕರ ಕೋರೆ ಮಾತನಾಡಿ, ವಯಕ್ತಿಕ ನೆಲೆಯಲ್ಲಿ ಬೆಳಗಾವಿಯ ರಾಜಕಾರಣಿಗಳು ಪ್ರಬಲವಾಗಿದ್ದರೂ ಒಟ್ಟಾಗಿ ಕೆಲಸ ಮಾಡುವಲ್ಲಿ ಸೋತಿದ್ದೇವೆ. ಇದರಿಂದಾಗಿ ಈ ಜಿಲ್ಲೆಯ ಈವರೆಗೂ ಮುಖ್ಯಮಂತ್ರಿ ಸ್ಥಾನ ದಕ್ಕಿಲ್ಲ. ಮಾಹಿತಿ ತಂತ್ರಜ್ಞಾನ ಕೇಂದ್ರಗಳನ್ನು ತರಲು ಸಾಧ್ಯವಾಗಿಲ್ಲ. 28 ಸಕ್ಕರೆ ಕಾರ್ಖಾನೆಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜಿಲ್ಲೆ ಬೆಳವಣಿಗೆ ಕಂಡಿಲ್ಲ ಎಂದು ವಿಷಾದಿಸಿದರು.
ಆರೋಗ್ಯ ಪ್ರವಾಸೋದ್ಯಮ ಮತ್ತು ಕೃಷಿ ಪ್ರವಾಸೋದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ವಾತಾವರಣವಿದೆ ಎಂದ ಅವರು, ಗಿರೀಶ್ ಹೊಸೂರ್ ಅವರು ಉತ್ತಮ ಅಧಿಕಾರಿಯಾಗಿದ್ದು, ಸ್ನೇಹಪರ ಮನೋಭಾವ ಹೊಂದಿದ್ದಾರೆ. ರಾಜಕಾರಣಿಯಾಗಲು ಬೇಕಾದ ಎಲ್ಲ ಸ್ವಭಾವವನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲೂ ಅವರು ಕಾಣಿಸಲಿದ್ದಾರೆ ಎಂದು ಕೊರೆ ಹೇಳಿದರು.

ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಮಾತನಾಡಿ, ಗಿರೀಶ್ ಹೊಸೂರ್ ಅವರು ಅಧಿಕಾರಿಯಾಗಿ ಬೆಳಗಾವಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಜನಸೇವೆಗಾಗಿ ಬದುಕನ್ನು ತೊಡಗಿಸಿಕೊಂಡಿದ್ದಾರೆ ಎಂದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸರಕಾರದ ಹೆಚ್ಚಿನ ಕಟೇರಿಗಳು ಆರಂಭವಾಗಿ ಬೆಳಗಾವಿ ಇನ್ನಷ್ಟು ಬೆಳೆಯಲಿ ಎಂದು ಅವರು ಹಾರೈಸಿದರು.
ನಾಗನೂರು ರುದ್ರಾಕ್ಷಿ ಮಠದ ಶ್ರೀ ಡಾ.ಅಲ್ಲಮ ಪ್ರಭು ಮಹಾಸ್ವಾಮಿಗಳು, ಶಾಸಕರಾದ ವಿಠ್ಠಲ ಹಲಗೇಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಜಗದೀಶ್ ಮೆಟಗುಡ್, ವಿಶ್ವನಾಥ್ ಪಾಟೀಲ, ಫಿರೋಜ್ ಸೇಠ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ್, ಯುವ ಕಾಂಗ್ರೆಸ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಧಾರವಾಡ ಕೃಷಿ ವಿದ್ಯಾಲಯದ ವಿಸಿ ಡಾ.ಪಿ.ಎಲ್.ಪಾಟೀಲ್, ಡಾ.ಎಂ.ವಿ. ಜಾಲಿ, ಎಂ.ಬಿ.ಜಿರಲಿ, ರಾಜೇಂದ್ರ ಹರಕುಣಿ, ಪ್ರಭಾಕರ ನಾಗರಮುನೋಳಿ, ಸತೀಶ್ ಕುಲಕರ್ಣಿ, ಆನಂದ ಹಾವನೂರ್, ಗಿರೀಶ್ ಹೊಸೂರ್, ಅನುಪಮಾ ಹೊಸೂರ್ ಸೇರಿದಂತೆ ಹೊಸೂರ್ ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.