*ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ನೂತನ ಅಲ್ಪಸಂಖ್ಯಾತರ ಸಮುದಾಯ ಭವನ (ಕಮ್ಯೂನಿಟಿ ಹಾಲ್) ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡಿದ ಸಚಿವರು, ಎಲ್ಲಾ ಸಮಾಜದವರ ಸೇವೆ ಮಾಡುವ ಅವಕಾಶ ನನಗೆ ಲಭಿಸಿದೆ. ಅಚ್ಚುಕಟ್ಟಾದ ಭವನ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.
ನಾನು ಈ ಹಿಂದೆ ಶಾಸಕಿಯಾಗಿ ನಿಮ್ಮ ಸೇವೆ ಮಾಡುತ್ತಿದ್ದೆ. ಆವಾಗ ನಿಮಗೆ ತುಂಬಾ ಸಮಯ ಕೊಡುತ್ತಿದ್ದೆ. ಈಗ ನಿಮ್ಮೆಲ್ಲರ ಆಶೀರ್ವಾದದಿಂದ ಮಂತ್ರಿಯಾಗಿರುವೆ, ರಾಜ್ಯದ ಏಕೈಕ ಮಹಿಳಾ ಮಂತ್ರಿ ಆಗಿರುವೆ. ನೂರೊಂದು ಕೆಲಸದ ಒತ್ತಡದ ನಡುವೆಯೂ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿರುವೆ ಎಂದು ಸಚಿವರು ಹೇಳಿದರು.
ಸುಮಾರು 1.50 ಕೋಟಿ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಸುಸಜ್ಜಿತ ಕಟ್ಟಡ ಭವಿಷ್ಯದಲ್ಲಿ ಸಭೆ-ಸಮಾರಂಭಗಳಿಗೆ ಮತ್ತು ಬಡ ಕುಟುಂಬಗಳ ಶುಭ ಕಾರ್ಯಕ್ರಮಗಳಿಗೆ ಲಭ್ಯವಾಗಲಿದ್ದು, ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಈ ವೇಳೆ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಹೊನಗೌಡ ಪಾಟೀಲ, ನಜೀರ್ ಅಹ್ಮದ್ ಜಮಾದಾರ, ಮುಸ್ತಾಕ್ ಸನದಿ, ನೂರ ಅಹ್ಮದ್ ಮುಲ್ಲಾ, ಸಿಖಂದರ್ ಅಗಸಿಮನಿ, ಮೊಹಮ್ಮದ ಯೂಸುಫ್ ಜಮಾದಾರ್, ಅಯ್ಜಾಜ್ ಪಠಾಣ್, ಕುತುಬುದ್ದಿನ ಮೊಮಿನ್, ಇಮ್ರಾನ್ ಮುಲ್ಲಾ, ಬಾಪುಸಾಬ್ ಸನದಿ, ಶಾನೂಲ್ ಮನಿಯಾರ್, ಮೆಹಬೂಬ್ ಅಲಾವಾಡ್, ಶೌಕತ್ ಯಾದವಾಡ್, ಮುಸ್ತಾಕ್ ಮನಿಯಾರ್ ಕಾಂಗ್ರೆಸ್ ಮುಖಂಡರಾದ ಅಪ್ಸರ್ ಜಮಾದಾರ್, ಶರೀಫ್ ಸನದಿ, ಜಮೀಲ್ ಖಾಜಿ ಮುಂತಾದವರು ಉಪಸ್ಥಿತರಿದ್ದರು.




