Belagavi NewsBelgaum NewsKannada NewsKarnataka NewsLatestPolitics

*ಫೈನಾನ್ಸ್ ನವರನ್ನು ಬಗ್ಗಿಸಿ ಕುಟುಂಬ ಮನೆಗೆ ವಾಪಸ್ ಸೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್* : *ರಾಜ್ಯದಲ್ಲೇ ಮೊದಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮೈಕ್ರೋ ಫೈನಾನ್ಸ್ ನೀಡುತ್ತಿರುವ ಕಿರುಕುಳಕ್ಕೆ ಸಿಲುಕಿ ಬಡ ಮಹಿಳೆಯರು ನಲುಗಿ ಹೋಗುತ್ತಿದ್ದಾರೆ. ಹಣ ಕಟ್ಟದ ಕುಟುಂಬಗಳನ್ನು ಮನೆಯಿಂದ ಹೊರಹಾಕಿ ಬೀಗ ಜಡಿಯುವ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಬೆಳಗಾವಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬಾಣಂತಿ ಎನ್ನುವುದನ್ನು ನೋಡದೆ ಅಧಿಕಾರಿಗಳು ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ, ಫೈನಾನ್ಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮೊದಲು ಹೊರಹಾಕಿದ್ದ ಕುಟುಂಬವನ್ನು ಮರಳಿ ಗೂಡು ಸೇರಿಸುವ ಅಪರೂಪದ ಘಟನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರ ಸಾಕ್ಷಿಯಾಗಿದೆ.‌

ಮೈಕ್ರೋ ಫೈನಾನ್ಸ್ ನಿಂದ ಮನೆ ಕಟ್ಟಲು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಲೋಹಾರ್ ಕುಟುಂಬ ಐದು‌‌ ಲಕ್ಷ ಸಾಲ ಪಡೆದುಕೊಂಡಿತ್ತು.‌ ಕುಟುಂಬ ಸದಸ್ಯರ ಅನಾರೋಗ್ಯದ ಹಿನ್ನಲೆಯಲ್ಲಿ ಕೆಲ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಹೆಚ್ಚಿನ ಬಡ್ಡಿ ವಿಧಿಸಿ ಕೂಡಲೇ ಕಟ್ಟುವಂತೆ ತಕರಾರು ಎತ್ತಿದ್ದ ಫೈನಾನ್ಸ್ ಸಿಬ್ಬಂದಿ ಇಡೀ ಕುಟುಂಬವನ್ನು ಮನೆಯಿಂದ ಹೊರಹಾಕಿ ಬಾಗಿಲಿಗೆ ಬೀಗ ಜಡಿದಿದ್ದರು. ವಿಪರ್ಯಾಸವೆಂದರೆ ಹೆರಿಗೆ ನಂತರ ತಾಯಿ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದ ಬಾಣಂತಿಯನ್ನು ಮನೆಯಿಂದ ಆಚೆ ಹಾಕಲಾಗಿತ್ತು. 

ಈವರೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ‌ ಮನೆಯಿಂದ ಆಚೆ ಹೊರಬಿದ್ದ ಕುಟುಂಬಗಳು ವಾಪಸ್ ಮನೆಗೆ ಹೋಗಬೇಕಾದರೆ ಸಂಪೂರ್ಣ ಸಾಲ ಮರುಪಾವತಿಸಿ ಹೋಗಿರುವ ಉದಾಹರಣೆ ಮಧ್ಯೆ, ಓರ್ವ ಸಚಿವರೊಬ್ಬರು ಫೈನಾನ್ಸ್ ನವರನ್ನು ಬಗ್ಗಿಸಿ ನಿರಾಶ್ರಿತರ ಕುಟುಂಬಕ್ಕೆ ನೆರವಾಗಿದ್ದು ಇದೇ ಮೊದಲು. ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಕೂಡಾ ಅದೆಲ್ಲವನ್ನೂ ಲೆಕ್ಕಿಸದೆ ಕುಟುಂಬದ ಸಹಾಯಕ್ಕೆ ಧಾವಿಸಿದ್ದು ವಿಶೇಷ. 

ಬೇರೆಡೆ ಅಧಿಕಾರಿಗಳು ಕಾನೂನಿನ ಮೂಲಕ ಕ್ರಮ ಕೈಗೊಳ್ಳುತ್ತೇನೆ ಎಂಬುದನ್ನು ಹೇಳುವುದು ಬಿಟ್ಟರೆ ಬೇರೆ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಆದರೆ ರಾಜ್ಯದಲ್ಲಿ ಇದೇ ಮೊದಲಬಾರಿಗೆ ಸಚಿವರೊಬ್ಬರು ಮೈಕ್ರೋ ಫೈನಾನ್ಸ್ ಅವಾಂತರಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಮೊದಲು ಅಮಾಯಕ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಮೊದಲ ಪ್ರಕರಣ ಎಂದರೆ ತಪ್ಪಾಗಲಾರದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button