*ಕ್ಷೇತ್ರದಲ್ಲಿ 151ನೇ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ* *ಬೆಳಗಾವಿ ಅಧಿವೇಶನ ಮುನ್ನಾದಿನ ಸುಳಗಾದಲ್ಲಿ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶಾಸಕರಾಗಿ ಏಳೂವರೆ ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 150 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗುವ ಮುನ್ನಾದಿನ, ಭಾನುವಾರ ಸುಳಗಾ ಗ್ರಾಮದಲ್ಲಿ 151ನೇ ದೇವಸ್ಥಾನದ ಕಾಲಂ ಪೂಜೆ ನೆರವೇರಿಸಿದರು.

ತಲಾ 25 ಲಕ್ಷ ರೂ.ಗಳಿಂದ ಆರಂಭವಾಗಿ 5 ಕೋಟಿ ರೂ.ವರೆಗಿನ ಅನುದಾನ ನೀಡುವ ಮೂಲಕ, 114 ಗ್ರಾಮಗಳನ್ನೊಳಗೊಂಡಿರುವ ಕ್ಷೇತ್ರದ ವಿವಿಧೆಡೆ 150 ನೂತನ ದೇವಸ್ಥಾನ ನಿರ್ಮಾಣ ಇಲ್ಲವೇ, ಜೀರ್ಣೋದ್ಧಾರ ಕಾರ್ಯವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 151ನೇ ದೇವಸ್ಥಾನಕ್ಕೆ ಇಲ್ಲಿ ಪೂಜೆ ನೆರವೇರಿಸಿದ್ದೇನೆ. ಇದು ನಾನು ಮಾಡಿದ್ದಲ್ಲ, ನೀವು ನನಗೆ ಕೊಟ್ಟಿರುವ ಶಕ್ತಿಯಿಂದಾಗಿ ಸಾಧ್ಯವಾಗಿದೆ. ಕ್ಷೇತ್ರದ ಮನೆ ಮಗಳೆಂದು ನನ್ನನ್ನು ಹರಸಿ, ಹಾರೈಸುತ್ತಿದ್ದೀರಿ. ನಿಮ್ಮ ಬೆಂಬಲ ನನಗೆ ಇಂತಹ ಅಗಾಧ ಶಕ್ತಿ ನೀಡಿದೆ ಎಂದು ಹೇಳಿದರು.
ದೇವಸ್ಥಾನಗಳು ಮನಸ್ಸಿಗೆ ಶಾಂತಿ ನೀಡುತ್ತವೆ, ಶಾಲೆಗಳು ಜ್ಞಾನವನ್ನು ನೀಡುತ್ತವೆ, ಆಸ್ಪತ್ರೆಗಳು ಆರೋಗ್ಯ ಕಾಪಾಡುತ್ತವೆ. ಹಾಗಾಗಿ ಕ್ಷೇತ್ರದಲ್ಲಿ ಶಾಲೆ, ಆಸ್ಪತ್ರೆ ಹಾಗೂ ದೇವಸ್ಥಾನಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಕ್ಷೇತ್ರದ ಜನರು ಯಾವುದೇ ಬೇಡಿಕೆ, ಸಮಸ್ಯೆ ಹೊತ್ತು ತಂದರೂ ಸ್ಪಂದಿಸುತ್ತಿದ್ದೇನೆ. ಚುನಾವಣೆಗೂ ಮುನ್ನ ಮನೆಮಗಳೆಂದು ಹೇಳಿಕೊಂಡಿದ್ದೇನೆ. ಚುನಾವಣೆ ನಂತರ ಮಗಳ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಯಾವುದೇ ರಾಜಕಾರಣ ಮಾಡದೆ, ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿಪಡಿಸಿರುವಂತೆ, ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರ ಅಭಿವೃದ್ಧಿ ಪಡಿಸಿರುವಂತೆ, ಡಿ.ಕೆ.ಶಿವಕುಮಾರ ಕನಕಪುರ ಅಭಿವೃದ್ಧಿಪಡಿಸಿರುವಂತೆ ನಾನು ನನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಶರದ್ ಪವಾರ ಬಾರಾಮತಿ ಅಭಿವೃದ್ದಿಪಡಿಸಿದ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹಿಂದೆ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದವರು ಏನು ಮಾಡಿದ್ದರು ಎಂದು ಕೆದಕಲು ಹೋಗುವುದಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿ ಮಾತ್ರ ನನ್ನ ಗುರಿ. ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲಿ ಅಇನ್ಯಾಯವಾಗಲು ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಬಾಗಣ್ಣ ನರೋಟಿ, ಬಾಳು ದೇಸೂರಕರ್, ಬಾಳಕೃಷ್ಣ ಪಾಟೀಲ, ನಿರ್ಮಲ ಕಲಕಾಂಬ್ಕರ್, ಯಲ್ಲಪ್ಪ ಕಲಕಾಂಬ್ಕರ್, ಲಕ್ಷ್ಮೀ ನಾಯಿಕ್, ವರ್ಷಾ ಸಾವಗಾಂವ್ಕರ್, ಯಲ್ಲಪ್ಪ ಸುಳಗೇಕರ್, ಮಾರುತಿ ಪಾಟೀಲ, ಅಪ್ಪು ಪಾಟೀಲ, ಮಹಾದೇವ್ ಕಣಗಾಂವ್ಕರ್, ಮನೋಜ್ ಕಲಕಾಂಬ್ಕರ್, ಪರಶುರಾಮ ಕದಂ, ಅಜಿತ್ ಕಲಕಾಂಬ್ಕರ್ ಮುಂತಾದವರು ಉಪಸ್ಥಿತರಿದ್ದರು.



