ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸುಲಭವಾಗಿ ಹಾಗೂ ಸರಳವಾಗಿ ಮರಳು ಸಿಗುವಂತೆ ಮಾಡುವ ಉದ್ದೇಶದಿಂದ ಶೀಘ್ರದಲ್ಲೇ ಹೊಸ ‘ ಮರಳು ನೀತಿ’ಯನ್ನು ಜಾರಿ ಮಾಡಲಾಗುವುದೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಡಿ ನಡೆಸಿದ ಅವರು,ಹೊಸ ಮರಳು ನೀತಿ ಜಾರಿ ಮಾಡುವ ಸಂಬಂಧ 2021 ರ ನೂತನ ಮರಳು ಕರಡು ನೀತಿಯನ್ನು ಸಿದ್ದಪಡಿಸಲಾಗಿದೆ. ಅಧಿಕಾರಿಗಳ ಜೊತೆ ಮತ್ತೊಮ್ಮೆ ಚರ್ಚೆ ನಡೆಸಿ ಪ್ರಕಟ ಮಾಡಲಾಗುವುದೆಂದು ಹೇಳಿದರು.
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ , ಮಧ್ಯ ಕರ್ನಾಟಕ ಸೇರಿದಂತೆ ಒಂದೊಂದು ಭಾಗಕ್ಕೆ ಪ್ರತ್ಯೇಕವಾದ ಮರಳು ನೀತಿ ಇದೆ.ಈಗಾಗಲೇ ಒಂದು ಕರಡನ್ನು ತಂದಿದ್ದೇವೆ.ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಈ ನೀತಿ ತರುತ್ತಿದ್ದೇವೆ ಎಂದರು. ಎಲ್ಲರಿಗೂ ಮರಳು ಸುಲಭವಾಗಿ ಸಿಗುವಂತಾಗಬೇಕು.ಹೀಗಾಗಿಯೇ ನಿಯಮಗಳನ್ನ ಸರಳಗೊಳಿಸಿದ್ದೇವೆ.ಹಳ್ಳ, ಉಸುಕು ಮತ್ತು ನಿಕ್ಷೇಪಗಳಲ್ಲಿ ಮರಳನ್ನ ಮಾತ್ರ ತೆಗೆಯಲು ಅವಕಾಶ ಸಿಗಲಿದೆ ಎಂದು ವಿವರಿಸಿದರು.
ಸಣ್ಣ ರೈತರು,ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ.ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಸಿಗುತ್ತಿರಲಿಲ್ಲ.ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು.ಇದನ್ನು ತಪ್ಪಿಸುವುದಕ್ಕಾಗಿ ಉದ್ದೇಶದಿಂದ ಎತ್ತಿನಗಾಡಿ,ಟ್ರ್ಯಾಕ್ಟರ್ ಗಳಲ್ಲಿ ತರಲು ಅವಕಾಶ ನೀಡಲಾಗುವುದೆಂದು ವಿವರಿಸಿದರು.
ಮರಳು ಗಣಿಗಾರಿಕೆಗೆ ಬ್ಲಾಕ್ ಗಳನ್ನು ಗುರುತಿಸಿ ಹರಾಜಿನ ಮೂಲಕ ಗುತ್ತಿಗೆ ನೀಡಿರುವ ಪ್ರದೇಶ ಹೊರತುಪಡಿಸಿ ಹಳ್ಳ, ತೊರೆಗಳಲ್ಲಿ ಸ್ವಂತ ಬಳಕೆಗೆ ದ್ವಿಚಕ್ರ ವಾಹನ, ಕತ್ತೆ, ಬಂಡಿ ಟ್ರ್ಯಾಕ್ಟರ್ ಗಳಲ್ಲಿ ಕೊಂಡೊಯ್ಯುವ ಬಡವರು, ರೈತರಿಗೆ ಪರವಾನಗಿ, ರಾಯಲ್ಟಿಯಿಂದ ವಿನಾಯಿತಿ ನೀಡಲಾಗುವುದು. ಆದರೆ, ಇದನ್ನೇ ಸಂಗ್ರಹಿಸಿ ಲಾರಿ, ಟಿಪ್ಪರ್ ಗಳಲ್ಲಿ ಬೇರೆಡೆ ಸಾಗಣೆ, ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದಲ್ಲಿ ಎಲ್ಲದಕ್ಕೂ ಎಫ್ ಐಆರ್ ಹಾಕುತ್ತಿದ್ದರು.ಗಾಡಿ,ಬೈಕ್,ಕತ್ತೆಗಳಲ್ಲಿ ಸಾಗಿಸಿದರೂ ಎಫ್ ಐಆರ್ ಹಾಕಿರುವ ನಿದರ್ಶನಗಳಿವೆ. ಆದರೆ ಇಲ್ಲಿ ಅಂತವುಗಳಿಗೆ ಅವಕಾಶ ನೀಡಬಾರದೆಂಬ ಚಿಂತನೆ ಇದೆ.ಈಗ ಸುಲಭವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೆವೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ ಮೂರು ಸಮಿತಿಗಳನ್ನು ರಚಿಸಿದ್ದೇವೆ.ಆಂಧ್ರಪ್ರದೇಶಕ್ಕೆ ಒಂದು ಸಮಿತಿಯು ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಲಿದೆ.ನಂತರ ಅಲ್ಲಿನ ನೀತಿಯ ಬಗ್ಗೆ ವರದಿ ನೀಡಲಿದೆ ಎಂದರು.
ಈಗಾಗಲೇ ವಿಭಾಗವಾರು ಸಮಿತಿ ರಚನೆಯಾಗಿದೆ.ಮೂರು ಸಮಿತಿ ರಚನೆ ಮಾಡಿದ್ದೇವೆ.ಸುಲಭವಾಗಿ ಎಲ್ಲರಿಗೂ ಮರಳುಸಿಗಬೇಕು.ನೈಸರ್ಗಿಕವಾಗಿಯೂ ಅಪಾಯ ಆಗಬಾರದು.ತಾಂತ್ರಿಕವಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ನಿಯಮವನ್ನು ಆಳವಡಿಸಲಾಗುವುದೆಂದು ನಿರಾಣಿ ಅವರು ತಿಳಿಸಿದರು.
ವೈಜ್ಙಾನಿಕವಾಗಿ ಮರಳು ತೆಗೆಯುವ ಬಗ್ಗೆ ನೀತಿಯಲ್ಲಿರಲಿದೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗಣಿ ನೀತಿಗಳನ್ನು ಸರಳೀಕರಣ ಗೊಳಿಸುತ್ತೇವೆ.ಇಲಾಖೆಯಿಂದ ಪ್ರಸ್ತುತ 3700 ಕೋಟಿ ರಾಜಸ್ವ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿತ್ತು. ಆದಾಯ ಮತ್ತಷ್ಟು ಹೆಚ್ಚಿಸುವ ಬಗ್ಗೆ ನಿರ್ಧರಿಸಿದ್ದೇವೆ. ಸ್ಥಗಿತಗೊಂಡಿರುವ ಗಣಿಗಳನ್ನು ಪುನರರಾಂಭ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ