Latest

ಗೋಕಾಕ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಹೊಸತಿರುವು

ಖಾಸಗಿ ವೈದ್ಯನ ವಿರುದ್ಧ ತನಿಖೆಗೆ ಸಚಿವ ರಮೇಶ ಜಾರಕಿಹೊಳಿ

ಸೂಚನೆ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ:  ಇಲ್ಲಿ ನಡೆದಿದೆ ಎನ್ನಲಾದ  ಖಾಸಗಿ ವೈದ್ಯರ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವೈದ್ಯರನ್ನು ಯಾರೂ ಬ್ಲ್ಯಾಕ್ ಮೇಲೆ ಮಾಡಿಲ್ಲ. ವೈದ್ಯರೇ ಮೃತ ರೋಗಿಗೆ 2 ಲಕ್ಷ ರೂ. ಬಿಲ್ ಮಾಡಿ ಹಿಂಸೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಖಾಸಗಿ ವೈದ್ಯ ಡಾ. ಹೊಸಮನಿ ೨೫ ಜನರ ಯೂನಿಯನ್ ಮಾಡಿಕೊಂಡು ರೋಗಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದು ಇಂತವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು, ರವಿವಾರ ನಗರದಲ್ಲಿ ಜರುಗಿದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ನಗರದಲ್ಲಿ ಖಾಸಗಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಹೀಗಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದು, ಸಾವನ್ನಪ್ಪಿರುವ ರೋಗಿಗಳ ಸಂಬಂಧಿಕರು ಸಾಕಷ್ಟು ಬಾರಿ ನನ್ನ ಗಮನಕ್ಕೆ ತಂದಿದ್ದಾರೆ. ಹೀಗಾಗಿ ತಕ್ಷಣ ಅಂತವರ ಮೇಲೆ ಕ್ರಮಕೈಗೊಳ್ಳಬೇಕೆಂದರು.
ಇತ್ತೀಚೆಗೆ ನಗರದ ನವಜೀವನ ಆಸ್ಪತ್ರೆಯಲ್ಲಿ ನಡೆದ ಉಪ್ಪಾರಹಟ್ಟಿ ಗ್ರಾಮದ ರಾಮಚಂದ್ರ ಹರಿಜನ ಎಂಬ ವ್ಯಕ್ತಿ ಡಾ.ಹೊಸಮನಿ ಅವರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದು, ಈ ರೋಗಿಯ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಮೃತ ಪಟ್ಟ ರೋಗಿಗೆ ೨ಲಕ್ಷ ರೂಪಾಯಿ ಬಿಲ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಡಾ. ಹೊಸಮನಿ ಸುಳ್ಳು ದೂರು ನೀಡಿದ್ದಾರೆ ಎಂದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ಅಲ್ಲಿ ಇರಲಿಲ್ಲ. ಮೃತ ರೋಗಿಯೂ ಉಪ್ಪಾರಹಟ್ಟಿ ಗ್ರಾಮದವನಾಗಿದ್ದರಿಂದ ಹನಮಂತ ದುರ್ಗನ್ನವರಗೆ ಪದೆ ಪದೆ ಮೃತ ರಾಮಚಂದ್ರ ಸಂಬಂಧಿಕರು ಪೋನ್ ಮುಖಾಂತರ ಸಂಪರ್ಕಿಸಿ, ನಮ್ಮ ತಂದೆಯನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲು ಡಾ.ಹೊಸಮನಿ ಹೇಳುತ್ತಿರುವುದಾಗಿ ಕರೆ ಮಾಡಿದ ಹಿನ್ನೆಲೆಯಲ್ಲಿ ಹನಮಂತ ದುರ್ಗನ್ನವರ ಆಸ್ಪತ್ರೆಯ ಬಳಿ ಹೋದರು. ಭರಮಣ್ಣವರ ಹೆಸರನಲ್ಲಿ ದೂರು ನೀಡಿರುವುದು ಸುಳ್ಳು. ಇದು ರಾಜಕೀಯ ಒತ್ತಡದಿಂದ ಡಾ. ಹೊಸಮನಿ ದೂರು ನೀಡಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಿದರು.
ಕೋವಿಡ್ ನಂತಹ ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರು ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನಗರದ ಖಾಸಗಿ ವೈದ್ಯರ ಅಸೋಸಿಯೇಷನ್ ಗೆ ಸಚಿವರು ಮನವಿ ಮಾಡಿದರು.

ಬಿಜೆಪಿ ನಗರಾಧ್ಯಕ್ಷ ಭೀಮಶಿ ಬರಮಣ್ಣವರ್ ಮತ್ತು ಹನುಮಂತ ದುರ್ಗಣ್ಣವರ್ ಸೇರಿ 2 ಲಕ್ಷ ರೂ. ನೀಡುವಂತೆ ವೈದ್ಯರಿಗೆ ಬ್ಲ್ಯಾಕ್ ಮೇಲೆ ಮಾಡಿದ್ದಾರೆ. ಕೊಡದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ದೂರು ದಾಖಲಾಗಿತ್ತು.

ಈ ಸಂಬಂಧ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಬ್ಲ್ಯಾಕ್ ಮಾಡಿದ ಆರೋಪ ಹೊತ್ತಿರುವ ಭೀಮಶಿ ಬರಮಣ್ಣವರ್ ಪ್ರಭಾವಿ ವ್ಯಕ್ತಿಯಾಗಿದ್ದು, ಪೊಲೀಸರು ಅವರನ್ನು ಬಂಧಿಸಲು ಸಾಧ್ಯವಿಲ್ಲ. ಅಮಿತ್ ಶಾ ನನ್ನು ಬೇಕಾದರೂ ಬಂಧಿಸಬಹುದು, ಆದರೆ ಭೀಮಶಿ ಬರಮಣ್ಣವರ್ ಅವರನ್ನು ಬಂಧಿಸಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.

ಇದೀಗ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಯಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button