ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಕಾರ್ಮಿಕ ಇಲಾಖೆಯಿಂದ ಮಂಗಳವಾರ ಇಲ್ಲಿನ ವಿದ್ಯಾ ಸಂವರ್ಧಕ ಮಂಡಳದ ಶೈಕ್ಷಣಿಕ ಸಂಸ್ಥೆಯ ಮೈದಾನದಲ್ಲಿ ಸ್ಥಳೀಯ ವಿವಿಧ ವರ್ಗದ ಕಾರ್ಮಿಕರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಆಹಾರದ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಇತರರ ಮನೆಗೆ ಹೋಗಿ ಪಾತ್ರೆ, ಬಟ್ಟೆ ತೊಳೆದು ತಮ್ಮ ಜೀವನ ಸಾಗಿಸುವ ಬಡ ಮಹಿಳೆಯರು, ಗ್ರಾಮೀಣ ಭಾಗದ ಕ್ಷೌರಿಕ ಹಾಗೂ ಪರಿಟ ಸಮಾಜದ ೮೪೧ ಕಾರ್ಮಿಕರಿಗೆ ಇಲಾಖೆಯ ಡಾ. ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿಯಲ್ಲಿ ಆಹಾರದ ಕಿಟ್ ವಿತರಿಸಲಾಗುತ್ತಿದೆ. ನಗರಸಭೆ ಸದಸ್ಯರು, ಕಾರ್ಯಕರ್ತರು ಬಹಳ ಪರಿಶ್ರಮದೊಂದಿಗೆ ತಮ್ಮತಮ್ಮ ವಾರ್ಡ್‌ನಲ್ಲಿಯ ಕಾರ್ಮಿಕರ ನೋಂದಣಿ ಮಾಡಿದ್ದಾರೆ. ನೋದಣಿ ಮಾಡಿಕೊಂಡ ಎಲ್ಲರಿಗೂ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಆದರೆ ಈಗ ತಾಲ್ಲೂಕಿನಲ್ಲಿ ಬುಧವಾರದಿಂದ ಲಾಕ್‌ಡೌನ್ ಆರಂಭವಾಗುವುದರಿಂದ ಈ ಆಹಾರದ ಕಿಟ್ ವಿತರಿಸಲಾಗುತ್ತಿದೆ ಎಂದ ಅವರು, ಸರಕಾರಗಳ ಯೋಜನೆಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ವಿದ್ಯಾ ಸಂವರ್ಧಕ ಮಂಡಳದ ಚೇರಮನ್ ಚಂದ್ರಕಾಂತ ಕೋಠಿವಾಲೆ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಹಾಲಶುಗರ ವಾಯಿಸ್-ಚೇರಮನ್ ಎಂ.ಪಿ. ಪಾಟೀಲ, ವಿ.ಎಸ್.ಎಂ. ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ತಹಸೀಲ್ದಾರ ಪ್ರಾಕಾಶ ಗಾಯಕವಾಡ, ತಾಲ್ಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ, ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ಸಿಪಿಐ ಸಂತೋಷ ಸತ್ಯನಾಯಿಕ, ಸ್ಥಳೀಯ ನಗರಸಭೆ ಆಯುಕ್ತ ಮಹಾವೀರ ಬೋರನ್ನವರ, ಪ್ರಣವ ಮಾನವಿ, ನಗರಸಭೆ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು. ಎಪಿಎಂಸಿ ಸಂಚಾಲಕ ಬಂಡಾ ಘೋರ್ಪಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ