ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಆನಂದ ಸಿಂಗ್ ರಾಜಿನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಆದರೂ ಅವರ ದಿಢೀರ್ ನಿರ್ಧಾರ ಸಮ್ಮಿಶ್ರ ಸರಕಾರಕ್ಕೆ ಕಂಟಕ ತಂದಿಟ್ಟಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಬೆಳವಣಿಗೆ ಸಮ್ಮಿಶ್ರ ಸರಕಾರಕ್ಕೆ ಶಾಕ್ ನೀಡಿದೆ. ಆನಂದ್ ಸಿಂಗ್ ಅವರ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್‌ನ ಇನ್ನೂ ಏಳು ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಆನಂದ್ ಸಿಂಗ್ ಅವರು ಭಾನುವಾರ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ. ರಮೇಶ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದ ಕಂಪ್ಲಿ ಶಾಸಕ ಗಣೇಶ್, ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಗೊಂದಲ: ಆನಂದ ಸಿಂಗ್ ಅವರು ಈಗಾಗಲೆ ಸ್ಪೀಕರ್ ಭೇಟಿಯಾಗಿ ರಾಜಿನಾಮೆ ನೀಡಿದ್ದಾರೆಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಆದರೆ ತಮಗೆ ಅವರು ರಾಜಿನಾಮೆ ಸಲ್ಲಿಸಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 12 ಗಂಟೆಗೆ ತುರ್ತು ಪತ್ರಿಕಾಗೋಷ್ಠಿ ಕರೆದಿರುವುದು ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ