ಶಾಸಕಿ ಡಾ. ಅಂಜಲಿ ಹೇಮಂತ್ ನಿಂಬಾಳಕರ್ ಅವರು ದಿಢೀರನೆ ಖಾನಾಪುರ ತಹಸಿಲ್ದಾರ್ ಕಛೇರಿಗೆ ಭೇಟಿ ನೀಡಿ ಕಛೇರಿಗೆ ಸರಿಯಾದ ಸಮಯಕ್ಕೆ ಬಾರದ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.
ವಿಶೇಷವಾಗಿ ಕೆ. ವೈ. ಬಿದರಿ, ತಹಶೀಲ್ದಾರ್ ಗ್ರೇಡ್-2 ಇವರು ಮಧ್ಯಾಹ್ನ 12 ಗಂಟೆಯಾದರೂ ಕಛೇರಿಗೆ ಬಾರದಿರುವುದನ್ನು ಗಮನಿಸಿ ಗರಂ ಆದರು. ಕೆ. ವೈ. ಬಿದರಿಯವರು ಸಮಯಕ್ಕೆ ಸರಿಯಾಗಿ ಕಛೇರಿಗೆ ಬರುವುದಿಲ್ಲ, ಕೆಲಸಗಳನ್ನು ನಿಗಧಿತ ಅವಧಿಯೊಳಗೆ ಮಾಡಿಕೊಡುವುದಿಲ್ಲ ಎಂದು ಬಹಳ ದಿನಗಳಿಂದ ಸಾರ್ವಜನಿಕರು ಶಾಸಕರ ಬಳಿ ದೂರು ನೀಡುತ್ತಿದ್ದರು.
ಅಷ್ಟೇ ಅಲ್ಲದೆ ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಯೋಜನೆಗಳಡಿ ಪಿಂಚಣಿಗಾಗಿ ಸಾರ್ವಜನಿಕರು ಶಾಸಕರ ಕಛೇರಿಗೆ ೧೬೦ ಅರ್ಜಿ ಸಲ್ಲಿಸಿದ್ದು ಕಳೆದ ನವೆಂಬರ್-2018 ರಿಂದ ಸೆಪ್ಟೆಂಬರ್-2019 ವರೆಗೆ 160 ಅರ್ಜಿಗಳನ್ನು ತಹಸಿಲ್ದಾರರ ಕಛೇರಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ.
ಆದರೆ ಸೆಪ್ಟೆಂಬರ್-2019 ರ ಅಂತ್ಯದ ವೇಳೆಗೆ ಕೇವಲ 44 ಅರ್ಜಿಗಳಿಗೆ ಕ್ರಮ ಜರುಗಿಸಿ ವರದಿ ನೀಡಿದ್ದಾರೆ. ಈ ಕುರಿತು ಚರ್ಚಿಸಲು ಶಾಸಕರು ಕೆ. ವೈ. ಬಿದರಿಯವರನ್ನು ದಿನಾಂಕ:14/10/2019 ರಂದು ಶಾಸಕರ ಕಚೇರಿಗೆ ಬರುವಂತೆ ಸೂಚಿಸಿದ್ದರೂ ಯಾವುದೇ ಕಾರಣ ನೀಡದೇ ಗೈರಾಗುವ ಮೂಲಕ ಉದ್ಧಟತನ ತೋರಿದ್ದಾರೆ.
ತದನಂತರ ಅರ್ಜಿಗಳ ಮೇಲೆ ಕೈಗೊಂಡ ಕ್ರಮದ ಕುರಿತು ವರದಿ ನೀಡುವಂತೆ ಲಿಖಿತವಾಗಿ ಪತ್ರ ಮುಖೇನ ಕೇಳಿದ ಬಳಿಕ ಕೇವಲ 20 ಅರ್ಜಿಗಳ ಮೇಲೆ ಕ್ರಮ ಜರುಗಿಸಿ ಉಳಿದ ಅರ್ಜಿಗಳು ವಿಚಾರಣೆಗೆ ಬಾಕಿ ಇರುವುದಾಗಿ ಬೇಜವಾಬ್ದಾರಿತನದ ಉತ್ತರ ನೀಡಿದ್ದಾರೆ. ಶಾಸಕರ ಕಛೇರಿಯಿಂದ ಬಂದ ಅರ್ಜಿಗಳ ಮೇಲೆ ಒಂದು ವರ್ಷವಾದರೂ ಕ್ರಮ ಜರುಗಿಸದಿದ್ದರೆ ನೇರವಾಗಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳ ಸ್ಥಿತಿ ದೇವರೇ ಬಲ್ಲ ಎಂದು ಶಾಸಕಿ ಕಳವಳ ವ್ಯಕ್ತ ಪಡಿಸಿದರು.
ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ಪ್ರಮಾಣ ಪತ್ರ
ಅಷ್ಟೇ ಅಲ್ಲದೆ ಕಾಪೋಲಿ ಗ್ರಾಮದ ಓರ್ವ ಹಿಂದೂ ಮರಾಠಾ ಜಾತಿಯ ವಿದ್ಯಾರ್ಥಿಗೆ ಮುಸ್ಲಿಂ ಜಾತಿ, ಪ್ರವರ್ಗ-IIB ಎಂದು ತಪ್ಪಾಗಿ ಪ್ರಮಾಣ ಪತ್ರ ನೀಡಿ ಎಡವಟ್ಟು ಮಾಡಿದ್ದಾರೆ. ಅದನ್ನು ತಕ್ಷಣವೇ ತಿದ್ದುಪಡಿ ಮಾಡಿಕೊಡದ ಕಾರಣ ವಿದ್ಯಾರ್ಥಿಗೆ ನಿಗಧಿತ ಅವಧಿಯೊಳಗೆ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಆಗದೆ ಪರದಾಡುವ ಸ್ಥಿತಿ ಒದಗಿ ಬಂದಿದೆ.
ಇಂತಹ ಅನೇಕ ಪ್ರಕರಣಗಳು ಇದ್ದು ಕೆ. ವೈ. ಬಿದರಿಯವರ ಕರ್ತವ್ಯ ನಿರ್ಲಕ್ಷ್ಯದಿಂದ ತೊಂದರೆಗೆ ಒಳಗಾದ ಸಾರ್ವಜನಿಕರು ಪ್ರತಿದಿನ ಶಾಸಕರ ಕಛೇರಿಯಲ್ಲಿ ದೂರು ನೀಡುತ್ತಿದ್ದಾರೆ. ಆದ್ದರಿಂದ ಅವರ ಮೇಲೆ ಕ್ರಮ ಜರುಗಿಸುವಂತೆ ತಹಶೀಲ್ದಾರ್ ಶಿವಾನಂದ ಉಳ್ಳೇಗಡ್ಡಿಯವರಿಗೆ ಶಾಸಕರು ಸೂಚಿಸಿದರು.
ಜನಸಾಮಾನ್ಯರಿಂದ ವಿವಿಧ ಸವಲತ್ತುಗಳಿಗೆ ಹಾಕಿದ ಅರ್ಜಿಗಳು ಒಂದು ವರ್ಷದಿಂದ ಪೆಂಡಿಂಗ್ ಇರುವುದನ್ನು ಗಮನಿಸಿ ಶಾಸಕಿ ದುರ್ಗಾ ರೂಪ ತಾಳಿದ ಪ್ರಸಂಗ ನಡೆಯಿತು. ಡೆಪ್ಯೂಟಿ ತಹಸಿಲ್ದಾರ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿ ಜನರು ಎಡತಾಕುವಂತೆ ಮಾಡಲಾಗಿದೆ. ಅರ್ಜಿಗಳು ವಿಲೇವಾರಿ ಆಗದೇ ಕಛೇರಿಯಲ್ಲಿ ಕಸ ತಿನ್ನುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರದ ನಿಯಮದಂತೆ ಅರ್ಜಿಗಳ ಪಟ್ಟಿ ನೀಡಿಯೂ ಸುಮಾರು ಒಂದು ವರ್ಷದಿಂದ ಯಾವುದೇ ಪ್ರತಿಕ್ರಿಯೆ ಆಗದೆ ಕಾಲಹರಣ ಮಾಡಿ, ಕ್ಯಾರೇ ಎನ್ನದ ಅಧಿಕಾರಿಗಳಿಗೆ ಶಾಸಕಿ ಚಳಿ ಬಿಡಿಸಿದರು.
ಇನ್ನೂ ಈ ಪೆನ್ ಷನ್ ಗಳ ಯೋಗ್ಯ ವಿಲೇವಾರಿ ಯಾಕೆ ಆಗಿಲ್ಲ ಎಂದು ವಿಚಾರಿಸಿದರೆ ನಾನು ಜೂನ್ ತಿಂಗಳಲ್ಲಿ ಬಂದೆ, ಇದರ ಮೊದಲು ಇರಲಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟು ಇನ್ನಷ್ಟು ಶಾಸಕರು ಕೆಂಡಾ ಮಂಡಲವಾಗುವ ಪ್ರಸಂಗ ನಡೆಯಿತು. ನಂತರ ಈ ವಿಷಯಕ್ಕೆ ಸಂಬಂಧಿಸಿದ ಇನ್ನೊಬ್ಬ ಮಹಿಳಾ ಅಧಿಕಾರಿಯೊಬ್ಬರನ್ನು ವಿಚಾರಿಸಿದರೆ ಒಂದು ತಿಂಗಳು ರಜೆ ಮೇಲೆ ಇದ್ದೆ. ಅದಕ್ಕೆ ಕೆಲಸ ಆಗಿಲ್ಲ ಎಂಬ ಬೇಜವಾಬ್ದಾರಿ ಉತ್ತರದಿಂದ ಶಾಸಕರು ಇವರ ಕಾರ್ಯ ವೈಖರಿಗೆ ಸಹನೆ ಮೀರುವಂತಾಯಿತು.
ಇಂಥ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಇದನ್ನು ಗಮನಿಸಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಎಲ್ಲರನ್ನೂ ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ಆಗ ತಹಸಿಲ್ದಾರ ಶಿವಾನಂದ ಉಳ್ಳಾಗಡ್ಡಿ ಅವರ ಅಸಹಾಯಕ ಸ್ಥಿತಿ ಎದ್ದು ಕಾಣುತ್ತಿತ್ತು.
ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ ಅಂದ್ರೆ ತಾಲೂಕು ಬಿಟ್ಟು ತೊಲಗಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಸಮಯಪಾಲನೆ ಇಲ್ಲದ ಗ್ರೇಡ್ 2 ತಹಶೀಲ್ದಾರರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದರು. ತಹಸಿಲ್ದಾರ ಶಿವಾನಂದ ಉಳ್ಳೇಗಡ್ಡಿ ಅವರು ಕೂಡಾ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ಮೊತಿಲಾಲ್ ಪವಾರ ಸೇರಿದಂತೆ ಕಾರ್ಯಾಲಯದ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ