Belagavi NewsBelgaum News

*ಸ್ವ-ಸಹಾಯ ಗುಂಪಿನ ಹಾಗೂ ಖಾದಿ ಉತ್ಪನ್ನಗಳನ್ನು ಖರೀದಿಸಿ ಬೆಂಬಲಿಸಲು ಶಾಸಕ ಆಸೀಫ್ ಸೇಠ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಡಿ.26 ರಿಂದ ಜ. 4 ರವರೆಗೆ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮತ್ತು ಖಾದಿ ಉತ್ಪನ್ನಗಳ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ಹಾಗೂ ಖಾದಿ ಉತ್ಪನ್ನಗಳನ್ನು ಖರೀದಿಸಿ ಬೆಂಬಲಿಸಲು ಶಾಸಕರಾದ ಆಸೀಫ್(ರಾಜು) ಸೇಠ್ ಅವರು ಸಾರ್ವಜನಕರಲ್ಲಿ ಮನವಿ ಮಾಡಿದರು. 

ನಗರದ ಸರ್ದಾರ್ ಹೈಸ್ಕೂಲ ಮೈದಾನದಲ್ಲಿ ಸೋಮವಾರ (ಡಿ.30) ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಡಿ.26 ರಿಂದ ಪ್ರಾರಂಭವಾಗಿರುವ ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಸ್ವ-ಸಹಾಯ ಗುಂಪಿನ ಮತ್ತು ಖಾದಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಡಿ. 26 ರಿಂದ ಡಿ.29 ರ ವರೆಗೆ (4 ದಿನಗಳಲ್ಲಿ) ಒಟ್ಟು ರೂ. 50.67 ಲಕ್ಷ ಮಹಿಳಾ ಸ್ವ-ಸಹಾಯ ಗುಂಪಿನ ಉತ್ಪನ್ನಗಳು ಮತ್ತು ರೂ. 50.06 ಲಕ್ಷ ಖಾದಿ ಉತ್ಪನ್ನಗಳು ಮಾರಾಟವಾಗಿದ್ದು, ಒಟ್ಟಾರೆ ರೂ. 100.73 ಲಕ್ಷ ಗಳ ಮಾರಾಟದ ದಾಖಲೆಯಾಗಿರುತ್ತದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸುತ್ತಿದ್ದು, ಒಟ್ಟು 150 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನಗಳ ಮಳಿಗೆಗಳನ್ನು ಒಳಗೊಂಡಿದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ದಿನಾಂಕ: 04.01.2025 ರವರೆಗೆ ಪ್ರತೀ ದಿನ ಬೆಳಿಗ್ಗೆ 10.30 ಯಿಂದ ರಾತ್ರಿ 9.30 ರವರೆಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಹಾಗೂ ಖಾದಿ ಉತ್ಪನ್ನಗಳಿಗೆ ಬೆಂಬಲ ನೀಡುವಂತೆ ಶಾಸಕರಾದ ಆಸೀಫ್ (ರಾಜು) ಸೇಠ್ ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ ರಾಜ್ಯದಲ್ಲಿ ಅಭಿಯಾನದಡಿ 2.79 ಲಕ್ಷ ಸ್ವ-ಸಹಾಯ ಗುಂಪುಗಳಡಿ 29.66 ಲಕ್ಷ ಕುಟುಂಬಗಳನ್ನು ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನದಡಿ ಹಾಗೂ 45 ಸಾವಿರ ಸ್ವ-ಸಹಾಯ ಗುಂಪುಗಳಡಿ 4.50 ಲಕ್ಷ ಕುಟುಂಬಗಳನ್ನು ನಗರ ಅಭಿಯಾನದಡಿ ಸಂಘಟಿಸಲಾಗಿದ್ದು, ಪ್ರತಿಯೊಬ್ಬ ಮಹಿಳೆಯು ಸ್ವಾವಲಂಬನೆಯ ಬದುಕಿನೊಂದಿಗೆ ತನ್ನ ಕುಟುಂಬವನ್ನು ಆರ್ಥಿಕ ಸಬಲತೆಯತ್ತ ಕೊಂಡೊಯ್ಯುವಲ್ಲಿ ಅನುಕೂಲವಾಗಲು ಪಂಚಾಯತಿ, ಎಲ್ಲಾ ತಾಲೂಕು, ಜಿಲ್ಲೆ, ವಿಭಾಗ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ರೀತಿಯ ಮೇಳಗಳನ್ನು ಏರ್ಪಡಿಸಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ದಿನಾಂಕ: 02.01.2025 ಹಾಗೂ 03.01.2025  ರಂದು ಮೇಳದ ವೇದಿಕೆಯಲ್ಲಿ ಸಾಯಂಕಾಲ 06:30 ರಿಂದ ರಾತ್ರಿ 09:00 ರ ವರೆಗೆ  ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ದಿನಾಂಕ: 02.01.2025 ರಂದು ಸವಾರಿ ಬ್ಯಾಂಡ್ ಬೆಂಗಳೂರು ಹಾಗೂ 03.01.2025 ರಂದು ಸ್ಟ್ಯಾಕೇಟೊ ಕೆಫೆ ರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ. ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿರುವ ಸತತ 4ನೇ ವರ್ಷದ ಈ ಮೇಳದಲ್ಲಿ ಪ್ರಮುಖವಾಗಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳು ಮತ್ತು ಖಾದಿ ಉತ್ಪನ್ನಗಳು ಮಾರಾಟ ಮಾಡುತ್ತಿರುವುದರಿಂದ ಹೆಚ್ಚು ಹೆಚ್ಚು ಸಾರ್ವಜನಿಕರು ಈ ಮೇಳದ ಸದುಪಯೋಗವನ್ನು ಪಡೆದುಕೊಂಡು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಹಾಗೂ ಖಾದಿ ಉತ್ಪನ್ನಗಳ ಮಾರಾಟಕ್ಕೆ ಬೆಂಬಲಿಸಲು ರಾಹುಲ ಶಿಂಧೆ ಅವರು ಕೋರಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಮುಖ್ಯ ಹಣಕಾಸು ಅಧಿಕಾರಿ ಶ್ರೀನಿವಾಸ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು

ಮೇಳದಲ್ಲಿನ ಅತ್ಯಾಕರ್ಷಕ ಉತ್ಪನ್ನಗಳು

ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಇಳಕಲ್ ಸೀರೆಗಳು, ಕೊಪ್ಪಳದ ಬಾಳೆ ನಾರಿನ ಉತ್ಪನ್ನಗಳು, ಉತ್ತರಕನ್ನಡದ ಚಿತ್ತಾರ ಕಲೆ ಉತ್ಪನ್ನಗಳು, ಚಿಕ್ಕಬಳ್ಳಾಪುರ ಚರ್ಮದಿಂದ ತಯಾರಿಸಿದ ವಿವಿಧ ವಿನ್ಯಾಸದ ಅಲಂಕಾರಿಕ ದೀಪಗಳು, ವಿಜಯನಗರ ಕಂಬಳಿ ಮತ್ತು ಢಮರು, ರಾಯಚೂರಿನ ಮುತ್ತಿನಹಾರ, ಶಿವಮೊಗ್ಗ ಮಣಿಸರಗಳು, ಬೀದರ ಬಿದರಿ, ಸಂಡೂರ ಲಂಬಾಣಿ ಉತ್ಪನ್ನಗಳು, ಮೈಸೂರು ಇನ್–ಲೇ, ನವಲಗುಂದ ಧರಿ ಹಾಗೂ ರೇಮ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ವಿವಿಧ ವಿನ್ಯಾಸದ  ಬ್ಯಾಗ್ ಗಳು ಮತ್ತು ಗೃಹಾಲಂಕಾರಿಕ ವಸ್ತುಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ.

ಖಾದಿ ಮಳಿಗೆಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಖಾದಿ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದೆ. ಪ್ರಮುಖವಾಗಿ ಬೆಳಗಾವಿಯ ಸಂಕೇಶ್ವರದ ಕಂಬಳಿಗಳು, ಬಳ್ಳಾರಿ ಜೀನ್ಸ್, ಗದಗ-ಬೆಟಗೇರಿ, ಜಮಖಂಡಿ, ಧಾರವಾಡ, ವಿಜಯಪುರ ಪ್ರಸಿದ್ಧ ಖಾದಿ ಉತ್ಪನ್ನಗಳು, ಮೈಸೂರು ಚಾಪೆ, ಬಿಹಾರ ಮತ್ತು ಉತ್ತರ ಪ್ರದೇಶ ಖಾದಿ ವಸ್ತ್ರಗಳು, ಕಾಶ್ಮೀರ ಸೀರೆಗಳು, ರೇಮ್ಮೆ ಜಾಕೇಟ್ ಗಳು, ಆಂಧ್ರಪ್ರದೇಶದ ಕರಕುಶಲ ವಸ್ತುಗಳು ಸೇರಿದಂತೆ ಮಕ್ಕಳು, ಯುವಕ/ ಯುವತಿಯರು, ಮಹಿಳೆಯರು, ವಯಸ್ಕರರು ಹಾಗೂ ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರ ಅಳತೆಗನುಗುಣವಾಗಿ ವಿವಿಧ ವಿನ್ಯಾಸದ ಸಿದ್ಧ ಉಡುಪುಗಳು ಲಭ್ಯವಿವೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button