Kannada NewsKarnataka News

ಕಂದಾಯ ಗ್ರಾಮ ನಿವೇಶನ ಮಂಜೂರಾತಿ ಪ್ರಮಾಣ ಪತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ


ಪ್ರಗತಿವಾಹಿನಿ ಸುದ್ದಿ, ಗೋಕಾಕ : ಮಜರೆ ಗ್ರಾಮದಿಂದ ಕಂದಾಯ ಗ್ರಾಮಗಳಾಗಿ ಮಾರ್ಪಟ್ಟಿರುವ ಗ್ರಾಮಗಳಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹಕ್ಕುಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ತಳಕಟ್ನಾಳ, ಸುಣಧೋಳಿ, ತಪಸಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಕಪರಟ್ಟಿ, ಖಂಡ್ರಟ್ಟಿ, ನಿಂಗಾಪೂರ ಮತ್ತು ಹೊನಕುಪ್ಪಿ ಗ್ರಾಮಗಳ ಫಲಾನುಭವಿಗಳಿಗೆ ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಇನ್ನು ಮುಂದೆ ಆಯಾ ಗ್ರಾಮಗಳ ಫಲಾನುಭವಿಗಳ ಹೆಸರಿನಲ್ಲಿ ಮನೆಗಳ ದಾಖಲಾತಿ ಮಾಡಲಾಗುತ್ತಿದೆ. ದಾಖಲಾಗದ ವಾಸಿಸುವ ಸ್ಥಳಗಳಲ್ಲಿರುವ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಮತ್ತು ಅದಕ್ಕೆ ನಿಕಟದಲ್ಲಿ ತಾಗಿಕೊಂಡಿರುವ ನಿವೇಶನ ಸಹಿತವಾಗಿ ವಾಸದ ಮನೆಯ ಭೂಮಿಯನ್ನು ಸಕ್ರಮಗೊಳಿಸುವ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ರಾಮದುರ್ಗ ಪಟ್ಟಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಜಿಲ್ಲೆಯಲ್ಲಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದರು. ಎಪ್ರೀಲ್ ತಿಂಗಳಲ್ಲಿ ಕಪರಟ್ಟಿ ಕೆರೆಯನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಕ್ಕು ಪತ್ರಗಳನ್ನು ಪಡೆದುಕೊಂಡವರು ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿ ಆಶೀರ್ವದಿಸಬೇಕು. ಆರನೇ ಬಾರಿಗೆ ವಿಧಾನಸಭೆ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮೂಲಕ ನಿಮ್ಮೆಲ್ಲರ ಸೇವೆಗೆ ಅಣಿಯಾಗುತ್ತೇನೆ ಎಂದು ಇದೇ ಸಂದರ್ಭದಲ್ಲಿ ಶಾಸಕರು ಹೇಳಿದರು.
ಈ ಮೊದಲು ತಳಕಟ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದ ಕಪರಟ್ಟಿ, ಖಂಡ್ರಟ್ಟಿ ಗ್ರಾಮಗಳಿಗೆ ೨೬೯, ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಂಗಾಪೂರ ಗ್ರಾಮದ ೬೫ ಮತ್ತು ಸುಣಧೋಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನಕುಪ್ಪಿ ಗ್ರಾಮದ ೧೦೪ ಮತ್ತು ಯಾದವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಾನೋಮ್ಮಿ ಗ್ರಾಮದ ೭೬ ಫಲಾನುಭವಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹಕ್ಕುಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಲಕ್ಷ್ಮಣ ಮಸಗುಪ್ಪಿ, ತಳಕಟ್ನಾಳ ಗ್ರಾಪಂ ಅಧ್ಯಕ್ಷೆ ಪಾರ್ವತಿ ಬಡಿಗವಾಡ, ಕಂದಾಯ ನಿರೀಕ್ಷಕರಾದ ಸುಂದರ ಪೂಜೇರಿ, ಎಸ್.ಬಿ. ಹೊಸಮನಿ, ಮುಖಂಡರಾದ ಬಸವರಾಜ ನಾಯ್ಕ, ರಾಮಲಿಂಗ ಹಳ್ಳಿ, ಮುತ್ತೆಪ್ಪ ಇಟ್ಟಪ್ಪಗೋಳ, ಸಿದ್ದಪ್ಪ ಹಳ್ಳಿ, ಶ್ರೀಕಾಂತ ಕೌಜಲಗಿ, ಲಕ್ಕಪ್ಪ ನಾಯ್ಕ, ಬಸು ಕಂಕಣವಾಡಿ, ಯಲ್ಲಪ್ಪ ಇಟ್ಟಪ್ಪಗೋಳ, ಮಾರುತಿ ಕಟ್ಟಿಕಾರ, ಲಕ್ಷ್ಮಣ ಇಟ್ಟಪ್ಪಗೋಳ, ಬಸು ಬೈಲಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

https://pragati.taskdun.com/attention-electricity-bill-payers/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button