ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – 2.90 ಕೋಟಿ ರೂ. ವೆಚ್ಚದ ಬಸವ ಏತ ನೀರಾವರಿ ಯೋಜನೆಯನ್ನು ಶಾಸಕ ಗಣೇಶ ಹುಕ್ಕೇರಿ ಶುಕ್ರವಾರ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಅಡಿ ನಬಾರ್ಡ್ ಯೋಜನೆಯಲ್ಲಿ ಏತ ನೀರಾವರಿ ಯೋಜನೆ ಮಂಜೂರಾಗಿತ್ತು. ಸುಮಾರು 60 ರೈತ ಕುಟುಂಬಗಳ 100 ಎಕರೆ ಜಮೀನಿಗೆ ನೀರಾವರಿ ಒದಗಿಸುವ ಯೋಜನೆ ಇದಾಗಿದೆ. ಒಟ್ಟೂ 19 ಕಿಮೀ ಉದ್ದದ ಈ ಯೋಜನೆ 3 ಕಡೆ ಲಿಫ್ಟ್ ಹೊಂದಿದೆ. ಒಂದೊಂದು ಲಿಫ್ಟ್ ನಲ್ಲಿ 10 ಎಚ್ ಪಿಯ 3ರಂತೆ ಮೋಟಾರ್ ಅಳವಡಿಸಲಾಗಿದೆ.
ನೀರಾವರಿ ಯೋಜನೆಗಳಿಗೆ ಕ್ಷೇತ್ರದಲ್ಲಿ ಆದ್ಯತೆ ನೀಡಲಾಗುತ್ತಿದೆ. ರೈತರು ಶ್ರಮಜೀವಿಗಳಾಗಿದ್ದು ಅವರು ಬೆಳೆದರೆ ಮಾತ್ರ ದೇಶ ಊಟ ಮಾಡಲು ಸಾಧ್ಯವಿದೆ. ಹಾಗಾಗಿ ರೈತರಿಗೆ ಎಲ್ಲ ಸೌಲಭ್ಯ ಒದಗಿಸಿಕೊಡಲು ಹಿಂದಿನಿಂದಲೂ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಗಣೇಶ ಹುಕ್ಕೇರಿ ಹೇಳಿದರು.
ನೀರಾವರಿ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ರೈತರು ಸ್ವಾವಲಂಬಿಗಳಾಗಲು ನೀರಾವರಿ ಅತ್ಯಂತ ಪ್ರಮುಖವಾಗಿದೆ. ಹಾಗಾಗಿ ಈ ಯೋಜನೆಯನ್ನು ಮಂಜೂರು ಮಾಡಿಸಲಾಗಿದೆ ಎಂದು ಅವರು ತಿಳಿಸಿದರು.
ಚಿಂಚಣಿ ಸಿದ್ಧ ಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ಕರೆಪ್ಪಗೋಳ, ವಿವೇಕ ಅಣ್ಣಾಸಾಬ್ ಪಾಟೀಲ, ಬಸವರಾಜ ಬಾಳಗೌಡ ಪಾಟೀಲ, ರಾಮಗೌಡ ಈರಗೌಡ ಸೋಮಣ್ಣವರ್, ದತ್ತಾತ್ರಯ ಗುರವ್, ಕುಮಾರ ಪವಾರ, ಏತನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ