ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನರೇಗಾ ಯೋಜನೆ ಹಾಗೂ ಇಟ್ಟಿಗೆ ಬಟ್ಟಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಪಡುತ್ತಿರುವ ಕಷ್ಟ ಮತ್ತು ಅವರ ಕೌಟುಂಬಿಕ ಸಮಸ್ಯೆಗಳನ್ನು ಕಂಡು, ಕೇಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಕ್ಷರಶಃ ಕಣ್ಣೀರಾದರು.
ದೇಸೂರ್ ಪ್ರದೇಶಕ್ಕೆ ಭೇಟಿ ನೀಡಿದ ಲಕ್ಷ್ಮಿ ಹೆಬ್ಬಾಳಕರ್, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಸುಮಾರು 350ಕ್ಕೂ ಹೆಚ್ಚಿನ ಮಹಿಳೆಯರನ್ನು ಭೇಟಿಮಾಡಿ ಸಂವಾದ ನಡೆಸಿದರು. ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಕೌಟುಂಬಿಕ ಪರಿಸ್ಥಿತಿಗಳನ್ನು ಆಲಿಸಿದರು. ಕೆಲಸ ಸ್ಥಳದಲ್ಲಿ ಅವರಿಗೆ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ದೇಸೂರ್ ಪ್ರದೇಶದಲ್ಲಿ ಈ ಮೊದಲು 3 ಅಡಿ ಭೂಮಿಯನ್ನು ಅಗೆಯಲು ನಿರ್ಧರಿಸಲಾಗಿತ್ತು. ಈ ಪ್ರದೇಶದಲ್ಲಿ ಭೂಮಿ ಬಹಳ ಗಟ್ಟಿಯಾಗಿರುವದರಿಂದ ಈಗ ಅದನ್ನು 2 ಅಡಿಗೆ ಸೀಮಿತಗೊಳಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಲಕ್ಷ್ಮಿ ಹೆಬ್ಬಾಳಕರ್, ಅವುಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು.
ನಂತರ ಇಟ್ಟಿಗೆಗಳ ಬಟ್ಟಿಗೆ ತೆರಳಿ ಅಲ್ಲಿಯೂ ಮಹಿಳೆಯರು ಪಡುವಪಾಡನ್ನು ಹತ್ತಿರದಿಂದ ನೋಡಿದರು. ಈ ಮಹಿಳೆಯರಿಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಶಾಸಕರು ಬಂದು ತಮ್ಮ ಕಷ್ಟಗಳನ್ನು ಆಲಿಸಿದ್ದಕ್ಕೆ ಕಾರ್ಮಿಕ ಮಹಿಳೆಯರು ಖುಷಿಯಾಗಿ, ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಲಕ್ಷ್ಮಿ ಹೆಬ್ಬಾಳಕರ್ ಗಿಡವೊಂದನ್ನು ನೆಟ್ಟು ಪರಿಸರದ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸ್ನೇಹಾ ಕುಂಬಾರ, ಸಂತೋಷ ಮರಗಾಳಿ, ಸತೀಶ್ ಚವ್ಹಾಣ, ಗಣಪತ್ ಪಾಟೀಲ, ಸಂಕೇತ ಪಾಟೀಲ, ವಿದ್ಯಾ ಮನವಾಡಕರ್, ನಿಖಿತಾ ಸುತಾರ, ಕವಿತಾ ಗುರವ, ಭರಮಾ ಸುತಾರ, ಶೋಭಾ ನಂದ್ಯಾಳಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ